ಬರಹ: ಯತೀಶ್ ಉಪ್ಪಳಿಗೆ
ಪುತ್ತೂರು:ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ, ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಜಾರಿಯಾಗಿ ಒಂದು ವರ್ಷ ಪೂರೈಸಿದೆ.ಒಂದು ವರ್ಷದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 3.66ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು ಇದರಿಂದ ನಿಗಮಕ್ಕೆ ರೂ.119.83 ಕೋಟಿ ಆದಾಯದೊಂದಿಗೆ ‘ಶಕ್ತಿ’ ದೊರೆತಂತಾಗಿದೆ.
ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಥಮವಾಗಿ ಶಕ್ತಿ ಯೋಜನೆಗೆ 2023ರ ಜೂ.11ರಂದು ರಾಜ್ಯದಾದ್ಯಂತ ಅಧಿಕೃತ ಚಾಲನೆ ನೀಡಲಾಗಿತ್ತು.ಯೋಜನೆ ಜಾರಿಯಾದ ಬಳಿಕದ ಒಂದು ವರ್ಷದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಐದು ಘಟಕಗಳ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆಯ ಮೂಲಕ 3.57 ಕೋಟಿ ಮಹಿಳೆಯರು ಮತ್ತು 8.21 ಲಕ್ಷ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 3.66 ಕೋಟ ಮಹಿಳಾ ಪ್ರಯಾಣಿಕರು ಉಚಿತ ಟಿಕೆಟ್‌ನಲ್ಲಿ ನಿಗಮದ ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.ಪುತ್ತೂರು ವಿಭಾಗದ ಪುತ್ತೂರು ಘಟಕದಲ್ಲಿ 1.12 ಕೋಟಿ, ಧರ್ಮಸ್ಥಳ ಘಟಕದಲ್ಲಿ 76.84 ಲಕ್ಷ, ಮಡಿಕೇರಿ ಘಟಕದಲ್ಲಿ 55.95 ಲಕ್ಷ, ಬಿ.ಸಿ.ರೋಡ್ ಘಟಕದಲ್ಲಿ 71.98 ಲಕ್ಷ ಹಾಗೂ ಸುಳ್ಯ ಘಟಕದಲ್ಲಿ 48.56 ಲಕ್ಷ ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೂ.119.83 ಕೋಟಿ ಆದಾಯ:
ಪುತ್ತೂರು ವಿಭಾಗದ ಐದು ಘಟಕಗಳ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಽಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ.119,83,51,956 ಆಗಿದೆ.ಶಕ್ತಿ ಯೋಜನೆ ಮೂಲಕ ಪುತ್ತೂರು ಘಟಕದಲ್ಲಿ ರೂ.24.96 ಕೋಟಿ, ಧರ್ಮಸ್ಥಳ ಘಟಕದಲ್ಲಿ ರೂ.37.45 ಕೋಟಿ, ಮಡಿಕೇರಿ ಘಟಕದಲ್ಲಿ ರೂ.22.23 ಕೋಟಿ, ಬಿ.ಸಿ.ರೋಡ್ ಘಟಕದಲ್ಲಿ ರೂ.20.65 ಕೋಟಿ ಹಾಗೂ ಸುಳ್ಯ ಘಟಕದಲ್ಲಿ ರೂ.14.53 ಕೋಟಿ ಆದಾಯ ಸಂಗ್ರಹವಾಗಿದೆ.ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿ 100 ಮಂದಿ ಪ್ರಯಾಣಿಕರಲ್ಲಿ ಶೇ.52 ಮಹಿಳೆಯರು ಹಾಗೂ ಶೇ.48 ಮಂದಿ ಪುರುಷರಾಗಿದ್ದಾರೆ.ಈ ಹಿಂದೆ ಪಾಸ್‌ಗಳ ಮೂಲಕ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರೂ ಈಗ ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.ಆದರೆ ವಿದ್ಯಾರ್ಥಿನಿಯರು ಪ್ರಯಾಣಿಸುವ ಅಂತರ ಕಡಿಮೆಯಾಗಿದೆ.ಪುರುಷರು ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದು ಟಿಕೆಟ್ ಮೊತ್ತ ಶೇ.54ರಷ್ಟು ಆಗಿದೆ.ಶಕ್ತಿ ಯೋಜನೆಯಲ್ಲಿ ಟಿಕೆಟ್‌ನ ಮೊತ್ತ ಶೇ.46ರಷ್ಟು ಆಗಿದೆ.
ಪ್ರತಿದಿನ 30,000 ಪ್ರಯಾಣಿಕರ ಏರಿಕೆ:
ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.ಈಗ ಪ್ರತಿದಿನ 1.90 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.ಇದರಲ್ಲಿ 1 ಲಕ್ಷ ಮಹಿಳಾ ಪ್ರಯಾಣಿಕರೇ ಆಗಿರುತ್ತಾರೆ.ಶಕ್ತಿ ಯೋಜನೆಯ ಬಳಿಕ ಪ್ರತಿದಿನ ಸರಾಸರಿಯಾಗಿ 30,000 ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.ಈ ಯೋಜನೆಯಿಂದಾಗಿ ವಾರಾಂತ್ಯದಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಸುಬ್ರಹ್ಮಣ್ಯದಿಂದ ವಿವಿಧ ಪ್ರದೇಶಗಳಿಗೆ ಕನಿಷ್ಠ 25 ಬಸ್‌ಗಳು ಹೆಚ್ಚುವರಿಯಾಗಿ ಕಾರ್ಯಾಚರಿಸಿದೆ.
ಸುಬ್ರಹ್ಮಣ್ಯಕ್ಕೆ ಪ್ರತ್ಯೇಕ ಘಟಕದ ಅವಶ್ಯಕತೆ:
ಶಕ್ತಿ ಯೋಜನೆ ಜಾರಿಯಾದ ಬಳಿಕ ತೀರ್ಥಕ್ಷೇತ್ರ ಸುಬ್ರಹ್ಮಣ್ಯಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.ಸರಕಾರಿ ರಜಾದಿನ, ಶಾಲಾ ರಜಾ ದಿನ ಹಾಗೂ ವಾರಾಂತ್ಯದಲ್ಲಿ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಪ್ರಸ್ತುತ ಅಲ್ಲಿ ಘಟಕ ಇಲ್ಲದೇ ಇದ್ದು ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ತಕ್ಷಣ ಬಸ್ ಸೌಲಭ್ಯ ಒದಗಿಸುವುದು ಅಸಾಧ್ಯವಾಗುತ್ತಿದೆ.ಸುಬ್ರಹ್ಮಣ್ಯದಲ್ಲಿ ಪ್ರತ್ಯೇಕ ಘಟಕ ಸ್ಥಾಪನೆಯಾದರೆ ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಬಸ್ ಕಾರ್ಯಾಚರಣೆ ಮಾಡಲು ಸಾಧ್ಯವಿದ್ದು ಇಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಬೇಕಾದ ಅನಿವಾರ್ಯತೆಯಿದೆ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಯವರು ತಿಳಿಸಿದ್ದಾರೆ.
ಶಕ್ತಿ ಯೋಜನೆಯನ್ನು ಪುತ್ತೂರು ವಿಭಾಗದ ಐದು ಘಟಕಗಳಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ.ಮಹಿಳೆಯರು, ವಿದ್ಯಾರ್ಥಿನಿಯರು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.ಈ ಯೋಜನೆಯು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ.ವಾರಾಂತ್ಯದಲ್ಲಿ ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಹೆಚ್ಚುವರಿ ಬಸ್‌ಗಳು ಕಾರ್ಯಾಚರಿಸಿವೆ.ಸಿಬ್ಬಂದಿಗಳ ಕೊರತೆಯ ಮಧ್ಯೆಯೂ ಜನರಿಗೆ ಉತ್ತಮ ಸೇವೆ ನೀಡಲಾಗಿದೆ
-ಜಯಕರ ಶೆಟ್ಟಿ,ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು