ಪುತ್ತೂರು: ಚೆಲ್ಯಡ್ಕದ ಸೇತುವೆ ಮೇಲೆ ಮುಂಜಾಗೃತ ಕ್ರಮವಾಗಿ ಘನ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದ ಕುರಿತು ಗ್ರಾಪಂ ಪ್ರಾಕೃತಿಕ ವಿಕೋಪ ಟಾಸ್ಕ್ ಫೋರ್ಸ್ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಸೇತುವೆ ಮೇಲೆ ಪೂರ್ಣ ಪ್ರಮಾಣದಲ್ಲಿ ಘನ ವಾಹನ ಸಂಚಾರ ನಿಷೇಧಿಸಿರುವುದರಿಂದ ಗ್ರಾಮದ ಒಂದು ಹಳ್ಳಿ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದ್ದು ಇದರಿಂದ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳಿಂದ ಹಿಡಿದು ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ತೊಂದರೆಯಾಗಿದೆ. ತಾವು ಈಗಾಗಲೇ ಸೂಚಿಸಿದ ಪರ್ಯಾಯ ವ್ಯವಸ್ಥೆ ಅಸಮರ್ಪಕವಾಗಿದೆ. ಆದ್ದರಿಂದ ಸದ್ರಿ ಆದೇಶವನ್ನು ಪರಿಶೀಲನೆ ಮಾಡಿ ಗ್ರಾಮಸ್ಥರ, ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಛೇರಿಗೆ ಈಮೇಲ್ ಮೂಲಕ ಮನವಿ ಸಲ್ಲಿಸಿದ ಇವರು ಮಳೆ ಬಂದು ಸೇತುವೆ ಮುಳುಗಡೆಯಾದರೆ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರ ನಿಷೇಧಿಸುವುದು ಉಳಿದ ದಿನಗಳಲ್ಲಿ ವಿದ್ಯಾರ್ಥಿಗಳ ಹಾಗೂ ನಾಗರಿಕರ ಅನುಕೂಲಕ್ಕಾಗಿ ಪ್ರಯಾಣಿಕರ ವಾಹನ ಸೇರಿದಂತೆ ಬಸ್ಸು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದು ಸಾಧ್ಯವಾಗದೇ ಇದ್ದರೆ ಕೆಎಸ್ಆರ್ಟಿಸಿಯಿಂದ ಪುತ್ತೂರು ಗುಮ್ಮೆಟೆಗದ್ದೆ, ಚೆಲ್ಯಡ್ಕದಿಂದ ಪಾಣಾಜೆ, ಗುಮ್ಮಟೆಗದ್ದೆಯಿಂದ ಪುತ್ತೂರು, ಪಾಣಾಜೆಯಿಂದ ಚೆಲ್ಯಡ್ಕ ಹೀಗೆ ನಾಲ್ಕು ಬಸ್ಸುಗಳನ್ನು ಸಂಚರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.