ಕೃಷಿ ಇಲಾಖೆ ವ್ಯಾಪ್ತಿಗೆ ರಬ್ಬರ್ ಬೆಳೆ : ಕೇಂದ್ರಕ್ಕೆ ಶಿಫಾರಸ್ಸು: ಸಚಿವ ಲಾಡ್ ಭರವಸೆ

0


ಬೆಂಗಳೂರು: ರಬ್ಬರ್ ಬೆಳೆಗೆ ಪ್ರತಿ ಕೆ.ಜಿಗೆ ರೂ.258 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಮತ್ತು ರಬ್ಬರ್ ಬೆಳೆಯನ್ನೂ ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತೋಟಗಾರಿಕಾ ಸಚಿವರ ಅನುಪಸ್ಥಿತಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.


ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಪ್ರತಾಪಸಿಂಹ ನಾಯಕ್, ತಳವಾರ್ ಸಾಬಣ್ಣ, ಡಾ.ಧನಂಜಯ ಸರ್ಜಿ ಅವರು ಈ ಕುರಿತು ಪ್ರಶ್ನೆ ಕೇಳಿದ್ದರು.‘ಕೇರಳದಲ್ಲಿ ರಬ್ಬರ್ ಬೆಳೆಯನ್ನು ಕೃಷಿ ಉತ್ಪನ್ನವೆಂದು ಪರಿಗಣಿಸಲಾಗಿದೆ. ಪ್ರತಿ ಕೆ.ಜಿ.ಗೆ ರೂ.258 ಎಂಎಸ್‌ಪಿ ನಿಗದಿ ಮಾಡಲಾಗಿದೆ. ಕರ್ನಾಟಕ ರಬ್ಬರ್ ಬೆಳೆಗಾರರೂ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಸದಸ್ಯರು ಪ್ರಸ್ತಾಪಿಸಿದ್ದ ವಿಷಯಕ್ಕೆ ತೋಟಗಾರಿಕಾ ಸಚಿವರ ಪರ ಉತ್ತರ ನೀಡಿದ ಸಚಿವ ಸಂತೋಷ್ ಲಾಡ್, ‘ರಾಜ್ಯದಲ್ಲಿ 50,800 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. 5.27 ಲಕ್ಷ ಟನ್ ರಬ್ಬರ್ ಉತ್ಪಾದನೆಯಾಗುತ್ತಿದೆ.

ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ರಬ್ಬರ್ ಬೆಳೆಯಲಾಗುತ್ತಿದೆ. ರಬ್ಬರ್ ಅನ್ನು ಕೃಷಿ ಬೆಳೆಯನ್ನಾಗಿ ಪರಿವರ್ತಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ತರುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದರು. ರಬ್ಬರ್ ಬೆಳೆ ಕೃಷಿ ಇಲಾಖೆ ವ್ಯಾಪ್ತಿಗೆ ಸೇರಿದರೆ ಬೆಳೆಗಾರರಿಗೆ ಬ್ಯಾಂಕ್ ಸಾಲ ಸೇರಿ ಹಲವು ಸವಲತ್ತುಗಳು ಸಿಗಲಿವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here