ಅರಿಯಡ್ಕ: ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಇಲ್ಲಿ ಜೂ 22 ರಂದು 2023-2024 ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ವಿಜ್ಞಾನ ಶಿಕ್ಷಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇಂದಿರಾ ಕೆ ಇವರಿಗೆ ಬೀಳ್ಕೊಡುಗೆ ಸಮಾರಂಭ ಸರಕಾರಿ ಪ್ರೌಢಶಾಲೆ ಪಾಪೆಮಜಲಿನ ಪ್ರೇರಣಾ ವೇದಿಕೆಯಲ್ಲಿ ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಹತ್ತನೇ ತರಗತಿಯಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಿಸಿದ 42 ವಿದ್ಯಾರ್ಥಿಗಳನ್ನು ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಭವ್ಯಶ್ರೀ, ಮೋಕ್ಷ ಬಿ, ನಯನ ಶ್ರೀ ಕೆ ಎಸ್, ಪ್ರನ್ವಿತಾ, ರಮ್ಯಾ, ಚೈತ್ರಾ ಶ್ರೀ, ಫಾತಿಮತ್ ಇರ್ಶಾನ, ನಿಶಾಂತ್ ಪಿ ಇವರನ್ನು ಶಾಲು, ಹಾರ ಹಾಕಿ ಫಲಪುಷ್ಪ ನೀಡಿ ಶಾಸಕರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಳೆದ 27 ವರ್ಷಗಳ ಕಾಲ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುತ್ತಿರುವ ಇಂದಿರಾ ಶಿವಶಂಕರ ಭಟ್ ದಂಪತಿಗಳನ್ನು ಶಾಸಕರು ಸನ್ಮಾನಿಸಿ ಮಾತನಾಡಿ, ಸರಕಾರಿ ಪ್ರೌಢಶಾಲೆ ಪಾಪೆಮಜಲಿನಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕು. ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲು ಶಾಲೆಯಲ್ಲಿ ಅವಕಾಶ ಮಾಡಿಕೊಡಬೇಕು. ಕಲಿಕೆಗೆ ಬಡತನವಿಲ್ಲ .ದೇಶಕ್ಕೆ ಕೊಡುಗೆ ಕೊಡುವ ಜನರು ನೀವಾಗಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಏನೂ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಶಿಕ್ಷಕ ವೃತ್ತಿಗೆ ಸೇರಿ ನೂರಾರು ವಿದ್ಯಾರ್ಥಿಗಳನ್ನು ಬೆಳೆಸಿ ಇಂದು ನಿವೃತ್ತಿ ಹೊಂದುತ್ತಿರುವ ಇಂದಿರಾ ಕೆ ಅವರು ಇನ್ನಷ್ಟು ವರ್ಷಗಳ ಕಾಲ ಕೆಲಸ ಮಾಡಲು ಶಕ್ತರು ಎಂದು ಹೇಳುತ್ತಾ ಅವರಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ಯಾಂಕ್ ಆಫ್ ಬರೋಡ ಇದರ ನಿವೃತ್ತ ಪ್ರಬಂಧಕರಾದ ನಾರಾಯಣ ರೈ ಮಡ್ಯಂಗಳ ,ಮಾತನಾಡುತ್ತಾ, ಶೇಕಡ 100 ಫಲಿತಾಂಶ ದಾಖಲಿಸುವುದು ಸುಲಭದ ಮಾತಲ್ಲ. ಈ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು . ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ ಆ ವೃತ್ತಿಯನ್ನು ಕೈಗೊಂಡು ನಿವೃತ್ತರಾಗುತ್ತಿರುವ ಇಂದಿರಾ ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ನ್ಯಾಯವಾದಿ ಅರಿಯಡ್ಕ ಉದಯಶಂಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದರು
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಎಸ್ ಡಿ ಎಂ ಸಿ ಯ ಸದಸ್ಯರೂ, ಪ್ರಗತಿಪರ ಕೃಷಿಕರೂ ಆದ ವಾಸು ಪೂಜಾರಿ ಗುಂಡ್ಯಡ್ಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಸಾವಿತ್ರಿ , ವೇದಿಕೆಯಲ್ಲಿ ಉಪಸ್ಥಿತರಿದ್ದು ನಿವೃತ್ತರಿಗೆ ಶುಭ ಹಾರೈಸಿದರು. ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿ ಮಾತನಾಡಿ ,ಶೇಕಡ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತರಾಗುತ್ತಿರುವ ವಿಜ್ಞಾನ ಶಿಕ್ಷಕಿ ಇಂದಿರಾ ಕೆ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಪಾಪೆ ಮಜಲು ಪ್ರೌಢಶಾಲೆ ಇನ್ನೂ ಎತ್ತರಕ್ಕೆ ಬೆಳೆದು ಮಾದರಿ ಶಾಲೆ ಯಾಗ ಬೇಕು.ಊರಿನವರ ಸಹಕಾರ ಮುಂದೆಯೂ ಇದೇರೀತಿ ಇರಲಿ ಎಂದು ಆಶಿಸಿದರು.ಪೋಷಕರ ಪರವಾಗಿ ಗ್ರಾಮ ಪಂಚಾಯತ್ ಬಡಗನ್ನೂರು ಇದರ ಸದಸ್ಯರಾದ ಜ್ಯೋತಿ ಶುಭ ಹಾರೈಸಿದರು.
ಸನ್ಮಾನ
ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ , ಶಿಕ್ಷಕರ ಸಂಘದ ಕೋಶಾಧಿಕಾರಿ ಮಮತಾ ಆಗಮಿಸಿ ಶಿಕ್ಷಕರ ಸಂಘದ ವತಿಯಿಂದ ಅಭಿನಂದಿಸಿದರು.
ಸರಕಾರಿ ಪ್ರೌಢಶಾಲೆ ಸವಣೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಮಾಮ ಚ್ಚನ್ ಹಾಗೂ ಸಂಗೀತ ಶಿಕ್ಷಕಿ ಪವಿತ್ರ ಉಡುಪ ಆಗಮಿಸಿ ನಿವೃತ್ತರನ್ನು ಅಭಿನಂದಿಸಿ ಶುಭ ಹಾರೈಸಿದರು.
ನಿವೃತ್ತ ಸೈನಿಕರಾದ ಅಮ್ಮಣ್ಣ ರೈ ಡಿ ಪಾಪೆಮಜಲು, ,ಎಸ್ ಡಿ ಎಂ ಸಿ ಯ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ತಿಲಕ್ ರೈ ಕುತ್ಯಾಡಿ,, ಎಸ್ ಡಿ ಎಂ ಸಿ ಯ ಶಿಕ್ಷಣ ತಜ್ಞರಾದ ದಶರಥ ರೈ ಕುತ್ಯಾಡಿ ಸದಸ್ಯರಾದ ಹೊನ್ನಪ್ಪ ನಾಯ್ಕ, ನಾಗೇಶ ನಾಯ್ಕ, ಸೀತಾರಾಮ ಪ್ರೇಮನಾಥ, ಬಿ ತಿಮ್ಮಪ್ಪ, ಲೀಲಾವತಿ, ರೇವತಿ, ಸುಮಯ್ಯ, ಸುಂದರಿ, ಭಾಗಿರಥಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲಿನ ಶಿಕ್ಷಕರಾದ ಜಯಲತ, ಪುಷ್ಪಾವತಿ, ರಜನಿ, ಮೇಬಲ್ ಡಿಸೋಜ, ಸ್ವಾತಿ, ಹಿರಿಯ ವಿದ್ಯಾರ್ಥಿಗಳಾದ ಆಕಾಶ್ ಪಿ ಜೆ , ನವೀನಕುಮಾರ , ಯಶ್ವಿತ್ ಯು, ವಿಕ್ರಂ,, ಅಭಿನವ್ ರಾಜ್ ಎನ್, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ನಿವೃತ್ತಿ ಹೊಂದುತ್ತಿರುವ ಗುರುಗಳನ್ನು ಅಭಿನಂದಿಸಿದರು. ಜಸ್ಮಿತಾ , ವಿನುತಾ, ದೀಪಿಕಾ , ಭವ್ಯಶ್ರೀ , ನಿಶ್ಮಿತಾ, ರಮ್ಯಾ, ದೀಕ್ಷಾ, ಸಿಂಚನ, ಗುರುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ವಿಜ್ಞಾನ ಗುರುಗಳ ಗುಣಗಾನವನ್ನು ಹಾಡಿನ ಮುಖಾಂತರ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿದ ಇಂದಿರಾ ಕೆ ಅವರು ಮಾತನಾಡುತ್ತಾ , ಬಾಲ್ಯದಲ್ಲಿಯೇ ಶಿಕ್ಷಕಿಯಾಗುವ ಕನಸಿತ್ತು .ಅದು ನೆರವೇರಿದೆ ಎಂದರು. ತನಗೆ ವೃತ್ತಿ ಜೀವನದಲ್ಲಿ ಸರ್ವ ವಿಧದಲ್ಲೂ ಸಹಕರಿಸಿದ ಸರ್ವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಕೊಡುಗೆ
ನಿವೃತ್ತಿ ಹೊಂದುತ್ತಿರುವ ಇಂದಿರಾ ಕೆ ಅವರು ಶಾಲೆಯ ಬಿಸಿಯೂಟಕ್ಕೆ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ ಹಾಗೂ ಹತ್ತನೇ ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡುವ ಸಲುವಾಗಿ ರೂಪಾಯಿ 25,000ವನ್ನು ದತ್ತಿನಿದಿಯಾಗಿ ಇಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಸವಣೂರು ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಪವಿತ್ರ ಉಡುಪ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ, ದ್ವಿತೀಯ , ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿದರು. ಗಣಿತ ಶಿಕ್ಷಕರಾದ ಹರಿಪ್ರಸಾದ್ ಗಣಿತ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದ ಭವ್ಯಶ್ರೀಗೆ ನಗದು ಬಹುಮಾನವನ್ನು ನೀಡಿದರು.
ಶಿಕ್ಷಕರಿಗೆ ಅಭಿನಂದನೆ
ಶೇಕಡ 100 ಫಲಿತಾಂಶದ ದಾಖಲಿಸುವಲ್ಲಿ ಶ್ರಮಿಸಿದ ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದದವರನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಅಭಿನಂದಿಸಿದರು.
ಶಾಸಕರ ಮನಗೆದ್ದ ವಿದ್ಯಾರ್ಥಿ
ತಾನು ಬಿಡಿಸಿದ ಶಾಸಕರ ಭಾವಚಿತ್ರವನ್ನು ಶಾಸಕರಿಗೆ ನೀಡಿದ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಚಿರಾಗ್ ಅವರನ್ನು ಶಾಸಕರು ಅವನಿಗೆ ಶಾಲು ಹೊದೆಸಿ ಆಶೀರ್ವದಿಸಿದರು. ಇದೇ ವಿದ್ಯಾರ್ಥಿ ವಿಜ್ಞಾನ ಗುರುಗಳ ಚಿತ್ರವನ್ನು ಬಿಡಿಸಿ ಅವರಿಗೆ ನೀಡುವ ಮೂಲಕ ಅವರ ಗೌರವಕ್ಕೂ ಪಾತ್ರನಾದರು.
ವಿದ್ಯಾರ್ಥಿಗಳಾದ ಅನುಶ್ರೀ,ಜಸ್ಮಿತಾ,ರಕ್ಷಾ ಪ್ರಾರ್ಥಿಸಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಮೋನಪ್ಪ ಬಿ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಹರಿಪ್ರಸಾದ್ ಅಭಿನಂದನಾ ಭಾಷಣ ಮಾಡಿ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ವಂದಿಸಿದರು.ಶಿಕ್ಷಕಿ ಸವಿತಾ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶಾಲೆಟ್ ಜೇನ್ ರೆಬೆಲ್ಲೊ ಹಾಗೂ ಹರಿಣಾಕ್ಷಿ ಕೆ ಸಹಕರಿಸಿದರು.