ಸಾಧನೆಯ ಮೂಲಕ ಯಶಸ್ಸನ್ನು ಒಲಿಸಿಕೊಳ್ಳಬೇಕು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಸಾಧನೆಯ ಮೂಲಕ ನಮ್ಮನ್ನು ನಾವು ಸಮಾಜದಲ್ಲಿ ಗುರುತು ಮಾಡಿಕೊಳ್ಳಬೇಕು. ಹಠದಿಂದ ಗುರಿಯೆಡೆಗೆ ಅಡಿಯಿಟ್ಟರೆ ಯಶಸ್ಸು ನಮ್ಮದಾಗುತ್ತದೆ. ಹಾಗಾಗಿ ಸಾಧನೆಯ ಹಾದಿಯಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಅವೆಲ್ಲವನ್ನೂ ಮೀರಿನಿಂತು ಗೆಲ್ಲುವ ಛಲ ಹೊಂದಿರಬೇಕಾದದ್ದು ಅತ್ಯಂತ ಅಗತ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.
ದೇಶದ ಆಸ್ತಿಗಳಾಗಿ ವಿದ್ಯಾರ್ಥಿಗಳು ಮೂಡಿಬರಬೇಕು. ಸನಾತನ ಧರ್ಮ ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಹೊತ್ತು ಮುಂದುವರೆಯಬೇಕು. ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸುವ ತ್ಯಾಗಬುದ್ಧಿ ನಮ್ಮಲ್ಲಿರಬೇಕು. ನಮ್ಮ ಜೀವನವೇ ನಮ್ಮ ದೇಶಕ್ಕಾಗಿ ಎಂಬ ಸ್ಪಷ್ಟ ಚಿಂತನೆಯೊಂದಿಗೆ ನಾವು ಬೆಳೆಯಬೇಕು. ಶಿಕ್ಷಣ ಸಂಸ್ಥೆಯಲ್ಲಿ ಕಲಿತದ್ದನ್ನು ಸಮಾಜಮುಖಿಯಾಗಿ ಬಳಸಿಕೊಂಡು ಉನ್ನತ ನಾಗರಿಕರೆನಿಸಬೇಕು ಎಂದು ಕರೆನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಜೀವನದ ಹಾದಿಯಲ್ಲಿ ಏಟುಗಳು ಬೀಳುತ್ತಿರುತ್ತವೆ. ಅವುಗಳಿಂದ ತಪ್ಪಿಸಿಕೊಂಡು ಜಾಣ್ಮೆಯಿಂದ ಮುನ್ನಡೆಯುವ ತಂತ್ರಗಾರಿಕೆಗಳನ್ನು ಕರಗತಮಾಡಿಕೊಳ್ಳಬೇಕು. ದೃಢ ಮನಸ್ಸಿದ್ದಾಗ ಮಾತ್ರ ಉನ್ನತ ಸಾಧನೆ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ವಿದ್ಯಾರ್ಥಿಗಳಿಗೆ ತಪ್ಪು ಒಪ್ಪುಗಳ ಅರಿವನ್ನು ಮೂಡಿಸುವ ಶಿಕ್ಷಣವನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಸಂಸ್ಥೆಯಿಂದಾಗಿದೆ. ತಮಗೆ ದೊರೆತಿರುವ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಾಧನೆಯೆಡೆಗೆ ವಿದ್ಯಾರ್ಥಿಗಳು ಅಡಿಯಿರಿಸಬೇಕು. ವಿದ್ಯಾರ್ಥಿಗಳು ಹಾಗೂ ಬೋಧಕರು ಪರಸ್ಪರ ಅರಿತುಕೊಂಡು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದಾಗ ಸುಲಲಿತ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಸಂಸ್ಥೆಯಲ್ಲಿನ ಪೂರ್ಣಕಾಲಿಕ ಹುದ್ದೆಗೆ ವಿದಾಯಹೇಳುತ್ತಿರುವ ವಿದ್ವಾನ್ ತೇಜಶಂಕರ ಸೋಮಯಾಜಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ದೇಶ ಹಾಗೂ ಧರ್ಮದ ಬಗೆಗೆ ಒಡಮೂಡಿಸಲಾಗುತ್ತಿರುವ ಜಾಗೃತಿಯ ಬಗೆಗೆ ಸೋಮಯಾಜಿ ಸಂತಸ ವ್ಯಕ್ತಪಡಿಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳ ಬಗೆಗೆ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪ್ರಿಯಾಲ್ ಆಳ್ವಾ, ಪ್ರಥಮ ಬಿ.ಕಾಂ ವಿದ್ಯಾರ್ಥಿ ಪ್ರದ್ಯುಮ್ನ ಹಾಗೂ ಪ್ರಥಮ ಬಿ.ಎ ವಿದ್ಯಾರ್ಥಿನಿ ಅಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು. ಅಂತಿಮ ಪದವಿ ವಿದ್ಯಾರ್ಥಿಗಳಾದ ಅನ್ಮಯ್ ಭಟ್, ಶ್ರೀರಾಮ, ಚೈತನ್ಯಾ ಸಿ ಹಾಗೂ ಪಂಚಮಿ ಬಾಕಿಲಪದವು ಅಭಿಪ್ರಾಯ ಹಂಚಿಕೊಂಡರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಕೀರ್ತನಾ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಗಿರೀಶ್ ಭಟ್ ಕುವೆತ್ತಂಡ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ. ಕಾರ್ಯಕ್ರಮ ನಿರ್ವಹಿಸಿದರು.