ಕಡಬ ತಾಲೂಕಾದರೂ ಪ್ರತ್ಯೇಕ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಕ್ಕೆ ಸಿಕ್ಕಿಲ್ಲ ಅವಕಾಶ

0

ವರದಿ: ಪ್ರವೀಣ್ ಚೆನ್ನಾವರ

ಪುತ್ತೂರು : ಕಡಬ ತಾಲೂಕು ರಚನೆಯಾಗಿ ಬಹುತೇಕ ಎಲ್ಲಾ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯಾರಂಭ ಮಾಡುತ್ತಿದೆ.ಆದರೆ ಕಡಬ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಪ್ರತ್ಯೇಕ ಕ್ರೀಡಾಕೂಟಕ್ಕೆ ಅವಕಾಶವನ್ನು ಇಲಾಖೆ ಈವರೆಗೂ ಜಾರಿ ಮಾಡಿಲ್ಲ.ಈಗಲೂ ಪುತ್ತೂರು ಹಾಗೂ ಕಡಬ ತಾಲೂಕಿನ ಮಕ್ಕಳಿಗೆ ಕ್ರೀಡಾಕೂಟಗಳು ಪುತ್ತೂರು ತಾಲೂಕಿಗೆ ಎಂದು ನಡೆಯುತ್ತಿದೆ.

ಇದರಿಂದ ಎರಡೂ ತಾಲೂಕಿನ ಕ್ರೀಡಾಪಟುಗಳಿಗೆ ಸಮಸ್ಯೆಯಾಗುತ್ತದೆ.ಜಿಲ್ಲಾ ಮಟ್ಟದ ಸ್ಪರ್ಧೆಗೆ ಎರಡೂ ತಾಲೂಕಿನಿಂದ ಆಯ್ಕೆಯಾದವರು ಆಯ್ಕೆಯಾಗುತ್ತಾರೆ.ಪ್ರತ್ಯೇಕವಾಗಿ ಕ್ರೀಡಾಕೂಟ ನಡೆದರೆ ಎರಡೂ ತಾಲೂಕಿನ ಮಕ್ಕಳಿಗೂ ಜಿಲ್ಲಾ ಮಟ್ಟದ ಸ್ಪರ್ಧೆಯವರೆಗೂ ಭಾಗವಹಿಸಬಹುದು.ಕಡಬ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿಭಾಗದಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು 91 ,ಖಾಸಗಿ ಅನುದಾನಿತ 11 ,ಖಾಸಗಿ ಅನುದಾನರಹಿತ 23 ಶಾಲೆಗಳಿದ್ದು ,ಒಟ್ಟು 125 ಶಾಲೆಗಳಿವೆ.ಈ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲೇ ಭಾಗವಹಿಸಬೇಕಾದ ಅನಿವಾರ್ಯತೆ.ಈ ನಿಟ್ಟಿನಲ್ಲಿ ಕಡಬ ತಾಲೂಕಿಗೆ ಪ್ರತ್ಯೇಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಗಳನ್ನು ಪ್ರತ್ಯೇಕವಾಗಿ ಮಾಡಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ವರ್ಷ ನಡೆಸಲ್ಪಡುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿವಿಧ ಪಂದ್ಯಾಟಗಳು ಮತ್ತು ಕ್ರೀಡಾಕೂಟಗಳನ್ನು ಪುತ್ತೂರು ಹಾಗೂ ಕಡಬ ತಾಲೂಕಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಬೇಕು ಎಂಬ ಕೂಗನ್ನು ಕಳೆದ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಹಾಗೂ ಮಾನ್ಯ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮತ್ತು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿಯವರಿಗೆ ಕಳೆದ ವರ್ಷ ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ ಅನುದಾನಗಳನ್ನು ಒದಗಿಸುವ ಬಗ್ಗೆ ಹಾಗೂ ಆಯಾ ತಾಲೂಕುಗಳ ಶಾಲೆಗಳನ್ನು ವಿಂಗಡಿಸುವ ಬಗ್ಗೆ ಮೌಖಿಕವಾಗಿ ಅಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಅದೂ ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಾದರೂ ಜಾರಿಯಾಗಬೇಕಿದೆ.

2024 25ನೇ ಸಾಲಿನ ಇಲಾಖೆಯ ವತಿಯಿಂದ ನಡೆಯುವ ಎಲ್ಲಾ ಕ್ರೀಡಾಕೂಟಗಳನ್ನು ಹಾಗೂ ಪಂದ್ಯಾಟಗಳನ್ನು ಪ್ರತ್ಯೇಕವಾಗಿ ಕಡಬ ತಾಲೂಕಿಗೆ ನಡೆಸುವಂತೆ ಈಗಾಗಲೇ ಮನವಿಯನ್ನು ಸಲ್ಲಿಸಿರುತ್ತೇವೆ. ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಕ್ರೀಡಾಕೂಟಗಳನ್ನು ಹಾಗೂ ಪಂದ್ಯಾಟಗಳ ನಡೆಸಲು ಅನುವು ಮಾಡಿಕೊಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
ಕಡಬ ಹಾಗು ಪುತ್ತೂರು ತಾಲೂಕುಗಳಿಂದ ಅತ್ಯುತ್ತಮ ತಂಡಗಳು ತರಬೇತಿಯನ್ನು ಪಡೆಯುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಆದುದರಿಂದ ಈ ಶೈಕ್ಷಣಿಕ ವರ್ಷದಿಂದ ಕಡಬ ಹಾಗು ಪುತ್ತೂರು ತಾಲೂಕಿಗೆ ಪ್ರತ್ಯೇಕವಾಗಿ ಪಂದ್ಯಾಟಗಳನ್ನು ಮತ್ತು ಕ್ರೀಡಾಕೂಟಗಳನ್ನು ಸಂಘಟಿಸಲು ಇಲಾಖೆಯ ಅನುಮತಿ ನೀಡಬೇಕಾಗಿ ವಿನಂತಿ.
ಈಗಾಗಲೇ ಪದವಿಪೂರ್ವ ಕಾಲೇಜು ವಿಭಾಗದ ಪಂದ್ಯಾಟಗಳನ್ನು ಕಡಬ ತಾಲೂಕಿಗೆ ಪ್ರತ್ಯೇಕವಾಗಿ ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ. ಕಡಬ ತಾಲೂಕಿನಲ್ಲಿ ಈಗಾಗಲೇ ತಾಲೂಕು ಪಂಚಾಯಿತಿ ಕಚೇರಿ ತಹಶೀಲ್ದಾರ ಕಚೇರಿ ಉಪಕಜಾನೆ ಹಾಗೂ ಇನ್ನಿತರ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಸರಕಾರಿ ನೌಕರರ ಸಂಘ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಅಸ್ತಿತ್ವದಲ್ಲಿದೆ. ಆದುದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಕ್ರೀಡಾಕೂಟಗಳನ್ನು ಪಂದ್ಯಾಟಗಳನ್ನು ಕಡಬ ತಾಲೂಕಿಗೆ ಪ್ರತ್ಯೇಕವಾಗಿ ಹಮ್ಮಿಕೊಳ್ಳಲು ಅನುಮತಿಯನ್ನು ನೀಡಬೇಕಾಗಿ ಸಂಬಂಧಪಟ್ಟಂತಹ ಗೌರವಾನ್ವಿತ ಜನಪ್ರತಿನಿಧಿಗಳನ್ನು ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿಕೊಳ್ಳುತ್ತೇನೆ.
-ಮಾಮಚ್ಚನ್ ಎಂ.
ಜಿಲ್ಲಾ ಕಾರ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು.

LEAVE A REPLY

Please enter your comment!
Please enter your name here