ರೋಟರಿ ಕ್ಲಬ್ ಪುತ್ತೂರುಗೆ ‘ಪ್ಲಾಟಿನಂ ಫ್ಲಸ್’ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು

0

ಶಾಶ್ವತ ಯೋಜನೆಗಳ ಮೂಲಕ ಜನರಿಗೆ ನೆರವಿನ ಹಸ್ತ | ಪುತ್ತೂರಿನ ಹಿರಿಯ ಕ್ಲಬ್ ಹೆಗ್ಗಳಿಕೆ

ಪುತ್ತೂರು: ಸಮಾಜ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಪ್ರತಿಷ್ಠಿತ ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು 2023-24ನೇ ಸಾಲಿನಲ್ಲಿ ಸಲ್ಲಿಸಿದ ಅತ್ಯುತ್ತಮ ಸಮಾಜ ಸೇವೆಗೆ ರೋಟರಿ ಕ್ಲಬ್‌ನ ಅತ್ಯುನ್ನತ ಪ್ರಶಸ್ತಿ ‘ಪ್ಲಾಟಿನಂ ಫ್ಲಸ್’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.


ಅತೀ ಹೆಚ್ಚು ಸದಸ್ಯತ್ವ ನೋಂದಾವಣೆಗೆ ಎಕ್ಸಲೆನ್ಸ್ ಪ್ರಶಸ್ತಿ, ಕ್ಲಬ್‌ನ ಶಾಶ್ವತ ಯೋಜನೆಗಳಿಗೆ ರೋಟರಿ ಕಣ್ಣಿನ ಆಸ್ಪತ್ರೆ ಮೂಲಕ ಮತ್ತೊಂದು ಕೊಡುಗೆ, ಜಿಲ್ಲಾ ಯೋಜನೆಗಳಿಗೆ ರೋಟರಿ ಫೌಂಡೇಶನ್‌ನ ಟಿಆರ್‌ಎಫ್ ಕೊಡುಗೆಗಳಿಗೆ ಜಿಲ್ಲಾ ರಾಜ್ಯಪಾಲರ ವಿಶಿಷ್ಟ ಪ್ರಶಸ್ತಿ, ವಲಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ, ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲಾ ಸಮಗ್ರ ಪ್ರಶಸ್ತಿ, ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.


ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181 ಇದರ ವತಿಯಿಂದ ಮೈಸೂರಿನಲ್ಲಿ ನಡೆದ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ.ರೈ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ಜೊತೆ ಕಾರ್ಯದರ್ಶಿ ದಾಮೋದರ್, ವಲಯ ಸೇನಾನಿ ಝೇವಿಯರ್ ಡಿ’ಸೋಜ, ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ಪ್ರಮುಖರಾದ ರಾಮಕೃಷ್ಣ, ಕೃಷ್ಣಕುಮಾರ್ ರೈ, ಶ್ರೀಧರ್ ಕಣಜಾಲು, ಡಾ.ಜೈದೀಪ್, ಜಗದೀಶ್ ಆಚಾರ್ಯ, ಎಂ.ಜಿ ರೈ ಉಪಸ್ಥಿತರಿದ್ದರು.

ಕ್ಲಬ್ ಸಮುದಾಯ ಸೇವೆ:
ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು ಕ್ಲಬ್‌ನಲ್ಲಿನ 12ಕ್ಕಿಂತಲೂ ಹೆಚ್ಚು ವೈದ್ಯರ ಉಚಿತ ಸೇವೆಯನ್ನು ಸಮಾಜಕ್ಕೆ ನೀಡಿದೆ. ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಚೇತನಾ ಆಸ್ಪತ್ರೆ, ಡಾ.ನಝೀರ್ ಅಹಮದ್ ಡಯಾಬೆಟ್ಸ್ ಸೆಂಟರ್‌ರವರಿಂದ ಪ್ರತಿ ತಿಂಗಳು ಪ್ರತ್ಯೇಕ, ಪ್ರತ್ಯೇಕ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸಿದೆ. ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ನಿರಂತರವಾಗಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸುತ್ತಿದೆ. ಬೀರಮಲೆ ಪ್ರಜ್ಞಾ ಆಶ್ರಮದ ನಿವಾಸಿಗಳಿಗೆ ಪ್ರತಿ ತಿಂಗಳ 13ನೇ ತಾರೀಖಿನಂದು ಉಚಿತ ಫಲಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಕ್ಲಬ್‌ನಿಂದ 6 ಗಾಲಿ ಕುರ್ಚಿ ವಿತರಣೆ, ಕ್ಯಾನ್ಸರ್ ರೋಗಿಯ ಚಿಕಿತ್ಸಾ ವೆಚ್ಚದ ರೂ.1,08,000 ಸಹಾಯಧನ ನೀಡುವಿಕೆ, 250 ಫಲಾನುಭವಿಗಳಿಗೆ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರದ ಆಯೋಜನೆ, ವಿಶ್ವ ಮಧುಮೇಹ ದಿನದ ಪ್ರಯುಕ್ತ ವಾಕಥಾನ್ ಕಾರ್ಯಕ್ರಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರೂ.15 ಸಾವಿರ ಮೊತ್ತದ ಸ್ಯಾನಿಟರಿ ಪ್ಯಾಡ್, ಬರ್ನಿಂಗ್ ಮೆಶಿನ್, ವಾಷಿಂಗ್ ಮೆಷಿನ್ ನೀಡಿದೆ. ಆರು ಮಂದಿ ಫಲಾನುಭವಿಗಳಿಗೆ ರೂ.39 ಸಾವಿರ ಮೊತ್ತದ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡುವಿಕೆ, ಕಬಡ್ಡಿ ಆಟಗಾರ್ತಿಗೆ ಹಾಗೂ ವೈಟ್‌ಲಿಪ್ಟಿಂಗ್ ಆಟಗಾರನಿಗೆ ರೂ.10 ಸಾವಿರ ಹಸ್ತಾಂತರ, ಓಜಾಲ ಶಾಲೆಯ ಈರ್ವರು ಶಿಕ್ಷಕರಿಗೆ ರೂ.1.50 ಲಕ್ಷ ಮೊತ್ತದ ವೇತನ, ಕ್ಷಯ ರೋಗಿಗಳಿಗೆ ರೂ.50 ಸಾವಿರ ಮೊತ್ತದ ಪೋಷಕಾಶಗಳಿರುವ ಆಹಾರದ ವಿತರಣೆ, 150 ಜನರಿಗೆ ಉಚಿತ ಕಣ್ಣಿನ ಪೊರೆ ಚಿಕಿತ್ಸೆ, ಜಿಲ್ಲಾ ಅನುದಾನದಲ್ಲಿ ಪೆರ್ನೆಯ ಓರ್ವ ಫಲಾನುಭವಿ ಮಹಿಳೆಗೆ ರೂ.6.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ, ರೂ.50 ಸಾವಿರ ಮೊತ್ತದಲ್ಲಿ ಸವಣೂರು ಪದವಿ ಪೂರ್ವ ಕಾಲೇಜಿನ ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಜೊತೆಗೆ 31 ಮಂದಿ ಫಲಾನುಭವಿಗಳಿಗೆ ರೂ.3.50 ಲಕ್ಷ ವೆಚ್ಚದಲ್ಲಿ ಕೃತಕ ಅಂಗಾಂಗಳ ಜೋಡಣಾ ಶಿಬಿರ, 1500 ಸಾವಿರ ಡಯಾಲಿಸಿಸ್ ನಡೆಸಲಾಗಿದ್ದು, 3.50 ಲಕ್ಷ ರಿಯಾಯಿತಿ ನೀಡಲಾಗಿದೆ. ಆರಂಭದಿಂದ ಇಲ್ಲಿಯವರೆಗೆ ರೂ.1.80 ಲಕ್ಷ ರುಪಾಯಿಗಳ ಸಹಾಯಹಸ್ತ ಡಯಾಲಿಸಿಸ್ ಮೂಲಕ ನೀಡಲಾಗಿದೆ. ಕಾರ್ಗಿಲ್ ವಿಜಯೋತ್ಸವ, ನಿವೃತ್ತ ಶಿಕ್ಷಕರನ್ನು, ವೈದ್ಯಕೀಯ ವರ್ಗದವರನ್ನು, ಇಂಜಿನಿರ‍್ಸ್ಗಳನ್ನು ಗೌರವಿಸುವ ಕಾರ್ಯ, ಕಾಲಕಾಲಕ್ಕೆ ಸಂಗೀತ ಸುಧಾ, ಯಕ್ಷಗಾನ ಕಲಾವಿದರ ಗಾನವೈಭವವನ್ನೊಳಗೊಂಡ ಕುಟುಂಬ ಸಮ್ಮಿಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ಅಂಗನವಾಡಿ ಪುನಶ್ಚೇತನ:
ರೋಟರಿಯ ಜಿಲ್ಲಾ ಕಾರ್ಯಕ್ರಮವೆನಿಸಿದ ತಾಲೂಕಿನ ವಿವಿಧ ಅಂಗನವಾಡಿಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಕ್ಲಬ್ ಚಾಲನೆ ನೀಡಲಾಗಿದ್ದು, ಈ ಪೈಕಿ 2 ಅಂಗನವಾಡಿಗೆ 200 ಊಟದ ತಟ್ಟೆ, ಒಂದು ನೀರಿನ ಟ್ಯಾಂಕ್, ಒಂದು ಅಂಗನವಾಡಿಗೆ ಪ್ಯಾಬ್ರಿಕೇಶನ್ ವರ್ಕ್ಸ್, ಮೂರು ಅಂಗನವಾಡಿಗೆ ಆಹಾರ ದಾಸ್ತಾನು ಪೆಟ್ಟಿಗೆ, ಒಂದು ಅಂಗನವಾಡಿಗೆ ಸುಣ್ಣ ಬಣ್ಣ ಹಚ್ಚುವಿಕೆ, ಎರಡು ಅಂಗನವಾಡಿಗೆ 2 ಸೈಕಲ್ ಹಾಗೂ 20 ಕುರ್ಚಿ, ಒಂದು ಅಂಗನವಾಡಿಗೆ ಒಂದು ಫ್ಯಾನ್ ಅಳವಡಿಕೆ, ಎರಡು ಅಂಗನವಾಡಿಗೆ ಮಿಕ್ಸಿಯನ್ನು ವಿತರಿಸಲಾಗಿದ್ದು ಮುಂತಾದ ಅನೇಕ ಕೊಡುಗೆಗಳನ್ನು ಈ ಒಂದು ವರ್ಷದ ಅವಧಿಯಲ್ಲಿ ನೀಡಿರುತ್ತದೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here