ನರೇಂದ್ರ ಪ.ಪೂ ಕಾಲೇಜಿನಲ್ಲಿ ನಿತ್ಯ ಜೀವನದಲ್ಲಿ ಪರಿಸರ ಬಗ್ಗೆ ವಿಶೇಷ ಉಪನ್ಯಾಸ ಕಾರ‍್ಯಕ್ರಮ

0

ಪುತ್ತೂರು: ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಪರಿಸರ ಮಾಲಿನ್ಯ ಮಿತಿ ಮೀರಿದರೆ ಮಾನವನಿಗೆ ಈ ಪರಿಸರದಲ್ಲಿ ಜೀವಿಸುವುದೇ ಅಸಾಧ್ಯವಾಗುತ್ತದೆ. ಆದುದರಿಂದ ಈ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿ ನಮ್ಮದಾಗಿದೆ. ಮುಂದಿನ ಪೀಳಿಗೆಗೆ ಈ ಪರಿಸರವು ಉಳಿಯ ಬೇಕಾದರೆ ಇಂದಿನಿಂದಲೇ ಒಳ್ಳೆಯ ಬದಲಾವಣೆಯನ್ನು ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು ಮತ್ತು ಪರಿಸರದ ರಾಜ್ಯ ಸಂಯೋಜಕರಾದ ಜಯರಾಮ್ ಬೊಳ್ಳಾಜೆ ಹೇಳಿದರು.


ನರೇಂದ್ರ ಪ.ಪೂ. ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ ನಿತ್ಯ ಜೀವನದಲ್ಲಿ ಪರಿಸರ ಬಗ್ಗೆ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವಜಾಲದ ಸರಪಣಿಯನ್ನು ನಾವು ನಿರಂತರವಾಗಿ ಉಳಿಸಬೇಕಾಗಿದೆ. ಗಿಡಮರಗಳನ್ನು ಕಡಿಯುವಾಗ ಒಂದಕ್ಕೆರಡು ಮರಗಳನ್ನು ನೆಡಬೇಕು.ಈ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳಾದ ಪ್ಲಾಸ್ಟಿಕ್ ಇತ್ಯಾದಿಗಳ ಅನಧಿಕೃತ ಮಾರಾಟವನ್ನು ತಡೆಗಟ್ಟಬೇಕು. ಜೈವಿಕ ತಂತ್ರಜ್ನಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದರ ಮಹತ್ವವನ್ನು ಸಾಮಾನ್ಯ ನಾಗರಿಕರೂ ಅರಿಯಬೇಕು. ಇದಕ್ಕಾಗಿ ನಾವು ನಮ್ಮ ನಾಳಿನ ನಾಗರಿಕರಾದ ಮಕ್ಕಳಿಗೆ ಕೂಡ ಶಾಲೆಗಳಲ್ಲಿ ಈ ಬಗ್ಗೆ ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಬೇಕು.ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸುವ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ ಇದರ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಗ್ರಾಮ ವಿಕಾಸದ ವಿಭಾಗ ಸಹಸಂಯೋಜಕರಾದ ಪ್ರಶಾಂತ್ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಉಪನ್ಯಾಸಕಿ ಮಧುರಾ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here