ತರಗತಿ ಕೊಠಡಿಗಳ ಸಮಸ್ಯೆ ಎದುರಿಸುತ್ತಿದ್ದ ಸವಣೂರು ಮೊಗರು ಶಾಲೆ- ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಭೇಟಿ-ಪರಿಶೀಲನೆ

0

ಪುತ್ತೂರು: ಸವಣೂರು ಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಹಾಗೂ ಕಡಬ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರು ಜೂ.21ರಂದು ಭೇಟಿ ನೀಡಿ ಶಾಲಾ ಕಟ್ಟಡದ ಪರಿಶೀಲನೆ ನಡೆಸಿದರು.


2023-24ನೇ ಸಾಲಿನಲ್ಲಿ ಮಳೆ ಹಾನಿಯಡಿಯಲ್ಲಿ ಶಾಲೆಯ ನಾಲ್ಕು ಕೊಠಡಿಗಳನ್ನು ಕೆಡವಲಾಗಿತ್ತು. ಕೊಠಡಿ ಕೆಡವಿದ್ದರೂ ಹೊಸ ಕಟ್ಟಡ ಕಾಮಗಾರಿ ಪ್ರಾರಂಭ ಆಗಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದರು. ಜೂ.21ರಂದು ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪರಿಶೀಲನೆಗೆ ಬಂದ ವೇಳೆ ಸವಣೂರು ಮೊಗರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಫೀಕ್ ಎಂ.ಎ ಅವರು ಡಾ.ಆನಂದ್ ಅವರಲ್ಲಿ ಶಾಲೆಯ ಪರಿಸ್ಥಿತಿ ಬಗ್ಗೆ ತಿಳಿಸಿದ್ದು ಈ ವೇಳೆ ಕಡಬ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರೂ ಧ್ವನಿಗೂಡಿಸಿದ್ದರು. ಬಳಿಕ ಅಲ್ಲಿಂದ ನೇರವಾಗಿ ಸವಣೂರು ಮೊಗರು ಶಾಲೆಗೆ ಭೇಟಿ ನೀಡಿದ ಡಾ.ಆನಂದ್ ಅವರು ಎಸ್‌ಡಿಎಂಸಿ ಹಾಗೂ ಶಿಕ್ಷಕ ವೃಂದದವರ ಜೊತೆ ಮಾತುಕತೆ ನಡೆಸಿದ್ದಲ್ಲದೇ ಶಾಲಾ ಕಟ್ಟಡ ವಿಚಾರವಾಗಿ ಮಾಹಿತಿ ಪಡೆದುಕೊಂಡರು. ಶಾಲೆಯಲ್ಲಿ ಕೊಠಡಿ ನಿರ್ಮಾಣದ ವಿಚಾರವಾಗಿ ಆದಷ್ಟು ಬೇಗ ಕಟ್ಟಡದ ಕಡತಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಡಾ.ಆನಂದ್ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಇಂಜಿನಿಯರ್ ಹುಕ್ಕೇರಿ, ಸವಣೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಂದೇಶ್, ಸವಣೂರು ಗ್ರಾ.ಪಂ ಅಧ್ಯಕ್ಷೆ ಸುಂದರಿ, ಸದಸ್ಯ ರಝಾಕ್ ಕೆನರಾ, ಜಿಲ್ಲೆ ಹಾಗೂ ತಾಲೂಕು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ವರ್ಗದವರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here