ಪುತ್ತೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತಿಂಗಳಾಡಿ ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಸಂಘದ ಅಧ್ಯಕ್ಷ ಆನಂದ ರೈ ಕೆದಂಬಾಡಿಮಠರವರ ಅಧ್ಯಕ್ಷತೆಯಲ್ಲಿ ಜೂ.30 ರಂದು ಶಾಲೆಯಲ್ಲಿ ನಡೆಯಿತು.
ಸಂಘದ ಮುಂದಿನ ಚಟುವಟಿಕೆಗಳ ಬಗ್ಗೆ ಹಾಗೇ ಶಾಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಮೀದ್‌ರವರು ಶಾಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ಅವರು ತಿಳಿಸಿದರು. ಈಗಾಗಲೇ ಎಸ್‌ಡಿಎಂಸಿ ವತಿಯಿಂದ ಓರ್ವ ಶಿಕ್ಷಕಿಯನ್ನು ನೇಮಕ ಮಾಡಲಾಗಿದ್ದು ಇನ್ನು ಕೂಡ ಓರ್ವ ಶಿಕ್ಷಕಿಯ ಅವಶ್ಯಕತೆ ಇದೆ ಎಂದ ಅವರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಓರ್ವ ಶಿಕ್ಷಕರನ್ನು ನೇಮಕ ಮಾಡುವಂತೆ ಕೇಳಿಕೊಂಡರು. ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದು ಶಿಕ್ಷಕರ ಕೊರತೆಯಿಂದ ಪಾಠಪ್ರವಚನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಅವರು ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದಲ್ಲಿ ಯಾವುದೇ ಫಂಡ್ ಇಲ್ಲದೇ ಇರುವುದರಿಂದ ಹಿರಿಯ ವಿದ್ಯಾರ್ಥಿಗಳು ಆರ್ಥಿಕ ಸಹಕಾರವನ್ನು ನೀಡಿದರೆ ಶಿಕ್ಷಕರ ನೇಮಕ ಮಾಡಬಹುದು ಈ ಬಗ್ಗೆ ಹಿರಿಯ ವಿದ್ಯಾರ್ಥಿ ಸಂಘದ ವಾಟ್ಸಫ್ ಗ್ರೂಪ್‌ನಲ್ಲಿ ಮಾಹಿತಿ ಹಾಕುವುದು ಎಂದು ನಿರ್ಣಯಿಸಲಾಯಿತು. ಸಂಘದ ಹೆಸರಿನಲ್ಲಿ ಸ್ಥಳೀಯ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆಯುವುದು ಎಂದು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಯಾನಂದ ರೈ ಮಿತ್ರಂಪಾಡಿ ಮತ್ತು ಜಯರಾಮ ರೈ ಮಿತ್ರಂಪಾಡಿ, ಗೌರವ ಸಲಹೆಗಾರರಾದ ವಾಣಿಶ್ರೀ, ಕಾರ್ಯದರ್ಶಿ ಭಾಸ್ಕರ ಬಲ್ಲಾಳ್, ಕೋಶಾಧಿಕಾರಿ ಸೌಮ್ಯ ರೈ,ಸದಸ್ಯರಾದ ಕಿಶೋರ್ ಗೌಡ, ವಿಠಲ ರೈ ಮಿತ್ತೋಡಿ, ಸಂದೀಪ್, ನೌಷಾದ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಸೌಮ್ಯ ಸ್ವಾಗತಿಸಿ, ಗೌರವ ಸಲಹೆಗಾರರಾದ ವಾಣಿಶ್ರೀ ವಂದಿಸಿದರು.
ಆರ್ಥಿಕ ಸಹಾಯ
ಶಾಲಾ ಹಳೆ ವಿದ್ಯಾರ್ಥಿ, ಸಂಘದ ಗೌರವ ಸಲಹೆಗಾರರಾದ ಪ್ರಸ್ತುತ ಬೆಟ್ಟಂಪಾಡಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಾಣಿಶ್ರೀಯವರು ಸಂಘಕ್ಕೆ ದೇಣಿಗೆ ರೂಪದಲ್ಲಿ ರೂ.5 ಸಾವಿರನ್ನು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಹಾಗೇ ಶಾಲೆಯ ಕಿಟಕಿ ಬಾಗಿಲುಗಳ ದುರಸ್ತಿಗೆ ರೂ.15,600 ನೀಡಿ ಸಹಕರಿಸಿದ ಶಾಲಾ ಹಳೆ ವಿದ್ಯಾರ್ಥಿ, ಉದ್ಯಮಿ ಸಂದೀಪ್ ರೈ ನಂಜೆಯವರಿಗೆ ಹಾಗೂ ವಾಣಿಶ್ರೀಯವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಶಿಕ್ಷಕರ ಕೊರತೆ ಇದೆ
ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದು ಪ್ರಸ್ತುತ 3 ಮಂದಿ ಶಿಕ್ಷಕರು ಹಾಗೇ ಒಬ್ಬರನ್ನು ನಿಯೋಜನ ಮಾಡಲಾಗಿದ್ದು ಒಟ್ಟು 4 ಮಂದಿ ಸರಕಾರಿ ಶಿಕ್ಷಕರಿದ್ದಾರೆ. ಎಸ್‌ಡಿಎಂಸಿಯಿಂದ ಓರ್ವ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಆದರೂ ಇನ್ನೊರ್ವ ಶಿಕ್ಷಕರ ಅವಶ್ಯಕತೆ ಇದೆ. ಆದ್ದರಿಂದ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಒಬ್ಬರು ಶಿಕ್ಷಕರನ್ನು ನೇಮಕ ಮಾಡುವಂತೆ ಎಸ್‌ಡಿಎಂಸಿ ಅಧ್ಯಕ್ಷರು ಕೇಳಿಕೊಂಡರು.