ಉಪ್ಪಿನಂಗಡಿಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆ

0

ಸಮುದಾಯ ಆರೋಗ್ಯ ಕೇಂದ್ರಗಳು ಜನಸ್ನೇಹಿಯಾಗಬೇಕು: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಸಮುದಾಯ ಆರೋಗ್ಯ ಕೇಂದ್ರಗಳು ಜನ ಸ್ನೇಹಿಯಾಗುವ ಮೂಲಕ ಜನರಿಗೆ ಹತ್ತಿರವಾಗಬೇಕು. ಚಿಕಿತ್ಸೆಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಸಿಗಬೇಕು. ಯಾವುದೇ ಲೋಪ ದೋಷಗಳು ಬಾರದಂತೆ ಎಚ್ಚರವಹಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿಗಳಿಗೆ, ಆರೋಗ್ಯ ರಕ್ಷಾ ಸಮಿತಿಗೆ ಮಹತ್ತರವಾದ ಜವಾಬ್ದಾರಿ ಇದೆ. ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ರೋಗಿಗೂ ಸಾಂತ್ವನ ದೊರೆಯಬೇಕು. ಸೌಲಭ್ಯ ಇಲ್ಲ. ವೈದ್ಯರಿರಲಿಲ್ಲ ಎಂಬ ದೂರುಗಳು ಬರಬಾರದು. ಜನರೊಂದಿಗೆ ಬೆರೆಯುವ ಮೂಲಕ ಜನ ಸೇವೆಯನ್ನು ಮಾಡಬೇಕು ಎಂದು ಹೇಳಿದರು.


ರಕ್ಷಾ ಸಮಿತಿಯವರು ಏನು ಮಾಡಬೇಕು:
ಆರೋಗ್ಯ ರಕ್ಷಾಸಮಿತಿಯವರಿಗೆ ಕೇಂದ್ರದಲ್ಲಿ ಮಹತ್ತರವಾದ ಜವಾಬ್ದಾರಿ ಇದೆ. ಇಲ್ಲಿನ ಕೊರತೆಗಳನ್ನು ನೀಗಿಸುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಉತ್ತಮ ಸೇವೆ ದೊರೆಯುವಂತೆ ಮಾಡಬೇಕು. ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಆರೋಗ್ಯಕ್ಕೆ ಸಂಬಂಧಿಸಿದಂತೆ ಶಿಬಿರಗಳನ್ನು ಮಾಡಿ ಜನರಿಗೆ ಸೇವೆ ನೀಡಬೇಕು. ಜನ ಈ ಕೇಂದ್ರದಿಂದ ಏನು ಬಯಸುತ್ತಾರೋ ಅದನ್ನು ಕೊಡಿಸುವಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರಲ್ಲದೆ, ಇಲ್ಲಿಏನೆಲ್ಲಾ ಸೌಲಭ್ಯಗಳು ಬೇಕೋ ಅದನ್ನು ಪಡೆದುಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಶಾಸಕರು ತಿಳಿಸಿದರು.


ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ರ:
ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ರಕ್ಕೆ ಮಂಜೂರಾತಿ ದೊರಕಿದ್ದು, ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಕೇಂದ್ರ ಉಪ್ಪಿನಂಗಡಿ ಸಮುದಾಯ ಕೇಂದ್ರದಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದ ಅಶೋಕ್ ಕುಮಾರ್ ರೈ, ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಮಂಜೂರು ಮಾಡುವ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇನೆ ಮತ್ತು ಇದಕ್ಕಾಗಿ ಪ್ರಸ್ತಾವವನೆಯನ್ನು ಕಳುಹಿಸಲಾಗಿದೆ. ಉಪ್ಪಿನಂಗಡಿ ಬೆಳೆಯುತ್ತಿರುವ ಪಟ್ಟಣವಾದ್ದರಿಂದ ಇಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿದೆ. ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಇಲ್ಲಿ ಯಾವುದೂ ಇಲ್ಲ ಎಂಬ ಮನೋಭಾವ ಬರಬಾರದು ಎಂದು ಶಾಸಕರು ಹೇಳಿದರು.


ಆಂಬುಲೆನ್ಸ್ ತಿಂಗಳಿಗೆ 3 ಸೇವೆ ?:
ಉಪ್ಪಿನಂಗಡಿಯಲ್ಲಿರುವ ಆಂಬುಲೆನ್ಸ್ ಒಂದು ತಿಂಗಳಲ್ಲಿ ಮೂರು ಸಾರಿ ಓಡಿದೆ ಸಾಕಾ? ಸರಕಾರ ಉಚಿತವಾಗಿ ಈ ಸೇವೆಯನ್ನು ಜನರಿಗೆ ನೀಡಿದೆ. ಜನರು ತುರ್ತು ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉಚಿತ ಆಂಬುಲೆನ್ಸ್ ವ್ಯವಸ್ಥೆಯ ಬಗ್ಗೆ ಜನರಿಗೆ ತಿಳಿಸಬೇಕು . ಸಮುದಾಯ ಆರೋಗ್ಯ ಕೇಂದ್ರದ ಬಳಿ ಎರಡು ಆಂಬುಲೆನ್ಸ್ ಇದ್ದು ಇದು ಜನರ ಸೇವೆಗೆಂದು ಸರಕಾರ ನೀಡಿದೆ. ನಾನು ಇಲ್ಲಿಗೆಂದು ಸುಮಾರು 18 ಲಕ್ಷ ರೂ. ವೆಚ್ಚದ ಹೊಸ ಅಂಬುಲೆನ್ಸ್ ಒದಗಿಸಿದ್ದೇನೆ ಅದು ಎಲ್ಲರಿಗೂ ಉಚಿತವಾಗಿಯೇ ಇರುತ್ತದೆ. ಯಾವುದೇ ಆಸ್ಪತ್ರೆಗೆ ತೆರಳುವುದಾದರೂ ಜನ ಇದನ್ನು ಬಳಸಿಕೊಳ್ಳಿ ಎಂದು ಶಾಸಕರು ಹೇಳಿದರು.


ಜನೌಷಧಿ ಕೇಂದ್ರ ತೆರವಿಗೆ ಸೂಚನೆ:
ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಕಟ್ಟಡದಲ್ಲಿ ಉಚಿತವಾಗಿ ಜನೌಷಧಿ ಕೇಂದ್ರಕ್ಕೆ ಕೊಠಡಿಯನ್ನು ನೀಡಿದ್ದು ಸರಿಯಲ್ಲ. ಇದು ಸರಕಾರದ ಸೊತ್ತು. ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್ ಕೇಂದ್ರ ಆರಂಭವಾಗುವ ಕಾರಣಕ್ಕೆ ಜನೌಷಧಿ ಕೇಂದ್ರವನ್ನು ತೆರವು ಮಾಡುವಂತೆ ವೈದ್ಯರಿಗೆ ಶಾಸಕರು ಸೂಚನೆಯನ್ನು ನೀಡಿದರು.


ಇಂದಿರಾ ಕ್ಯಾಂಟೀನ್ ಬೇಕು:
ಉಪ್ಪಿನಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿ ಎಂದು ವೈದ್ಯಾಧಿಕಾರಿ ಕೃಷ್ಣಾನಂದ ಶಾಸಕರಲ್ಲಿ ಮನವಿ ಮಾಡಿದರು. ಈಗಾಗಲೇ ವಿಟ್ಲಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವ ಎಂದು ಶಾಸಕರು ತಿಳಿಸಿದರು.


ತಾಳ್ಮೆಯಿಂದ ವರ್ತಿಸಿ:
ಜನರು ನೋವನ್ನು ಹೊತ್ತುಕೊಂಡು ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಅವರು ಇಲ್ಲಿಗೆ ಬರುವಾಗ ತುಂಬಾ ಟೆನ್ಷನ್‌ನಲ್ಲಿ ಇರುತ್ತಾರೆ ಆ ವೇಳೆ ಕೆಲವರು ಎನೇನೋ ಮಾತನಾಡಬಹುದು. ಆ ವೇಳೆ ಇಲ್ಲಿನ ಸಿಬಂದಿಗಳಾಗಲಿ, ರಕ್ಷಾ ಸಮಿತಿಯರವರಾಗಲಿ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ವರ್ತಿಸಬೇಕು. ಅನಗತ್ಯವಾಗಿ ಕಿರುಕುಳ ನೀಡಿದ್ದಲ್ಲಿ ಅಂಥವರ ವಿರುದ್ದ ಪೊಲೀಸರಿಗೆ ದೂರು ಕೊಡಿ ಎಂದು ಶಾಸಕರು ತಿಳಿಸಿದರು.


ಸಭೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. , ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಿದ್ದಿಕ್ ಕೆಂಪಿ, ಜಯಶೀಲ, ಆನಂದ, ಆಚಿ ಕೆಂಪಿ, ಫಾರೂಕ್ ಜಿಂದಗಿ, ವೈದ್ಯರುಗಳಾದ ಡಾ.ಸ್ಮಿತಾ, ಡಾ ಮನೋಜ್ ಉಪಸ್ಥಿತರಿದ್ದರು. ಸಿಬ್ಬಂದಿ ರೇಖಾ ಸ್ವಾಗತಿಸಿದರು, ಗೀತಾ ವಂದಿಸಿದರು. ಪ್ರವೀಣ್ ಮಥಾಯಿಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here