ಬಲೇ ಉಬೆರ್ ಮೀನು ಪತ್ತುಗ-ಟಾರ್ಚ್ ಲೈಟ್ ಬೆಳಕಲ್ಲಿ ತುಳುವರ ಮೀನು ಶಿಕಾರಿ

0


ಅಂತೂ ಇಂತು ಮುಂಗಾರು ಮಳೆ ಭೂಮಿಗೆ ಬಿದ್ದು ಭೂಮಿಯಲ್ಲಿ ಒಸರು ತುಂಬಿಕೊಂಡುಬಿಟ್ಟಿದೆ. ಬರಡಾದ ಭೂಮಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದಂತೆ ರೈತರ ಬೇಸಾಯದ ಕೆಲಸ ಕೂಡ ಆರಂಭವಾಗಿದ್ದು ಭತ್ತದ ಬಿತ್ತನೆ ಕೆಲಸಕ್ಕೆ ಗದ್ದೆ ತಯಾರು ನಡೆದಿದೆ. ಹಗಲಿಡೀ ಗದ್ದೆ, ತೋಟದ ಕೆಲಸದಲ್ಲಿ ನಿರತರಾಗಿರುವ ತುಳುವರು ರಾತ್ರಿಯಾಗುತ್ತಿದ್ದಂತೆ ಮೀನುಗಳ ಬೇಟೆಗೆ ಹೊರಡುತ್ತಾರೆ. ಅದರಲ್ಲೂ ಏಡಿ ಶಿಕಾರಿ ತುಳುನಾಡಿನ ವಿಶೇಷತೆಯಲ್ಲೊಂದಾಗಿದೆ. ಮಳೆ ಆರಂಭವಾಗಿ ಎಲ್ಲಾ ಕಡೆಗಳಲ್ಲಿ ನೀರಿನ ಒಸರು ಆಗಿ ತೋಡು, ಕಣಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವ ಸಮಯದಲ್ಲಿ ಈ ಬೇಟೆ ನಡೆಯುತ್ತದೆ. ನಾಲೈದು ಮಂದಿ ರಾತ್ರಿಯ ಹೊತ್ತಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ಏಡಿ, ಮೀನುಗಳ ಬೇಟೆ ಮಾಡುತ್ತಾರೆ. ಇದನ್ನು ತುಳುವಿನಲ್ಲಿ ‘ಉಬೆರ್ ಮೀನ್ ಕಡ್‌ಪುನ’ ಅಥವಾ ‘ಉಬೆರ್ ಗುದ್ದುನ’ ಎನ್ನುತ್ತಾರೆ. ಈ ಉಬೆರ್ ಮೀನು ಸಿಕ್ಕಿದ ದಿನ ತುಳುವರ ಮನೆಯಲ್ಲಿ ಹಬ್ಬದೂಟವೇ ನಡೆಯುತ್ತದೆ.


ಏನಿದು ಉಬೆರ್ ಮೀನು ಶಿಕಾರಿ…?
ಬೇಸಿಗೆ ಕಾಲದಲ್ಲಿ ನೀರಿನ ಅಭಾವದಿಂದಾಗಿ ತೋಟಗಳಲ್ಲಿ,ಗದ್ದೆಗಳಲ್ಲಿ, ತೋಡು, ಹಳ್ಳಗಳಲ್ಲಿ ಇದ್ದ ಮೀನುಗಳೆಲ್ಲಾ ನದಿಯನ್ನು ಸೇರುತ್ತವೆ. ಮೀನುಗಳ ಸಂತಾನಾಭಿವೃದ್ಧಿ ಮಳೆಗಾಲದ ಆರಂಭದಲ್ಲಿ ನಡೆಯುತ್ತದೆ. ಅಂದರೆ ಜೂನ್, ಜುಲೈ ತಿಂಗಳಲ್ಲಿ ಹೆಚ್ಚಾಗಿ ಮೀನುಗಳು ಮೊಟ್ಟೆಗಳನ್ನಿಡುತ್ತವೆ. ಮೀನುಗಳು ಸಂತನಾಭಿವೃದ್ಧಿ ಮಾಡಬೇಕಾದರೆ ಅವುಗಳು ಮಿಲನಕ್ಕಾಗಿ ಮಳೆಗಾಲವನ್ನು ಕಾಯುತ್ತಾ ಇರುತ್ತವೆ. ಮಳೆಗಾಲ ಆರಂಭವಾದೊಡನೆ ತೋಡು, ನದಿಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಈ ನೀರಿನ ಮೂಲಕ ಮೀನುಗಳು ಆಟವಾಡುತ್ತಾ, ಮಿಲನ ಹೊಂದುತ್ತಾ ನೀರು ಹರಿಯುವಿಕೆಯ ವಿರುದ್ಧ ದಿಕ್ಕಿಗೆ ಪ್ರಯಾಣ ಬೆಳೆಸುತ್ತವೆ. ಮೀನುಗಳ ಮಿಲನ ಮಹೋತ್ಸವ ಕೂಡ ಹೆಚ್ಚಾಗಿ ರಾತ್ರಿ ಸಮಯದಲ್ಲಿಯೇ ನಡೆಯುತ್ತದೆ. ಹೊಸ ನೀರು ಹೊಳೆ ಸೇರುವಾಗ ಗರ್ಭಿಣಿ ಮೀನುಗಳು ನೀರಿನ ವಿರುದ್ಧ ದಿಕ್ಕಿಗೆ ಈಜಿ ತೋಟ, ಗದ್ದೆಗಳ ಕಡಿಮೆ ನೀರಿನಲ್ಲಿ ಸೇರಿ ಮೊಟ್ಟೆಯನ್ನಿಡುತ್ತವೆ. ತೋಡುಗಳಲ್ಲಿ ನೀರು ಹರಿಯುತ್ತಿದ್ದರೆ ಆ ನೀರಿನಲ್ಲಿ ಈಜುತ್ತಾ ಮೇಲೆ ಮೇಲೆ ಸಾಗುತ್ತವೆ.ಹೀಗೆ ಸಾಗುವ ಮೀನುಗಳನ್ನು ತುಳುನಾಡಲ್ಲಿ ಉಬೆರ್ ಮೀನು ಬಡ್ತುನ ( ಮೀನು ಹತ್ತೋದು) ಎಂದು ಕರೆಯುತ್ತಾರೆ. ಹೀಗೆ ಸಾಗುವ ಮೀನುಗಳನ್ನು ಹಿಡಿಯುವುದು ತುಂಬಾ ಸುಲಭ. ಇದನ್ನೆ ಮೀನುಗಳ ಬೇಟೆ ಅಥವಾ ಶಿಕಾರಿ ಎಂದು ಕರೆಯುತ್ತಾರೆ.

ಮೀನುಗಳನ್ನು ಹೇಗೆ ಹಿಡಿಯುತ್ತಾರೆ ಗೊತ್ತಾ…?
ರಾತ್ರಿ ಸಮಯದಲ್ಲಿ ತುಂತುರು ಮಳೆಯು ಬರುತ್ತಿದ್ದರೆ, ತೋಡುಗಳಲ್ಲಿ ಸ್ವಚ್ಛವಾದ ನೀರು ಕೂಡ ಹರಿಯುತ್ತಿದ್ದರೆ. ಇಂತಹ ಹಿನ್ನೀರಿನಲ್ಲಿ ಮೀನುಗಳು ಗುಂಪು ಗುಂಪಾಗಿ ಮೇಲ್ಮುಖವಾಗಿ ಈಜುತ್ತಾ ಬರುತ್ತವೆ. ಇಂತಹ ಮೀನುಗಳನ್ನು ಹಿಡಿಯಬೇಕಾದರೆ ಸ್ವಲ್ಪ ಮಟ್ಟಿನ ಸಾಹಸವನ್ನೇ ಮಾಡಬೇಕಾಗುತ್ತದೆ. ರಾತ್ರಿ ಸಮಯವಾದ್ದರಿಂದ ಬಹಳ ಎಚ್ಚರದಿಂದ ತೋಡುಗಳಲ್ಲಿ ಹೋಗಬೇಕಾಗುತ್ತದೆ. ಮೂರು ಅಥವಾ ನಾಲ್ಕು ಬ್ಯಾಟರಿಯ ಟಾರ್ಚ್(ಲೈಟ್) ಅಥವಾ ಚಾರ್ಜ್ ಲೈಟ್ ಹಿಡಿದುಕೊಂಡು ತೋಡುಗಳಲ್ಲಿ ಹರಿಯುವ ನೀರಿಗೆ ಲೈಟ್ ಹಾಕಿದರೆ ನಮಗೆ ಮೀನುಗಳು ಈಜಾಡಿಕೊಂಡು ಹೋಗುವುದು ಕಾಣುತ್ತದೆ. ಮೊದಲೇ ಹೇಳಿದಂತೆ ಮೀನುಗಳು ನೀರು ಹರಿಯುವ ವಿರುದ್ಧ ದಿಕ್ಕಿಗೆ ಈಜಾಡುವುದರಿಂದ ಸಾಧಾರಣ ಹರಿತವಾದ ಕತ್ತಿಯಿಂದ ಈ ಮೀನಿನ ಬೆನ್ನಿಗೆ ಅಥವಾ ತಲೆ ಭಾಗಕ್ಕೆ ಪೆಟ್ಟು ಕೊಟ್ಟರೆ ಮೀನು ಸುಲಭದಲ್ಲಿ ಸಿಗುತ್ತದೆ. ಕೆಲವೊಮ್ಮೆ ಮೀನುಗಳಿಗೆ ಸರಿಯಾದ ಪೆಟ್ಟು ಸಿಗದೇ ಇದ್ದರೆ ಅವುಗಳು ಓಡಿ ಹೋಗುವುದು ಕೂಡ ಉಂಟು. ಎರಡು ಜನರಿದ್ದರೆ ಬಹಳ ಸುಲಭದಲ್ಲಿ ಮೀನುಗಳನ್ನು ಹಿಡಿಯಬಹುದು. ಕತ್ತಿ,ಬಲೆ,ಕೂಣಿ( ಕೂರಿ) ಇತ್ಯಾದಿಗಳನ್ನು ಬಳಸಿಯೂ ಹಿಡಿಯಬಹುದಾಗಿದೆ.


ಮುಗುಡು,ಬಾಲೆ,ಕಲ್ಂಬುರ, ಮಡೆಂಜಿ, ಡೆಂಜಿ…
ಉಬೆರ್ ಹತ್ತುವ ಮೀನುಗಳಲ್ಲಿ ಮುಖ್ಯವಾಗಿ ದೊಡ್ಡ ಜಾತಿಯ ಮೀನುಗಳಾದ ಮುಗುಡು, ಬಾಲೆ ಮೀನು, ಮಡೆಂಜಿ, ಕೀಜಾನ್ ಇತ್ಯಾದಿ ಮೀನುಗಳು ಹೆಚ್ಚಾಗಿ ಇರುತ್ತದೆ. ಇದಲ್ಲದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾಧಾರಣ ಗಾತ್ರದ ಕಲ್ಂಬುರ ಎಂಬ ಮೀನುಗಳು ಇರುತ್ತವೆ. ಮೀನು ಶಿಕಾರಿಗೆ ಹೋದವರಿಗೆ ಯಾವುದೇ ಮೀನು ಸಿಗದಿದ್ದರೂ ಕೂಡ ಮೀನುಗಳು ನೀರಿನ ಮೂಲಕ ಹತ್ತುತ್ತಲೇ ಇರುತ್ತದೆ. ಬೆಳಗಾಗುತ್ತಲೇ ಮೊಟ್ಟೆ ಇಟ್ಟು ಮತ್ತೆ ಇಳಿದು ಹೋಗಿ ನದಿಗಳನ್ನು ಸೇರಿಕೊಳ್ಳುತ್ತವೆ. ಕೆಲವೊಮ್ಮೆ ಗುಂಡಿಗಳಲ್ಲಿ ಈ ಮೀನುಗಳು ಸಿಕ್ಕಿ ಹಾಕಿಕೊಳ್ಳುವುದು ಇದೆ. ಇನ್ನು ಏಡಿಗಳು ಹೆಚ್ಚಾಗಿ ಕಾಣಸಿಗುತ್ತವೆ. ಬೇಸಿಗೆ ಕಾಲದಲ್ಲಿ ಬಿಲ ತೋಡಿ ಆದರೊಳಗೆ ಜೀವಿಸುವ ಈ ಏಡಿಗಳು ಮಳೆಗಾಲದಲ್ಲಿ ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಬಿಲದಿಂದ ಹೊರಬಂದು ಆಹಾರಕ್ಕಾಗಿ ಹೊಂಚು ಹಾಕುತ್ತಾ ಕುಳಿತಿರುತ್ತವೆ. ಏಡಿಗಳು ಕೂಡ ಜೂನ್ ತಿಂಗಳಲ್ಲಿ ಮೊಟ್ಟೆಯನ್ನಿಟ್ಟು ಮರಿ ಮಾಡುತ್ತವೆ. ಇವುಗಳನ್ನು ಆತೀ ಜಾಗರೂಕತೆಯಿಂದ ಹಿಡಿಯಬೇಕಾಗುತ್ತದೆ. ಕೆಲವರು ಕತ್ತಿಯ ತುದಿಯಿಂದ ಇದರ ಬೆನ್ನಿಗೆ ಕುಕ್ಕಿ ಹಿಡಿದರೆ, ಮತ್ತೆ ಕೆಲವರು ಜೀವಂತವಾಗಿಯೇ ಹಿಡಿಯುತ್ತಾರೆ.

ಮೀನು ಗಸಿ, ಡೆಂಜಿ ಸುಕ್ಕ..ವಾವ್ ಸೂಪರ್…
ಉಬೆರ್ ಬೇಟೆಯಾಡಿ ಹಿಡಿದ ಮೀನು, ಏಡಿಯ ಪದಾರ್ಥಕ್ಕೆ ತನ್ನದೇ ಆದ ವಿಶೇಷ ರುಚಿ ಇದೆ. ಮುಗುಡು, ಮಡೆಂಜಿ, ಕಲ್ಂಬುರ, ಕೀಜಾನ್ ಇತ್ಯಾದಿ ಮೀನುಗಳನ್ನು ಬೇಟೆಯಾಡಿ ಬಂದ ರಾತ್ರಿಯೇ ಗಸಿ ಮಾಡಬೇಕಾಗುತ್ತದೆ. ಆದರೆ ಎಡಿಗಳನ್ನು ಮರುದಿವಸ ಕೂಡ ಮಾಡಬಹುದು. ಮೀನುಗಳನ್ನು ಪುಳಿ ಮುಂಚಿಯಲ್ಲಿ ಗಸಿ ಮಾಡಿದರೆ ಅದರ ರುಚಿಗೆ ಸಮುದ್ರದ ಮೀನು ಕೂಡ ಸಾಟಿಯಾಗಲಾರದು. ಹಾಗೆ ಕಲ್ಂಬುರ, ಕೀಜಾನ್‌ಗಳನ್ನು ಬಣಲೆಯಲ್ಲಿ ಹಾಕಿ ಫೈ ಮಾಡಿಯೂ ಸವಿಯಬಹುದು. ಇನ್ನು ಏಡಿಗಳನ್ನು ಫ್ರೈ ಮಾಡಿ ಸುಕ್ಕ ಮಾಡಿದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಉಬೆರ್ ಮೀನು ಸಿಕ್ಕಿದ ದಿನ ತುಳುವರ ಮನೆಯಲ್ಲಿ ಹಬ್ಬದೂಟ. ಬಿಸಿ, ಬಿಸಿ ಅನ್ನಕ್ಕೆ, ಅಕ್ಕಿ ರೊಟ್ಟಿಗೆ ಮೀನಿನ ಗಸಿ ಬೆರೆಸಿಕೊಂಡು ಸವಿಯುವುದನ್ನು ನೋಡುವುದೇ ಸೊಗಸು.

LEAVE A REPLY

Please enter your comment!
Please enter your name here