ಪುತ್ತೂರು: ಮೋದಿ 3 ಸರಕಾರವು ನೀಟ್ ಯು.ಜಿ, ನೀಟ್ ಪಿ.ಜಿ, ಯು.ಜಿ.ಸಿ.ನೆಟ್, ಸಿ.ಎಸ್.ಐ.ಆರ್. ನೆಟ್ ಮತ್ತು ನೆಟ್ ಜಿ.ಆರ್ ಎಫ್. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ದೂಡಿದ ಅತ್ಯಂತ ಭ್ರಷ್ಟ ಮತ್ತು ದುರ್ಬಲ ಸರಕಾರವಾಗಿ ಮೂಡಿಬಂದಿದೆ. ಈ ಕುರಿತು ಸಿಬಿಐ ಸರಿಯಾಗಿ ತನಿಖೆ ಮಾಡಿದರೆ ಇದರ ಹಿಂದಿರುವ ಕಾಣದ ಕೈಗಳು ಕೇಂದ್ರ ಸರಕಾರದ ಮಂತ್ರಿಮಂಡಲದವರೆಗೂ ನಿಷ್ಪಕ್ಷಪಾತವಾಗಿ ಕಾಣಲು ಸಿಗಬಹುದು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಮೋದಿ 1 ವಿನಾಶಕಾರಿ ಸರಕಾರವಾದರೆ, ಮೋದಿ 2 ಭ್ರಷ್ಟಾಚಾರಿ ಸರಕಾರವಾಗಿತ್ತು, ಇದೀಗ ಬಾಲಂಗೋಚಿಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬಂದ ಮೋದಿ 3 ಸಮ್ಮಿಶ್ರ ಸರ್ಕಾರ ಒಂದು ಸೋರಿಕೆ ಸರಕಾರವಾಗಿದೆ. ಮೊದಲ ಐದು ವರ್ಷಗಳು ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ. ಯಂತಹಾ ಜನಸಾಮಾನ್ಯರ ಆರ್ಥಿಕತೆಯನ್ನು ವಿನಾಶಗೊಳಿಸಿದ ವಿನಾಶಕಾರೀ ಸರಕಾರವಾದರೆ, 2ನೆಯದು ರಫೇಲ್ ಡೀಲ್ ಮತ್ತು ಚುನಾವಣಾ ಬಾಂಡ್‌ಗಳೆಂಬ ಅವ್ಯವಹಾರಗಳ ಭ್ರಷ್ಟಾಚಾರೀ ಸರಕಾರವಾಗಿತ್ತು. ಇದೀಗ ಮೋದಿ 3 ಸರಕಾರ ನೀಟ್ ಯು.ಜಿ, ನೀಟ್ ಪಿ.ಜಿ, ಯು.ಜಿ.ಸಿ.ನೆಟ್ , ಸಿ.ಎಸ್.ಐ.ಆರ್. ನೆಟ್ ಮತ್ತು ನೆಟ್ ಜಿ.ಆರ್ ಎಫ್. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ದೂಡಿದ ಅತ್ಯಂತ ಭ್ರಷ್ಟ ಮತ್ತು ದುರ್ಬಲ ಸರಕಾರವಾಗಿ ಮೂಡಿಬಂದಿದೆ. ಈ ವರ್ಷದ ಫೆಬ್ರವರಿ 9ರಂದು ನೀಟ್ ಪರೀಕ್ಷೆಯ ಅಭ್ಯರ್ಥಿಗಳ ನೋಂದಣಿ ಆರಂಭಿಸಿ ಒಂದು ತಿಂಗಳ ಅವಧಿಯನ್ನು ನೀಡಲಾಗಿತ್ತು. ಮಾರ್ಚ್ 9 ರ ನಂತರ ಮತ್ತೆ ಒಂದು ವಾರದ ಕಾಲ ಇದನ್ನು ವಿಸ್ತರಿಸಲಾಯಿತು. ತದನಂತರ ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಯಿತು. ಕೊನೆಗೆ ಮತ್ತೆ ಮೂರು ದಿನಗಳ ಕಾಲ ವಿಸ್ತರಿಸಲಾಯಿತು. ಹೀಗೆ ಒಂದು ತಿಂಗಳು ರಿಜಿಸ್ಟ್ರೇಷನ್ ಗೆ ಅವಧಿ ನೀಡಿದ ನಂತರ ಈ ನೋಂದಣಿ ಅವಧಿಯನ್ನು ಮತ್ತೆ ಮತ್ತೆ ಮುಂದೂಡಲು ಕಾರಣವಾದರೂ ಏನು? ಜೂನ್ 14ಕ್ಕೆ ನಿಗದಿಯಾಗಿದ್ದ ನೀಟ್ ಪರೀಕ್ಷೆ ಫಲಿತಾಂಶವನ್ನು 10 ದಿನ ಮುಂಚಿತವಾಗಿ ಅಂದ್ರೆ ಜೂನ್ ನಾಲ್ಕಕ್ಕೆ ಬಹಿರಂಗ ಪಡಿಸಿದ ಉದ್ದೇಶವಾದರೂ ಏನು? 2022 ರಲ್ಲಿ ಇಬ್ಬರು, 2020 ರಲ್ಲಿ ಮೂವರು ವಿದ್ಯಾರ್ಥಿಗಳು 720ಕ್ಕೆ 720 ಪಡೆದಿದ್ದರೆ ಈ ಬಾರಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದ ಗುಟ್ಟು ಏನು? ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ಮಂದಿಗೆ 720ಕ್ಕೆ 720 ಅಂಕಗಳು ಬಂದುದಾದರೂ ಹೇಗೆ? ಪರೀಕ್ಷೆ ಬರೆದ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಗ್ರೇಸ್ ಮಾರ್ಕ್ ನೀಡಿದ ಕಾರಣವಾದರೂ ಏನು? ಲೋಕಸಭಾ ಚುನಾವಣೆಯ ಫಲಿತಾಂಶದ ದಿನವೇ ನೀಟ್ ಪರೀಕ್ಷೆಗಳ ಫಲಿತಾಂಶ ನಿಗಧಿತ ದಿನಕ್ಕಿಂತ 10ದಿನ ಮುಂಚಿತವಾಗಿ ಪ್ರಕಟವಾದ ಕಾರಣವಾದರೂ ಏನು? ಇದನ್ನೆಲ್ಲ ನೋಡುವಾಗ ಕಾಣದ ಕೈಗಳು ಈ ಪರೀಕ್ಷೆಯಲ್ಲಿ ಹಸ್ತಕ್ಷೇಪವನ್ನು ನಡೆಸಿರುವುದು ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರೀಕ್ಷಾ ಮಾಫಿಯಾದ ಜೊತೆಗೆ ಕೈಜೋಡಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದವರು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ನೆಕ್ಕಿಲು, ಇಂಟಕ್ ಅಧ್ಯಕ್ಷ ಜಯಪ್ರಕಾಸ್ ಬದಿನಾರು ಅವರು ಉಪಸ್ಥಿತರಿದ್ದರು.
ಲೀಕ್ ಸರಕಾರ:
ಒಂದು ಕಡೆ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಲೀಕ್ ಆಗುತ್ತಿದ್ದರೆ ಇನ್ನೊಂದು ಕಡೆ ನೀಟ್ ಸರಣಿಯ ಎಲ್ಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ. ನೀಟ್ ಯು. ಜಿ. ಪರೀಕ್ಷೆಯಲ್ಲಿ ಮೊದಲಿಗೆ ಪೇಪರ್ ಲೀಕ್‌ನ ನಂತರ ಪರೀಕ್ಷಾ ಅಕ್ರಮಗಳಿಂದ ದೇಶದ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದ್ದರೆ , ನೀಟ್ ಪಿ. ಜಿ. ಯು.ಜಿ.ಸಿ.ನೆಟ್, ನೀಟ್ ಜಿ.ಆರ್.ಎಫ್. ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲ್ಪಟ್ಟು ಇನ್ನಷ್ಟು ವಿದ್ಯಾರ್ಥಿಗಳು ಅತಂತ್ರಗೊಂಡಿದ್ದಾರೆ.
ಅಮಳ ರಾಮಚಂದ್ರ