“ಹಾಡೊಂದು ಭಾವ ಹಲವು” ವಿಶೇಷ ನೃತ್ಯ ವಿಶೇಷ

0

ಹೊಸತನದ ಪ್ರಯೋಗದಿಂದ ಕಲೆ ಶ್ರೀಮಂತ – ಹರೀಶ ಬಳಂತಿಮೊಗರು

ಪುತ್ತೂರು: ಭರತನಾಟ್ಯ ಕಲೆಯಲ್ಲಿ ಒಂದೇ ಹಾಡಿಗೆ ಹಲವು ದೃಷ್ಟಿಕೋನದಲ್ಲಿ ರಂಗ ಪ್ರಸ್ತುತಿ ನೀಡಿದ ಯಶಸ್ವಿ ಪ್ರಯತ್ನ ಶ್ಲಾಘನೀಯ. ಇಂತಹ ಪ್ರಸ್ತುತಿಗಳಾದಾಗ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ತಾಳಮದ್ದಳೆಯ ಅರ್ಥಧಾರಿ ಹರೀಶ ಬಳಂತಿಮೊಗರು ತಿಳಿಸಿದರು.


ಉರ್ವ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆದ “ನೃತ್ಯಾಮೃತ” ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅವರ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ಜೂ.23ರಂದು ನಡೆದ “ನೃತ್ಯಾಂತರಂಗ” ಸರಣಿ ಕಾರ್ಯಕ್ರಮದಲ್ಲಿ “ಹಾಡೊಂದು ಭಾವ ಹಲವು” ವಿಶೇಷದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ನಗರಸಭಾ ಸದಸ್ಯ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್ ಭರತನಾಟ್ಯದಲ್ಲಿ ಹೊಸ ಕಲ್ಪನೆಯೊಂದಿಗೆ ರೂಪಿಸಿದ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿದುಷಿ ಅಕ್ಷತಾ ಕೆ ( ನೆರೆಮನೆಯ ಗೋಪಿಕೆಯಾಗಿ- ವಾತ್ಸಲ್ಯ), ಕು.ಧರಿತ್ರಿ ಭಿಡೆ ( ಕೃಷ್ಣನ ಪ್ರೇಮಿಯಾಗಿ- ಶೃಂಗಾರ), ವಿದುಷಿ ಅನು ಧೀರಜ್ ( ಮುಗ್ಧ ಬಾಲೆಯಾಗಿ- ಕೌತುಕ) , ವಿದ್ವಾನ್ ಬಿ ದೀಪಕ್ ಕುಮಾರ್ ( ಹದಿಹರೆಯದ ಗೊಲ್ಲ- ಕೃಷ್ಣ ಸಖ್ಯ) , ವಿದುಷಿ ಸುಮಂಗಲಾ ರತ್ನಾಕರ ರಾವ್ ( ತತ್ವಜ್ಞಾನಿಯಾಗಿ ) ಶ್ರೀ ಪುರಂದರದಾಸ ವಿರಚಿತ ಸುಪ್ರಸಿದ್ಧ “ಪಿಳ್ಳಂಗೋವಿಯ ಚೆಲ್ವ ಕೃಷ್ಣನ” ಎಂಬ ಸಾಹಿತ್ಯಕ್ಕೆ ರಂಗ ಪ್ರಸ್ತುತಿ ನೀಡಿದರು.

ಹಿಮ್ಮೇಳದಲ್ಲಿ ವಿದುಷಿ ಪ್ರೀತಿಕಲಾ ದೀಪಕ್ ಪ್ರತಿಯೊಬ್ಬರ ಭಾವಕ್ಕನುಗುಣವಾಗಿ ನೃತ್ಯ ನಿರ್ದೇಶಕರ ಇಂಗಿತದಂತೆ ಬೇರೆ ರಾಗ-ತಾಳಗಳಲ್ಲಿ ಹಾಡಿ ನೃತ್ಯದ ಭಾವಕ್ಕೆ ಜೀವ ನೀಡಿದರು. ಶ್ಯಾಮ ಭಟ್ಟ ಅವರು ಮೃದಂಗದಲ್ಲಿ ಮತ್ತು ಕೃಷ್ಣ ಗೋಪಾಲ್ ಪೂಂಜಾಲಕಟ್ಟೆ ಕೊಳಲಿನಲ್ಲಿ ಸಹಕರಿಸಿದ್ದರು. ವಿದುಷಿ ಸುಮಂಗಲಾ ರತ್ನಾಕರ ರಾವ್ ಹಾಗೂ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಟುವಾಂಗದಲ್ಲಿ ಸಹಕರಿಸಿದ್ದರು. ವಿಶ್ವಕಲಾ ನಿಕೇತನ ಪುತ್ತೂರಿನ ಹಿರಿಯ ಗುರು ವಿದುಷಿ ನಯನ ವಿ ರೈ,ಕುದ್ಕಾಡಿ, ಕಲಾ ಪ್ರೇಕ್ಷಕಿ ಚಿತ್ರಾ ಭಿಡೆ, ನೃತ್ಯಾಂಜಲಿ ಜ್ಯೋತಿಗುಡ್ಡೆಯ ನಿರ್ದೇಶಕಿ ವಿದುಷಿ ಮಲ್ಲಿಕಾ ವೇಣುಗೋಪಾಲ್ ಹಾಗೂ ನಾಟ್ಯಾರಾಧನಾದ ಹಿರಿಯ ವಿದ್ಯಾರ್ಥಿ ವಿದ್ವಾನ್ ಶೋಧನ್ ಕುಮಾರ್ ಬಿ,ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ನಾಟ್ಯಾರಾಧನಾದ ಟ್ರಷ್ಟಿ ಬಿ ರತ್ನಾಕರ ರಾವ್ ಹಾಗೂ ಮೂಕಾಂಬಿಕಾ ನೃತ್ಯ ಸಂಸ್ಥೆಯ ವಿದ್ವಾನ್ ಗಿರೀಶ್ ಕುಮಾರ್ ಪುತ್ತೂರು, ಶ್ರೀಮತಿ ಶಶಿಪ್ರಭಾ ಬಿ. ಉಪಸ್ಥಿತರಿದ್ದರು. ವಿ. ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿದರು. ವಿ. ದೀಪಕ್ ಕುಮಾರ್ ವಂದಿಸಿದರು. ಆರಾಧ್ಯ, ಅಭಿಜ್ಞ ಹಾಗೂ ಜನ್ಯ ಪ್ರಾರ್ಥಿಸಿದರು. ಅವನಿ ರೈ, ಪೂರ್ವಿ ಬಿ.ಸಿ, ಅಕ್ಷತಾ, ಧನ್ವಿ ಹಾಗೂ ವೈಭವಿ ಕಲಾವಿದರನ್ನು ಪರಿಚಯಿಸಿದರು. ವೃಂದಾ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here