ಕಡಬ: ಮರ್ದಾಳ ಗುಡ್ ಶೆಫರ್ಡ್ ಶಾಲೆಯ 2024-25ನೇ ಸಾಲಿನ ಶಾಲಾ ಮಂತ್ರಿಮಂಡಲದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಹಪಠ್ಯ ಚಟುವಟಿಕಾ ಸಂಘಗಳ ಉದ್ಘಾಟನೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆ ಮುಖ್ಯಶಿಕ್ಷಕ ಈಶೋ ಫಿಲಿಪ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವದ ಅರಿವನ್ನು ಮಕ್ಕಳು ಬೆಳೆಸಿಕೊಂಡು ಮುಂದೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಪ್ರಿಯಕುಮಾರಿ ನೂತನ ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪ್ರಮಾಣ ವಚನದ, ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಹಾಗೂ ಮಂತ್ರಿಮಂಡಲದ ಮತ್ತು ವಿವಿಧ ಸಹಪಠ್ಯ ಚಟುವಟಿಕಾ ಸಂಘಗಳ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಶೈಕ್ಷಣಿಕ ಸಲಹೆಗಾರರಾದ ಮೇಪಿ ಅವರು ಸಂಘಗಳ ಮಾರ್ಗದರ್ಶಕ ಶಿಕ್ಷಕರಿಗೆ ಹಾಗೂ ಸಂಘದ ಸದಸ್ಯರಿಗೆ ಫೈಲ್‌ಗಳನ್ನು ಹಸ್ತಾಂತರಿಸುವ ಮೂಲಕ ಸಹಪಠ್ಯ ಚಟುವಟಿಕಾ ಸಂಘಗಳಿಗೆ ವಿದ್ಯುಕ್ತ ಚಾಲನೆ ನೀಡಿದರು. ಶಾಲಾ ಸಂಚಾಲಕ ತೋಮಸ್ ಪಿ.ವಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಗಳಿಗೆ ಪೂರಕವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ -ಶಿಕ್ಷಕೇತರ ವೃಂದದವರು, ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ರಶೀದಾ ಸ್ವಾಗತಿಸಿ, ಶಿಕ್ಷಕಿ ಗೋಮತಿಚಂದ್ರ ವಂದಿಸಿದರು. ಶಿಕ್ಷಕಿ ಜಿನ್ಸಿ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.