ಅಡಿಕೆ ಮಾರುಕಟ್ಟೆ ಚೇತರಿಕೆಗೆ ಉತ್ತೇಜನ-ರೈತರ ಸಮಸ್ಯೆಗಳಿಗೆ ಪರಿಹಾರ-ಕೇಂದ್ರ ವಿತ್ತ ಸಚಿವರಿಗೆ ಕ್ಯಾಂಪ್ಕೋ ಮನವಿ

0

ಮಂಗಳೂರು:ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ.


ಕೇಂದ್ರ ವಿತ್ತ ಸಚಿವರಾಗಿ ಮರು ನೇಮಕಗೊಂಡಿರುವ ನಿರ್ಮಲಾ ಸೀತರಾಮನ್ ಅವರನ್ನು ಅಭಿನಂದಿಸಿರುವ ಕ್ಯಾಂಪ್ಕೊ ಆಡಳಿತ ಮಂಡಳಿಯು,ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದೆ.


ಅಡಿಕೆ ಮೇಲಿನ ಜಿಎಸ್‌ಟಿ ಶೇ.2ಕ್ಕೆ ಇಳಿಸಿ:
ಅಡಿಕೆಯ ಮೇಲಿನ ಜಿ.ಎಸ್.ಟಿಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಬೇಕು.ಇದರಿಂದ ರೈತರು ಸಹಕಾರಿ ಸಂಸ್ಥೆಗಳಲ್ಲಿ ವ್ಯವಹರಿಸಲು ಉತ್ತೇಜನ ಸಿಗಲಿದೆ.ತೆರಿಗೆ ಕಳ್ಳತನಕ್ಕೆ ಕಡಿವಾಣ ಬೀಳಲಿದ್ದು ಸರಕಾರಕ್ಕೆ ತೆರಿಗೆಯ ಆದಾಯ ಹೆಚ್ಚಾಗಲಿದೆ.ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.


ಮೈಲುತುತ್ತು ಮೇಲಿನ ಜಿಎಸ್‌ಟಿ ಶೇ.18ರಿಂದ 5ಕ್ಕೆ ಇಳಿಸಿ:
ಮೈಲುತುತ್ತು ಮೇಲಿನ ಜಿ.ಎಸ್.ಟಿ ಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲು ಮನವಿ ಮಾಡಲಾಗಿದೆ.ಅಡಿಕೆ ತೋಟದ ರೋಗ ನಿರ್ವಹಣೆಗೆ ಬಳಸುವ ಮೈಲುತುತ್ತದ ಮೇಲಿನ ಜಿ.ಎಸ್.ಟಿ ಕಡಿಮೆ ಮಾಡುವುದರಿಂದ ಖರ್ಚು ಕಡಿಮೆ ಮಾಡಲು ಸಹಾಯವಾಗುವುದು.ಕಾರ್ಬನ್ -ಫೈಬರ್ ದೋಟಿಯ ಆಮದು ಸುಂಕವನ್ನು ಕಡಿತಗೊಳಿಸಬೇಕು.ರೈತರು ತಾನು ಬೆಳೆದ ಅಡಿಕೆಯ ಕೊಯ್ಲು ಮತ್ತು ತೋಟದ ನಿರ್ವಹಣೆಗೆ ವಿಶೇಷವಾಗಿ ಕಾರ್ಬನ್ – ಫೈಬರ್ ದೋಟಿಯನ್ನು ಅವಲಂಬಿಸಿದ್ದಾರೆ.ಈ ಉತ್ಪನ್ನದ ಮೇಲೆ ಸರಾಸರಿ 48ಶೇ.ಆಮದು ಸುಂಕ ವಿಽಸಲಾಗುತ್ತಿದೆ.ಇದರಿಂದ ಸಾಮಾನ್ಯ ರೈತರಿಗೆ ಇದು ಕೈಗೆಟುಕುತ್ತಿಲ್ಲ.ಆಮದು ಸುಂಕವನ್ನು ಕಡಿಮೆ ಮಾಡುವುದರಿಂದ ಎಲ್ಲಾ ವರ್ಗದ ರೈತರಿಗೂ ಸಹಾಯವಾಗಲಿದೆ.


ಅಡಿಕೆ ಮತ್ತು ಕರಿಮೆಣಸಿನ ಅಕ್ರಮ ಆಮದನ್ನು ತಡೆಗಟ್ಟಬೇಕು:
ಅಡಿಕೆ ಮತ್ತು ಕರಿಮೆಣಸು ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಿದೆ.ಆದರೂ,ಇವೆರಡರ ಅಕ್ರಮ ಆಮದು ಅವ್ಯಾಹತವಾಗಿ ನಡೆಯುತ್ತಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇದು ರೈತರ ಜೀವನೋಪಾಯಕ್ಕೆ ಮಾರಕವಾಗಿದೆ.ಈ ನಿಟ್ಟಿನಲ್ಲಿ ಅಡಿಕೆ ಮತ್ತು ಕರಿಮೆಣಸು ಅಕ್ರಮ ಆದನ್ನು ತಡೆಗಟ್ಟಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆ ನಾಶಪಡಿಸಬೇಕು:
ವಿದೇಶಿ ಅಡಿಕೆಗೆ ಕನಿಷ್ಠ ಆಮದು ಬೆಲೆ ಘೋಷಣೆ ಮಾಡಿದರೂ,ಅಽಕಾರಿಗಳು ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮರು ಹರಾಜು ಹಾಕಲಾಗುತ್ತಿದೆ.ಮಾನವನ ಉಪಯೋಗಕ್ಕೆ ಯೋಗ್ಯವಲ್ಲದ ಇಂತಹ ಅಡಿಕೆ ಅನಿಯಂತ್ರಿತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆದು, ದೇಶೀ ಮಾರುಕಟ್ಟೆಗೆ ಮಾರಣಾಂತಿಕ ಹೊಡೆತನೀಡುತ್ತಿದೆ.ಇಂತಹ ವಶಪಡಿಸಿಕೊಂಡ ಅಡಿಕೆಯನ್ನು ಮರು ಹರಾಜಿಗೆ ಅನುವು ಮಾಡಿಕೊಡದೆ ಅದನ್ನು ನಾಶಪಡಿಸುವ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದಾಗ ಮಾತ್ರ ಸಮಸ್ಯೆಯ ಮೂಲೋತ್ಪಾಟನೆ ಸಾಧ್ಯವಾಗುವುದು. ಉಪಯೋಗಿಸಬಹುದಾದ ಅಡಿಕೆಗೆ ಕನಿಷ್ಠ ಬೆಲೆ ನಿಗದಿಪಡಿಸಿ ಸಹಕಾರ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.


ಅಕ್ರಮ ವ್ಯವಹಾರ ತಡೆಗೆ ಕ್ರಮ:
ಎಲ್ಲಾ ದೊಡ್ಡ ಸರಕು ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸುವುದು ಮತ್ತು ಎಲ್ಲಾ ತಪಾಸಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿ ತಪಾಸಣೆ ನಡೆಸುವುದರ ಮೂಲಕ ಅಕ್ರಮ ವ್ಯವಹಾರವನ್ನು ತಡೆಯಬಹುದು.


ಜಿ.ಎಸ್.ಟಿ ಸ್ವರೂಪವನ್ನು ಸರಳಗೊಳಿಸುವಿಕೆ:
ಸಿಜಿಎಸ್ ಟಿ,ಎಸ್ ಜಿ ಎಸ್ ಟಿ ಮತ್ತು ಐಜಿಎಸ್ ಟಿ ಮುಂತಾದ ಬಹು ಸ್ಥರದ ತೆರಿಗೆಯ ಬದಲು ಸರಳ ಮತ್ತು ಏಕೀಕೃತ ತೆರರಿಗೆ ವ್ಯವಸ್ಥೆಯನ್ನು ಜಾರಿಗೆಗೊಳಿಸಿ ಸರಳಗೊಳಿಸಬೇಕಾಗಿ ಮನವಿಯಲ್ಲಿ ಕೋರಲಾಗಿದೆ.


ಕೆವೈಸಿ ಅನುಸರಣೆಯ ಜವಾಬ್ದಾರಿ ಇಲಾಖೆಯದ್ದಾಗಿರಬೇಕು:
ಜಿಎಸ್‌ಟಿಯ MUA ಪೋರ್ಟಲ್ ಅಡಿಯಲ್ಲಿ ಕೆವೈಸಿ ಹೊಂದಾಣಿಕೆಯಾಗದೇ ಹೊದರೆ ತೆರಿಗೆ ಪಾವತಿದಾರರನ್ನು ಹೊಣೆಗಾರರನ್ನಾಗಿಸುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಇಲಾಖೆಗಳೇ ವಹಿಸಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.


ಅಡಿಕೆಯು ಹಲವಾರು ಔಷಧಿಯ ಗುಣಗಳನ್ನು ಹೊಂದಿದ್ದು ನಮ್ಮ ದೇಶದಲ್ಲಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಜನಜೀವನದಲ್ಲಿ ಹಾಸುಹೊಕ್ಕಾಗಿದೆ.ಹಾಗಾಗಿ ಅಡಿಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಿಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಎಲ್ಲ ರೈತರ ಪರವಾಗಿ ಕ್ಯಾಂಪ್ರೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಕ್ಯಾಂಪ್ರೋ ವ್ಯವಸ್ಥಾಪಕ ನಿರ್ದೇಶಕ ಡಾ|ಬಿ.ವಿ.ಸತ್ಯನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here