ಕಡಬ: ಪಠ್ಯ ಪೂರಕ ಚಟುವಟಿಕೆಯ ಭಾಗವಾಗಿ ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳು ಕೋಡಿಬೈಲು ದೇವಕಿ ಪೂಜಾರಿ ಅವರ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಹೊಸದೊಂದು ಕಲಿಕಾ ಲೋಕದಲ್ಲಿ ಸಂಭ್ರಮಿಸಿದರು. ಬೆಳಗ್ಗೆ ಕೆಸರು ಗದ್ದೆಗಿಳಿದ ವಿದ್ಯಾರ್ಥಿಗಳು ಗದ್ದೆ ಕೆಲಸದಲ್ಲಿ ನುರಿತ ಮಹಿಳೆಯರ ಮಾರ್ಗದರ್ಶನದಲ್ಲಿ ನೇಜಿ ತೆಗೆಯುವ, ನೇಜಿ ನಾಟಿ ಮಾಡುವ ಮೂಲಕ ಭತ್ತದ ಬೇಸಾಯದ ವಿವಿಧ ಹಂತದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.
ಗದ್ದೆಯ ಮಾಲೀಕರಿಗೆ ಮತ್ತು ಗದ್ದೆ ಕೆಲಸದಲ್ಲಿ ನುರಿತ ಮಹಿಳೆಯರಿಗೆ ಶಾಲು ಹೊದಿಸಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಬಳಿಕ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಮುಂತಾದ ಆಟವಾಡಿ ಸಂಭ್ರಮಿಸಿದರು. ಸಂಚಾಲಕರಾದ ವಂ. ಪ್ರಕಾಶ್ ಪೌಲ್ ಡಿಸೋಜಾ ನೇತೃತ್ವದಲ್ಲಿ ನಿವೃತ್ತ ಶಿಕ್ಷಕ ಜಾನ್ ವೇಗಸ್ ಅವರ ಮಾರ್ಗದರ್ಶನದಲ್ಲಿ ಪ್ರಾಂಶುಪಾಲರಾದ ವಂ. ಅಮಿತ್ ಪ್ರಕಾಶ್ ರೋಡ್ರಿಗಸ್, ಇಕೋ ಕ್ಲಬ್ ಶಿಕ್ಷಕರಾದ ಸತೀಶ್ ಪಂಜ, ಶಾಂತಿ ಪ್ರಿಯ, ಹಾಗೂ ಶಿಲ್ಪಾ ಭಾಗವಹಿಸಿದ್ದರು.