ಕುಂಬ್ರ: ಮೆಸ್ಕಾಂ ಜನ ಸಂಪರ್ಕ ಸಭೆ

0

ಪುತ್ತೂರು: ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯು ಜೂ.19ರಂದು ಪುತ್ತೂರು ಗ್ರಾಮಾಂತರ ಉಪವಿಭಾಗ ಕುಂಬ್ರದಲ್ಲಿ ನಡೆಯಿತು.ಸಭೆಯು ವಿದ್ಯುತ್ ಬಳಕೆದಾರರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಮುಖ್ಯವಾಗಿ ಮೆಸ್ಕಾಂನಲ್ಲಿ ಪವರ್ ಮ್ಯಾನ್‌ಗಳ ಕೊರತೆ ಇದ್ದು ಇದರಿಂದ ಬಹಳಷ್ಟು ತೊಂದರೆಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಗ್ರಾಹಕರು ತಿಳಿಸಿದರು. ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ವಿಷಯ ಪ್ರಸ್ತಾಪಿಸಿ ಕುಂಬ್ರ ಮೆಸ್ಕಾಂ ಕಛೇರಿ ಸೇರಿದಂತೆ ಮೆಸ್ಕಾಂ ಕಛೇರಿಗಳಲ್ಲಿ ಪವರ್ ಮ್ಯಾನ್‌ಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಇದರಿಂದ ಮಳೆಗಾಲದಲ್ಲಿ ತುರ್ತು ಕೆಲಸಗಳಿಗೆ ತೊಂದರೆಯಾಗುತ್ತಿದ್ದು ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

ಮೆಸ್ಕಾಂ ಕಛೇರಿಗಳಲ್ಲಿರುವ ಪವರ್ ಮ್ಯಾನ್‌ಗಳ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡುವಂತೆ ಅವರು ಮೆಸ್ಕಾಂ ಇಲಾಖೆಯ ಮೂಲಕ ಸರಕಾರಕ್ಕೆ ಆಗ್ರಹಿಸಿದರು. ಕುಂಬ್ರ ಮೆಸ್ಕಾಂ ಕಛೇರಿಯಲ್ಲಿರುವ ಗ್ರಾಹಕರ ವಿದ್ಯುತ್ ಬಿಲ್ ಪಾವತಿ ಯಂತ್ರವನ್ನು ಬೇರೆ ಕಡೆಗೆ ತೆರವು ಮಾಡಬಾರದು ಇದು ಇಲ್ಲಿಯೇ ಇರಬೇಕು ಎಂದು ಗ್ರಾಮಸ್ಥರು ತಿಳಿಸಿದರು. ಕುಂಬ್ರಕ್ಕೆ ಟೌನ್ ಫೀಡರ್‌ನ ಅವಶ್ಯಕತೆ ತುಂಬಾ ಇದೆ. ಕೂಡಲೇ ಟೌಟ್ ಫೀಡರ್ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಬಳಕೆದಾರರು ಕೇಳಿಕೊಂಡರು.


ಅಲ್ಲಲ್ಲಿ ಹಳೆಯ ವಿದ್ಯುತ್ ತಂತಿಗಳಿದ್ದು ಇದು ಮಳೆಗಾಲದಲ್ಲಿ ಅಪಾಯವನ್ನು ತರುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಹಳೆಯದಾದ ತಂತಿಗಳನ್ನು ಬದಲಾಯಿಸುವಂತೆ ಗ್ರಾಮಸ್ಥರು ಕೇಳಿಕೊಂಡರು. ಪೆರ್ಲಂಪಾಡಿ ಪೇಟೆ, ಸಿಆರ್‌ಸಿ, ಕಟ್ಟಪುಣಿ ಈ ಭಾಗದ ಹಳೆಯ ತಂತಿಗಳನ್ನು ಬದಲಾವಣೆ ಮಾಡಬೇಕು, ದೊಡ್ಡಮನೆಯಲ್ಲಿ ಹೆಚ್ಚುವರಿ 100 ಕೆ.ವಿ ಟಿಸಿ ಮಾಡುವಂತೆ ಮನವಿ, ಮಾಡಾವು ಮಾಲೆತ್ತೋಡಿ ಪೆರ್ಲಂಪಾಡಿಗೆ ಮುಖ್ಯರಸ್ತೆಯಲ್ಲಿ ಎಚ್.ಟಿ ಲೈನ್ ಬರಬೇಕು, ತೋಟದ ನಡುವೆ ಬಂದರೆ ತೊಂದರೆಯಾಗುತ್ತದೆ. ಕೆರೆಮೂಲೆ ಎಸ್.ಸಿ ಕಾಲನಿಯ ವಿದ್ಯುತ್ ತಂತಿ ಬದಲಾವಣೆ, ಕೊಳ್ತಿಗೆ ಮೇರಡ್ಕ ಟಿ.ಸಿ ಸಮಸ್ಯೆ, ಅಡ್ಕಾರೆಗುಂಡಿ ವಿದ್ಯುತ್ ತಂತಿ ಬದಲಾವಣೆ ಮಾಡುವಂತೆ ಕೊಳ್ತಿಗೆ ಗ್ರಾಮದ ವಿದ್ಯುತ್ ಬಳಕೆದಾರರು ಕೇಳಿಕೊಂಡರು.


ರಸ್ತೆ ಬದಿಗಳಲ್ಲಿ ಕೆಲವೊಂದು ಕಡೆಗಳಲ್ಲಿ ಅಪಾಯಕಾರಿ ಮರಗಳಿದ್ದು ಇವುಗಳು ಮುರಿದು ಬಿದ್ದರೆ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲೆಲ್ಲಿ ಅಪಾಯಕಾರಿ ಮರಗಳಿವೆ ಎಂದು ನೋಡಿಕೊಂಡು ಅಂತಹ ಮರಗಳನ್ನು ತೆರವು ಮಾಡುವುದು ಅಥವಾ ಮರದ ಕೊಂಬೆಗಳನ್ನು ತೆರವು ಮಾಡುವ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ವಿನಂತಿಸಿಕೊಂಡರು. ವಿವಿಧ ವಿಷಯಗಳ ಬಗ್ಗೆ ವಿದ್ಯುತ್ ಬಳಕೆದಾರರು ಮನವಿಗಳನ್ನು ಸಲ್ಲಿಸಿದರು.


ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಕಾರ್ಯನಿರ್ವಾಹಕ ಇಂಜಿನಿಯರ್ ಯಂ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಹೆಚ್ ಶಿವಶಂಕರ್ ಹಾಗೂ ಪುತ್ತೂರು ನಗರ, ಬನ್ನೂರು ಶಾಖೆ, ಪುತ್ತೂರು ಶಾಖೆ-2, ಉಪ್ಪಿನಂಗಡಿ ಶಾಖೆ, ಸವಣೂರು, ಬೆಟ್ಟಂಪಾಡಿ, ಈಶ್ವರಮಂಗಲ ಮತ್ತು ಕುಂಬ್ರ ಶಾಖೆಯ ಮೆಸ್ಕಾಂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶ್ಯಾಮಸುಂದರ ರೈ ಕೆರೆಮೂಲೆ, ಸದಸ್ಯರುಗಳಾದ ಪವನ್ ಡಿ.ಜಿ, ಬಾಲಕೃಷ್ಣ ಕೆಮ್ಮಾರ, ರಾಜೇಶ್ ರೈ ಪರ್ಪುಂಜ, ಎಸ್.ಮಾಧವ ರೈ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ವಿನೋದ್ ಶೆಟ್ಟಿ ಮುಡಾಲ,ಮಹೇಶ್ ರೈ ಕೇರಿ, ದಿವಾಕರ ಶೆಟ್ಟಿ, ಪುರಂದರ ಶೆಟ್ಟಿ ಮುಡಾಲ, ಭವಿತ್ ಮಾಲೆತ್ತೋಡಿ, ಭರತ್ ಮಾಲೆತ್ತೋಡಿ, ವೇಣುಚಂದ್ರ ಸೇರಿದಂತೆ ಕುಂಬ್ರ, ಕೊಳ್ತಿಗೆ ವಲಯದ ಹಲವು ಮಂದಿ ವಿದ್ಯುತ್ ಬಳಕೆದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here