ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿಯ ಚರಂಡಿಗೆ ಬಿದ್ದು, ಅದರ ಕಂಟೈನರ್ ಹೆದ್ದಾರಿಯಲ್ಲಿ ಅಡ್ಡಲಾಗಿ ತಿರುಗಿ ನಿಂತಿದ್ದರಿಂದ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಉಪ್ಪಿನಂಗಡಿ ಬಳಿಯ ಕೂಟೇಲು ಎಂಬಲ್ಲಿ ಜೂ.25ರ ಬೆಳಗ್ಗೆ ನಡೆದಿದೆ.
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯೊಂದು ಬೆಳಗ್ಗೆ 6.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಾಗಿ ರಸ್ತೆ ಬದಿಯ ಚರಂಡಿಗೆ ಇಳಿಯಿತು. ಆಗ ಅದರ ಹಿಂದಿನ ಕಂಟೈನರ್ ರಸ್ತೆಗೆ ಅಡ್ಡಲಾಗಿ ತಿರುಗಿ ನಿಂತಿದ್ದು, ವಾಹನಗಳ ಸಾಗಾಟಕ್ಕೆ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸ್ವಲ್ಪ ಜಾಗವಷ್ಟೇ ಉಳಿದಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಯಿತು. ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ, ಕ್ರೇನ್ ಮೂಲಕ ಲಾರಿಯನ್ನು ಎತ್ತಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಿಂದ ಚರಂಡಿಯ ಬದಿಯಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್ ಒಡೆದು ಹೋಗಿವೆ. ಕಂಟೈನರ್ ಚಾಲಕ ಆಸೀಫ್ ಯಾವುದೇ ಗಾಯಗಳಿಲ್ಲದೆ, ಅಪಾಯದಿಂದ ಪಾರಾಗಿದ್ದಾರೆ.