ಪುತ್ತೂರು ಭಾರತ್ ಸಿನಿಮಾಸ್‌ನಲ್ಲಿ ‘ಆರಾಟ’ ಕನ್ನಡ ಸಿನಿಮಾ ಬಿಡುಗಡೆ

0

ಪುತ್ತೂರು: ಪಿ.ಎನ್.ಆರ್. ಪೊಡಕ್ಷನ್ ಬ್ಯಾನರ್‌ನಲ್ಲಿ ತಯಾರಾದ ಆರಾಟ ಕನ್ನಡ ಸಿನಿಮಾ ಜೂ.21ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾದಂತೆ ಪುತ್ತೂರು ಜಿ.ಎಲ್.ಒನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಟಕಪೂರ್ವ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರು ದೀಪ ಪ್ರಜ್ವಲಿಸಿ ಮಾತನಾಡಿ ’ಆರಾಟ’ ಎಂಬ ಪದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವರ ಅಪೂರ್ವ ಅವಭೃತವನ್ನು ನೆನಪಿಸುತ್ತದೆ. ಅಂತಹದೆ ವಿಚಾರದಲ್ಲಿ ಬೇರೆ ಕಡೆಯ ಧಾರ್ಮಿಕ ಹಿನ್ನೆಲೆಯನ್ನು ತೋರಿಸುವ ಚಿತ್ರವನ್ನು ಲಕ್ಷಾಂತರ ಮಂದಿ ಸಿನಿಮಾ ಮೂಲಕ ವೀಕ್ಷಿಸುವಂತಾಲಿ ಎಂದು ಹಾರೈಸಿದರು.
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಒಂದು ಚಿತ್ರ ನಿರ್ಮಾಣದ ಹಿಂದೆ ಬಹಳಷ್ಟು ಮಂದಿಯ ಪ್ರಯತ್ನ ಇರುತ್ತದೆ. ಅಂತಹ ಸಂದರ್ಭದಲ್ಲಿ ಜಿಲ್ಲೆಯವರೇ ಇರುವ ಸಿನಿಮಾ ಜನ ಮನ್ನಣೆ ಗಳಿಸುವಂತಾಗಲಿ ಎಂದು ಹಾರೈಸಿದರು. ಉದ್ಯಮಿ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ದ.ಕ. ಜಿಲ್ಲೆಯವರು ಕನ್ನಡ ಸಿನಿಮಾ ತೆಗೆಯುವುದು ಕಡಿಮೆ. ಈ ಆರಾಟದ ಜತೆಗೂ ಜನರ ಸಹಕಾರ ಉತ್ತಮ ಮಟ್ಟದಲ್ಲಿ ಸಿಗಲಿ ಎಂದು ಹೇಳಿದರು. ಈ ಸಂದರ್ಭ ನಟ ಮಂಗೇಶ್ ಭಟ್ ವಿಟ್ಲ, ರವಿ ರಾಮಕುಂಜ, ಪುತ್ತೂರು ಭಾರತ್ ಸಿನಿಮಾಸ್‌ನ ಜಯರಾಮ ವಿಟ್ಲ, ಸಾಹಿತಿ ಮಲ್ಲಿಕಾ ಜೆ. ರೈ, ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಅಧಿಕಾರಿ ಪುರುಷೋತ್ತಮ ಶೆಟ್ಟಿ, ಮಿಥುನ್, ಪ್ರಸನ್ನ, ಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು. ಪದ್ಮರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here