ಭಾರೀ ಮಳೆ ಹಿನ್ನಲೆ- ಕೆಯ್ಯೂರು ಗ್ರಾಪಂನಿಂದ ಗ್ರಾಮ ಭೇಟಿ-ಬೀಳುವ ಸ್ಥಿತಿಯಲ್ಲಿದ್ದ ಮನೆಯಿಂದ ಜನರ ಸ್ಥಳಾಂತರ

0

ಪುತ್ತೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಗ್ರಾಮದಲ್ಲಿ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಕೆಯ್ಯೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಜೂ.27 ರಂದು ಗ್ರಾಮ ಭೇಟಿ ನಡೆಸಿದರು. ಗ್ರಾಮದ ಹಲವು ಕಡೆಗಳಲ್ಲಿ ಸಂಚರಿಸಿದ ಅಧಿಕಾರಿಗಳು ಕೆಯ್ಯೂರು ಜನತಾ ಕಾಲನಿಯಲ್ಲಿರುವ ಬಳ್ಳು ಕೊರಗ ಎಂಬವರಿಗೆ ಸೇರಿದ ಮನೆಯು ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿ ಅವರ ಕುಟುಂಬವನ್ನು ಕೆಯ್ಯೂರು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರ ಮಾಡಿದರು. ಇವರ ಮನೆಯ ತುರ್ತು ದುರಸ್ತಿಯ ಬಗ್ಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು.


ಕೆರೆಗೆ ಬೇಲಿ ಹಾಕಲು ಸೂಚನೆ
ಕಣಿಯಾರು ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಕೆರೆ ಇರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಅಲ್ಲಿಗೆ ತೆರಳಿ ಕೆರೆಯ ಬಗ್ಗೆ ಪರಿಶೀಲನೆ ನಡೆಸಿದರು. ಕೆರೆ ಅಪಾಯಕಾರಿಯಾಗಿರುವುದನ್ನು ಗಮನಿಸಿ ಜಾಗದ ಮಾಲೀಕರಿಗೆ ಕೆರೆಗೆ ಸುತ್ತ ಬೇಲಿ ಹಾಕುವಂತೆ ಸೂಚನೆ ನೀಡಲಾಯಿತು.


ಅಪಾಯಕಾರಿ ಮರ ತೆರವಿಗೆ ಮನವಿ
ಇಳಂತಾಜೆ ರಸ್ತೆಯಲ್ಲಿ ಶ್ರೀಧರ ಪೂಜಾರಿ ಎಂಬವರ ಮನೆಯ ಬಳಿ ರಸ್ತೆ ಬದಿಯಲ್ಲಿ ಅಪಾಯಕಾರಿ ಮರವೊಂದಿದ್ದು ಇದು ಬೀಳುವ ಹಂತದಲ್ಲಿದೆ. ಈಗಾಗಲೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ತಕ್ಷಣವೇ ಈ ಮರವನ್ನು ತೆರವು ಮಾಡಿಕೊಡುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಅಧ್ಯಕ್ಷ ಶರತ್ ಕುಮಾರ್ ಮಾಡಾವು ತಿಳಿಸಿದರು.
ತಂಡದಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ, ಸಹಾಯಕ ನಾರಾಯಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here