ನೆಲ್ಯಾಡಿ: ಧರ್ಮಸ್ಥಳ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಸ್ಯಾಮುವೆಲ್ ಎಂ.ಐ.ಅವರು ಜೂ.30ರಂದು ನಿವೃತ್ತಿಯಾದರು.
ಸ್ಯಾಮುವೆಲ್ ಅವರು 1993ರಲ್ಲಿ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಸೇವೆ ಆರಂಭಿಸಿದ್ದರು. ಆ ಬಳಿಕ ಸುಬ್ರಹ್ಮಣ್ಯ, ಕಡಬ ಠಾಣೆಗೆ ವರ್ಗಾವಣೆಗೊಂಡಿದ್ದರು. ಕಡಬ ಠಾಣೆಯಲ್ಲಿ ಸೇವೆಯಲ್ಲಿದ್ದ ವೇಳೆ ಹೆಡ್‌ಕಾನ್‌ಸ್ಟೇಬಲ್ ಆಗಿ ಭಡ್ತಿಗೊಂಡು ಮಂಗಳೂರು ಎಸ್‌ಪಿ ಕಚೇರಿಯ ಸ್ಪೇಷಲ್ ಬ್ರಾಂಚ್‌ಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಧರ್ಮಸ್ಥಳ ಠಾಣೆಗೆ ವರ್ಗಾವಣೆಗೊಂಡು ಸೇವೆಯಲ್ಲಿದ್ದ ವೇಳೆ ಎಎಸ್‌ಐ ಆಗಿ ಭಡ್ತಿಗೊಂಡು ಪುಂಜಾಲಕಟ್ಟೆ ಠಾಣೆಗೆ ವರ್ಗಾವಣೆಗೊಂಡಿದ್ದರು. 2022ರಲ್ಲಿ ಮತ್ತೆ ಧರ್ಮಸ್ಥಳ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರು ಪೊಲೀಸ್ ಇಲಾಖೆಯಲ್ಲಿ ಸುಮಾರು 30 ವರ್ಷ 7 ತಿಂಗಳು ಕರ್ತರ್ವ ನಿರ್ವಹಿಸಿದ್ದಾರೆ. ವಿವಿಐಪಿ ರಿಂಗ್ ರೌಂಡ್ ಕಮಾಂಡೋ ತರಬೇತಿ ಹೊಂದಿದ್ದ ಸ್ಯಾಮುವೆಲ್ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಇಂಟೆಲಿಜೆನ್ಸ್ ವಿಭಾಗದಲ್ಲಿ ನಿರ್ವಹಿಸಿದ ಸೇವೆಗೆ ಪೊಲೀಸ್ ವರಿಷ್ಟಾಧಿಕಾರಿಗಳ ವಿಶೇಷ ಪ್ರಶಂಸೆಗೆ ಭಾಜನರಾಗಿದ್ದರು. ದ.ಕ. ಜಿಲ್ಲೆಯಲ್ಲಿ ನಡೆದ ಕೆಲವು ಕಳ್ಳತನ ಪ್ರಕರಣಗಳನ್ನು ಬೇಧಿಸಿ ಹಿರಿಯ ಅಧಿಕಾರಿಗಳಿಂದ ವಿಶೇಷ ಪುರಸ್ಕಾರ ಪಡೆದಿದ್ದರು. ಇವರು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು ನೇರವಾಗಿ ಪ.ಪೂ.ಶಿಕ್ಷಣ ಪಡೆದುಕೊಂಡಿದ್ದರು. ಬಳಿಕ ಮೈಸೂರು ವಿವಿಯಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು. ಇವರ ಪತ್ನಿ ಜೆಸ್ಸಿ ಕೆ.ಎ.ಅವರು ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯಾಗಿದ್ದಾರೆ. ಪುತ್ರ ಅಜಯ್ ಮರ್ಚೆಂಟ್ ನೇವಿಯಲ್ಲಿ ಉದ್ಯೋಗದಲ್ಲಿದ್ದಾರೆ. ಸೊಸೆ ಸಹನಾ, ಪುತ್ರಿ ಅನನ್ಯ ಅವರೊಂದಿಗೆ ಹೊಸಮಜಲಿನಲ್ಲಿ ಇವರು ವಾಸ್ತವ್ಯ ಹೊಂದಿದ್ದಾರೆ.