ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುನ್ನಡೆಸುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ 2024-25ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಕಾರ್ಯದರ್ಶಿಗಳೂ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕಾದರೆ ಮನೆಯ ಪರಿಸರ ಉತ್ತಮವಾಗಿರಬೇಕು. ಅವರ ಮಾನಸಿಕತೆಯನ್ನು ಅರ್ಥೈಸಿಕೊಂಡು ತಂದೆ ತಾಯಿಗಳು ಹಾಗೂ ಶಿಕ್ಷಕರು ನಡೆಯಬೇಕು. ಮಕ್ಕಳ ಮನಸ್ಸನ್ನು ವಿಚಲಿತಗೊಳಿಸಬಾರದು. ಆಧುನಿಕ ಆಕರ್ಷಣೆಯಿಂದ ಪರಿತಪಿಸುವಂತಾಗಿದೆ. ಅವರ ನಡೆ-ನುಡಿ ರೀತಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ನುಡಿದರು. ಒಬ್ಬ ವ್ಯಕ್ತಿಯನ್ನು ಶಕ್ತಿಯನ್ನಾಗಿ ರೂಪಿಸುವ ಆದ್ಯ ಕರ್ತವ್ಯ ನಮ್ಮೆಲ್ಲರ ಮೇಲೆ ಇದೆ. ಅವರ ಮನೋಂತರ್ಯವನ್ನು ಅರ್ಥ ಮಾಡಿಕೊಂಡು ಮಕ್ಕಳನ್ನು ಸೃಜನಶೀಲರನ್ನಾಗಿ ಪರಿವರ್ತಿಸಬೇಕು. ಈ ಸಂಸ್ಥೆಯು ಉತ್ತಮ ಫಲಿತಾಂಶದೊಂದಿಗೆ ಮುನ್ನಡೆಯುತ್ತಿದೆ. ಇನ್ನು ಅಭಿವೃದ್ಧಿಶೀಲವಾಗಿ ಬೆಳೆಯಬೇಕಾದರೆ ಪೋಷಕರ ಸಹಕಾರ ಅಗತ್ಯವಾಗಿದೆ. ಸಕಾಲಕ್ಕೆ ಸರಿಯಾಗಿ ರೂಪಿಸುವ ಶಾಲೆಯ ನೀತಿ, ನಿಯಮಗಳಿಗೆ ಪೋಷಕರು ಸಹಕರಿಸಬೇಕೆಂದು ಹೇಳಿದರು.
ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಬಿ.ಟಿ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳ ಕಲಿಕೆಯ ಕುರಿತು ಕಾಳಜಿ ವಹಿಸಬೇಕು. ಸೃಜನಾತ್ಮಕವಾಗಿ ಬೆಳೆಸಲು ಪೋಷಕರ ಪಾತ್ರವು ಅತಿ ಮುಖ್ಯವಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷರಾದ ಶೀನಪ್ಪ ಗೌಡರವರು ಮಾತನಾಡಿ, ಶಾಲೆಗೆ ಮಕ್ಕಳು ಗೈರು ಹಾಜರಾತಿ ಆಗದಂತೆ ಪೋಷಕರು ನೋಡಿಕೊಂಡರೆ ಮಕ್ಕಳ ಕಲಿಕೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು. ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಮುಕುಂದ ಗೌಡರವರು ಮಾತನಾಡಿ, ಬಿಜಿಎಸ್ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಇಲ್ಲಿ ದೊರಕುತ್ತಿದೆ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯನಿ ಲಕ್ಷ್ಮಿ ಪಿ. ಶೈಕ್ಷಣಿಕ ವರ್ಷದ ಯೋಜನೆಗಳನ್ನು ಪರಿಚಯಿಸಿದರು. ಗಣಿತ ಶಿಕ್ಷಕಿ ಶಕುಂತಲಾ ಕೆ. ಸ್ವಾಗತಿಸಿದರು. ಸಮಾಜ ಶಿಕ್ಷಕಿ ರಜನಿ ಹೆಚ್. ವಂದಿಸಿದರು. ಶಿಕ್ಷಕರಾದ ಮೋಹನ್ ಹೆಚ್, ಭವ್ಯ ವೈ ಸಹಕರಿಸಿದರು. ವಿಜ್ಞಾನ ಶಿಕ್ಷಕಿ ಸವಿತಾ ಪಿ.ಸಿ ಕಾರ್ಯಕ್ರಮ ನಿರೂಪಿಸಿದರು.