ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಶಿಕ್ಷಕರಿಗಾಗಿ ಶಿಕ್ಷಣದಲ್ಲಿ ರಾಷ್ಟ್ರೀಯತೆ ಮತ್ತು ವಿದ್ಯಾರ್ಥಿಗಳ ಮನೋವಿಕಾಸದ ಬಗ್ಗೆ ಕಾರ್ಯಾಗಾರ ಜೂ.17ರಂದು ನಡೆಯಿತು.
ಶಾಲಾ ಸಂಚಾಲಕ ರವಿನಾರಾಯಣ.ಎಂ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಾಗಾರದ ಉದ್ಘಾಟಣಾ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಸುರೇಶ್ ಪರ್ಕಳ ಇವರು ಶಿಕ್ಷಣದಲ್ಲಿ ರಾಷ್ಟ್ರೀಯತೆ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ಭಾರತೀಯರು ಕಲ್ಮಶರಹಿತ ತೆರೆದ ಮನಸುಳ್ಳವರು, ಭಾರತೀಯರಿಗೆ ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದರು.
ಖ್ಯಾತ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮನೋವಿಕಾಸದ ಬಗ್ಗೆ 2 ಅವಧಿಗಳಲ್ಲಿ ಕಾರ್ಯಾಗಾರವನ್ನು ನಡೆಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆಯನ್ನು ಅನುಭವಿಸಿ ರೂಡಿಸಿಕೊಳ್ಳುವಂತಹ ವಾತಾವರಣವನ್ನು ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಸಮಾಜ ನಿರ್ಮಿಸಿಕೊಡಬೇಕು ಎಂಬುದಾಗಿ ಹೇಳಿದರು.
ಕಾರ್ಯಾಗಾರದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡರು.