ನಿವೃತ್ತಿ ಬಳಿಕವೂ ಪ್ರೀತಿ, ಸಂಬಂಧ ಉಳಿಸಿಕೊಳ್ಳಬೇಕು: ಸಂಜೀವ ಮಠಂದೂರು
ಉಪ್ಪಿನಂಗಡಿ: ಸಂಸ್ಥೆಯೊಂದರ ಕೆಲಸದಿಂದ ನಿವೃತ್ತಿ ಪಡೆದರೂ, ಆ ಸಂಸ್ಥೆಯ ಮೇಲಿನ ಪ್ರೀತಿ, ಸಂಬಂಧಗಳನ್ನು ಸದಾ ಉಳಿಸಿಕೊಳ್ಳಬೇಕು. 40 ವರ್ಷಗಳ ಕಾಲ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘದಲ್ಲಿ 40 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಡೊಂಬಯ್ಯ ಗೌಡರು ತಾನು ಬೆಳೆದದಲ್ಲದೆ, ಶೃದ್ಧೆ, ಪ್ರಾಮಾಣಿಕತೆಯ ಕೆಲಸದಿಂದ ಸಂಸ್ಥೆಯ ಬೆಳವಣಿಗೆಗೂ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಮಾರಾಟ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿರುವ ಡೊಂಬಯ್ಯ ಗೌಡರವರು ಜೂ.30ರಂದು ಸೇವಾ ನಿವೃತ್ತಿ ಹೊಂದಲಿದ್ದು, ಸಂಘದ ವತಿಯಿಂದ ಜೂ.29ರಂದು ನಡೆದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಡೊಂಬಯ್ಯ ಗೌಡ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ನಿವೃತ್ತಿಯ ಬಳಿಕ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳುವ ಅವಕಾಶಗಳು ಇದ್ದು, ಪ್ರಕೃತಿಯಿಂದ ಪಡೆದುಕೊಂಡದ್ದು ಪ್ರಕೃತಿಗೆ ನೀಡುವಂತೆ ಸಮಾಜದಿಂದ ಪಡೆದುಕೊಂಡಿರುವುದನ್ನು ಸಮಾಜಕ್ಕೆ ಕೊಡುವಂತಹ ಕಾಲ ನಿವೃತ್ತಿಯ ಬಳಿಕ ಒದಗಿ ಬಂದಿದೆ. ಅದೇ ರೀತಿ ಡೊಂಬಯ್ಯ ಗೌಡರು ಕೂಡಾ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜಮುಖಿ ಕೆಲಸಗಳಿಗೂ ತಮ್ಮನ್ನು ಅರ್ಪಿಸಿಕೊಳ್ಳಲು ಅವರಿಗೆ ಭಗವಂತ ಉತ್ತಮ ಆರೋಗ್ಯ- ಭಾಗ್ಯಗಳನ್ನು ನೀಡಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಸಂಘದ ಮಾಜಿ ಅಧ್ಯಕ್ಷ ಕೆ. ವೆಂಕಟ್ರಮಣ ಭಟ್ ಪೆಲಪ್ಪಾರು ಮಾತನಾಡಿ, ತಾನು ದುಡಿಯುವ ಸಂಸ್ಥೆ ತನ್ನದೇ ಸಂಸ್ಥೆಯೆಂಬ ಮನೋಭಾವದಡಿ 40 ವರ್ಷಗಳ ಕಾಲ ಡೊಂಬಯ್ಯ ಗೌಡರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇವರದ್ದು ಮಾತು ಕಮ್ಮಿಯಾದರೂ, ಕೆಲಸ ಜಾಸ್ತಿ. ಇವರು ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡವರು. ನಿವೃತಿಯ ಬಳಿಕ ಹೊಸ ಹೊಸ ಅವಕಾಶಗಳು ತೆರೆಯಲಿದ್ದು, ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪಿ. ಶೇಷಪತಿ ರೈ ಮಾತನಾಡಿ, ಕಾಯಕವೇ ಕೈಲಾಸವೆಂದು ಪ್ರಾಮಾಣಿಕವಾಗಿ ಸಂಘದಲ್ಲಿ ಕರ್ತವ್ಯ ನಿರ್ವಹಿಸಿದವರು ಡೊಂಬಯ್ಯ ಗೌಡರು. ಅವರ ಮುಂದಿನ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಮಾತನಾಡಿ, ಡೊಂಬಯ್ಯ ಗೌಡರ ಕರ್ತವ್ಯ ಹೇಗಿತ್ತೆಂದರೆ ಉಪ್ಪಿನಂಗಡಿಯ ಈ ಸಂಸ್ಥೆಯಲ್ಲಿ ಈವರೆಗೆ ಅವರು ಯಾವುದೇ ಕರ್ತವ್ಯ ಲೋಪವೆಸಗಿಲ್ಲ. ಒಂದೇ ಒಂದು ಮೆಮೋ ಈವರೆಗೆ ಪಡೆದಿಲ್ಲ. ತನ್ನ ಕೆಲಸದ ಸಮಯದ ಅವಧಿಯನ್ನು ಮರೆತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು ಎಂದರು.
ಸಂಘದ ಸಿಬ್ಬಂದಿಗಳಾದ ಪುಷ್ಪರಾಜ್ ಶೆಟ್ಟಿ ಎಚ್., ಶಶಿಧರ ಹೆಗ್ಡೆ ಕೆ., ಚೇತನಾ, ನಿರ್ದೇಶಕರಾದ ಜಗದೀಶ ರಾವ್ ಮಣಿಕ್ಕಳ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು, ಶುಭ ಹಾರೈಸಿದರು.
ವೇದಿಕೆಯಲ್ಲಿ ಸೀತಮ್ಮ ಡೊಂಬಯ್ಯ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನಿರ್ದೇಶಕರಾದ ದಯಾನಂದ ಸರೋಳಿ, ಯಶವಂತ ಜಿ., ಶ್ಯಾಮಲಾ ಶೆಣೈ, ಸುಜಾತ ಆರ್. ರೈ, ರಾಮ ನಾಯ್ಕ, ಯತೀಶ್ ಶೆಟ್ಟಿ, ರಾಜೇಶ್ ಶಾಂತಿನಗರ, ಕುಂಞ ಎಂ.ಎನ್., ಸಚಿನ್ ಎಂ., ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಪ್ರತಿನಿಧಿ ಶರತ್ ಡಿ. ಉಪಸ್ಥಿತರಿದ್ದರು.
ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಸ್ವಾಗತಿಸಿದರು. ಸಿಬ್ಬಂದಿ ಕುಮಾರಿ ಶ್ರಾವ್ಯ ಪ್ರಾರ್ಥಿಸಿದರು. ರವೀಶ್ ಎಚ್.ಟಿ. ಸನ್ಮಾನ ಪತ್ರ ವಾಚಿಸಿದರು. ಚಂದ್ರಶೇಖರ ಡಿ.ಎಸ್. ವಂದಿಸಿದರು. ಪ್ರವೀಣ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.