ವಿದ್ಯುತ್ ತಂತಿಗಳ ಬದಲಾವಣೆಗೆ ಮೆಸ್ಕಾಂಗೆ ಮನವಿ

0

ಉಪ್ಪಿನಂಗಡಿ: ಇಲ್ಲಿನ ಬೊಳ್ಳಾವು ಎಂಬಲ್ಲಿರುವ ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದಿಂದ ಹಾದು ಹೋಗುವ ವಿದ್ಯುತ್ ಸಂಪರ್ಕ ತಂತಿಗಳು ತೀರಾ ಹಳೆಯದಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಮತ್ತು ಎಚ್‌ಟಿ ಮತ್ತು ಎಲ್‌ಟಿ ಲೈನ್‌ಗೆ ತಾಗುವ ಗಿಡಗಳ ಕೊಂಬೆಗಳನ್ನು ಕತ್ತರಿಸಬೇಕು ಮತ್ತು ಇಲ್ಲಿಗೆ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕೆಂದು ಗ್ರಾಹಕರ ನಿಯೋಗವೊಂದು ಮೆಸ್ಕಾ ಉಪ್ಪಿನಂಗಡಿ ಶಾಖಾ ಸಹಾಯಕ ಅಭಿಯಂತರರಿಗೆ ಮನವಿ ನೀಡಿತು.

ಇಲ್ಲಿನ ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದಿಂದ ಹಾದು ಹೋಗುವ ವಿದ್ಯುತ್ ಸಂಪರ್ಕ ತಂತಿಗಳು ಸುಮಾರು 30 ವರ್ಷಗಳಷ್ಟು ಹಿಂದಿನದ್ದಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಈ ತಂತಿಗಳು ಹಲವು ಬಾರಿ ತುಂಡಾಗಿದ್ದು ಅದಕ್ಕೆ ಅಲ್ಲಲ್ಲಿ ಜೋಡಣೆ ನೀಡಲಾಗಿದೆ. ಅಲ್ಲದೇ, ಹೆಚ್ಚಿನ ಕಡೆಗಳಲ್ಲಿ ಈ ತಂತಿ ತೋಟ, ಗುಡ್ಡ ಪ್ರದೇಶದಿಂದ ಹಾದು ಹೋಗಿದ್ದು, ಸಣ್ಣ ಮರದ ಗೆಲ್ಲು ಬಿದ್ದರೂ ತುಂಡಾಗುತ್ತಿರುತ್ತದೆ. ಆದ್ದರಿಂದ ಈ ವಿದ್ಯುತ್ ತಂತಿಯನ್ನು ಬದಲಾವಣೆ ಮಾಡಿ ಇಲ್ಲಿ ಹೊಸ ತಂತಿಯನ್ನು ಅಳವಡಿಸಬೇಕು ಮತ್ತು ಈ ಭಾಗದಲ್ಲಿ ಎಚ್‌ಟಿ ಮತ್ತು ಎಲ್‌ಟಿ ಲೈನ್‌ಗಳಿಗೆ ತಾಗುವ ಮರ-ಗಿಡಗಳ ಕೊಂಬೆಗಳನ್ನು ಕತ್ತರಿಸಬೇಕು ಹಾಗೂ ಇಲ್ಲಿರುವ ವಿದ್ಯುತ್ ಪರಿವರ್ತಕ 63 ಕೆ.ವಿ.ಯದ್ದಾಗಿದ್ದು, ಇದರಿಂದ ಹಲವು ಮನೆಗಳಿಗೆ, ಕೃಷಿ ಪಂಪ್‌ಗಳಿಗೆ ಹಾಗೂ ಒಂದು ಉದ್ಯಮ ಸಂಸ್ಥೆಗೆ ಸಂಪರ್ಕ ಇದೆ. ಆದರೆ ಈ ವಿದ್ಯುತ್ ಪರಿವರ್ತಕ ಇಷ್ಟು ಧಾರಣಾ ಸಾಮರ್ಥ್ಯ ಹೊಂದಿರದಿರುವುದರಿಂದ ಇಲ್ಲಿ ಲೋ ವೋಲ್ಟೇಜ್ ಸಮಸ್ಯೆ ಮಾಮೂಲಿಯಾಗಿದೆ. ಆದ್ದರಿಂದ ಇಲ್ಲಿಗೊಂದು ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ನೀಡಬೇಕೆಂದು ಮನವಿ ನೀಡಲಾಯಿತು.

ಮನವಿಗೆ ಸ್ಪಂದಿಸಿದ ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸಹಾಯಕ ಅಭಿಯಂತರರಾದ ನಿತಿನ್ ಕುಮಾರ್, ನಾಳೆನೇ ಆ ಭಾಗದಲ್ಲಿ ಟ್ರೀ ಕಟ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು ಹಾಗೂ ರಸ್ತೆ ವಿಸ್ತರಣೆಗೆ ತೊಡಕಾಗುತ್ತಿರುವ ವಿದ್ಯುತ್ ಕಂಬವೊಂದನ್ನು ಸ್ಥಳಾಂತರಿಸಲು ಆ ವಾರ್ಡ್‌ನ ಗ್ರಾ.ಪಂ. ಸದಸ್ಯರೋರ್ವರು ಈ ಹಿಂದೆಯೇ ಮನವಿ ಮಾಡಿದ್ದು, ಅಲ್ಲಿನ ಸಾಧಕ- ಬಾಧಕಗಳನ್ನು ನೋಡಿಕೊಂಡು ಆ ಕೆಲಸವನ್ನು ಮಾಡಲಾಗುವುದು. ಮತ್ತು ವಿದ್ಯುತ್ ತಂತಿಗಳ ಬದಲಾವಣೆ ಮತ್ತು ಹೆಚ್ಚುವರಿ ವಿದ್ಯುತ್ ಪರಿವರ್ತಕದ ಬೇಡಿಕೆಯ ಬಗ್ಗೆ ಅಂದಾಜು ಪಟ್ಟಿ ಸಿದ್ಧಗೊಳಿಸಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ಮನವಿ ನೀಡಿದ ನಿಯೋಗದಲ್ಲಿ ನಿತಿನ್ ಬೊಳ್ಳಾವು, ಬಾಬು ಗೌಡ ಬೊಳ್ಳಾವು ಮತ್ತು ಸುಚಿತ್ ಬೊಳ್ಳಾವು ಇದ್ದರು.

LEAVE A REPLY

Please enter your comment!
Please enter your name here