ವಕೀಲ ವೃತ್ತಿ ಅತ್ಯಂತ ಶ್ರೇಷ್ಠ ಹುದ್ದೆಯಾಗಿದೆ: ಜಗನ್ನಾಥ್ ರೈ
ಪುತ್ತೂರು: ಈ ಆಧುನಿಕ ಕಾಲಘಟ್ಟದಲ್ಲಿ ಕಾನೂನು ಪದವಿ ಪಡೆದವರಿಗೆ ಉತ್ತಮ ಜೀವನ ಕಟ್ಟಿಕೊಳ್ಳಲು ವಿಪುಲ ಅವಕಾಶಗಳಿದ್ದು, ಕಾನೂನು ಕ್ಷೇತ್ರ ಇಂದು ವ್ಯಾಪಕವಾಗಿ ಬೆಳೆಯುತ್ತಿದೆ. ವಕೀಲ ವೃತ್ತಿ ಅತ್ಯಂತ ಶ್ರೇಷ್ಠ ಹುದ್ದೆಯಾಗಿದ್ದು, ಅದರಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದು ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ್ ರೈ ಜಿ. ಹೇಳಿದರು.
ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ 2 ದಿನಗಳ ಲೀಗಮ್ ಫೆಸ್ಟ್- 2024ನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯವಾದಿಗಳ ಜ್ಞಾನಕ್ಕೆ ಯಾವುದೇ ಪರಿಮಿತಿ ಇಲ್ಲ. ಆತ ರಾಷ್ಟ್ರದ ಸಂಪೂರ್ಣ ಜ್ಞಾನ ಹೊಂದಿರಬೇಕು. ತತ್ವಜ್ಞಾನಿಯಂತೆ ಚಿಂತನೆ ನಡೆಸಬೇಕು. ಈ ಹಿನ್ನಲೆಯಲ್ಲಿ ಕಾಲೇಜಿನಲ್ಲಿ ನಡೆಸುವ ಲೀಗಮ್ ಫೆಸ್ಟ್ ನಂತಹ ವಿದ್ಯಾರ್ಥಿಸ್ನೇಹಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜ್ಞಾನದ ಜೊತೆಗೆ ವಿಭಿನ್ನ ಅನುಭವವನ್ನು ಪಡೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ರವರು ಮಾತನಾಡಿ, ಕಾನೂನು ಶಿಕ್ಷಣ ಪಡೆಯುವವರು ಕೇವಲ ಪುಸ್ತಕದ ಜ್ಞಾನ ಹೊಂದಿದರೆ ಸಾಲದು. ಇದರ ಜೊತೆಗೆ ವಿವಿಧ ಭಾಷಾ ಜ್ಞಾನ ಪಡೆಯಬೇಕು. ಪಠ್ಯದಲ್ಲಿರುವ ವಿಷಯ ಮಾತ್ರವಲ್ಲದೆ ಕಾಲ ಕಾಲಕ್ಕೆ ತಕ್ಕಂತೆ ಬದಲಾಗುವ ಕಾನೂನುಗಳ ಕುರಿತು ಅಧ್ಯಯನ ಮಾಡುತ್ತಿರಬೇಕು. ನ್ಯಾಯಾಲಯಗಳು ನೀಡುವ ತೀರ್ಪಿನ ಆಧಾರ, ತಾರ್ಕಿಕತೆ ತಿಳಿಯಲು ಮುಂದಾಗಬೇಕು. ಆಗ ಮಾತ್ರ ಕಾನೂನು ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮದಲ್ಲಿಯು ಭಾಗವಹಿಸಿ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಕಾನೂನು ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್.ಎಂ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಗ್ರೇಗೋರಿ ಥಾಮಸ್ ಸ್ವಾಗತಿಸಿ, ವಿದ್ಯಾರ್ಥಿನಿ ಪಂಚಮಿ ಶೆಟ್ಟಿ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವೃಂದಾಲಕ್ಷ್ಮೀ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಲೀಗಮ್ ಫೆಸ್ಟ್ ನ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.