ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಸಿಬ್ಬಂದಿ ಕೊರತೆ – ಸಮಸ್ಯೆ, ಒತ್ತಡಗಳ ಮಧ್ಯೆ 24*7 ಸೇವೆ – ಎರಡು ಶಾಖೆಗಳನ್ನು ತೆರೆದು ವಿಶಾಲ ಕಾರ್ಯವ್ಯಾಪ್ತಿ ಕುಗ್ಗಿಸಲು ಆಗ್ರಹ

0

*ದೀಪಕ್ ಉಬಾರ್

ಉಪ್ಪಿನಂಗಡಿ: ವಿಶಾಲ ಕಾರ್ಯ ವ್ಯಾಪ್ತಿ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯುತ್ ಪರಿವರ್ತಕವನ್ನು ಹೊಂದಿರುವ, ಬಹು ಭಾಗ ವಿದ್ಯುತ್ ತಂತಿಗಳು ಗುಡ್ಡ ಪ್ರದೇಶ ತೋಟಗಳ ನಡುವೆಯೇ ಹಾದುಹೋಗುತ್ತಿರುವ ಮೆಸ್ಕಾಂನ ಉಪ್ಪಿನಂಗಡಿ ಶಾಖೆಯು ಸಿಬ್ಬಂದಿ ಕೊರತೆ ಅನುಭವಿಸುತ್ತಿದ್ದು, ಹಲವು ಸಮಸ್ಯೆ, ಒತ್ತಡಗಳ ನಡುವೆಯೂ ಮಳೆಗಾಲದಲ್ಲಿ 24*7 ಸೇವೆಯನ್ನು ನೀಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದೆ. ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ಕಾರ್ಯವ್ಯಾಪ್ತಿಯಡಿ 34 ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ರಾಮಕುಂಜ, ಗೋಳಿತ್ತೊಟ್ಟು, ಆಲಂತಾಯ, ಕೊಣಾಲು, ಕೋಡಿಂಬಾಡಿ, ಹಳೆನೇರೆಂಕಿ ಗ್ರಾಮಗಳು ಬರುತ್ತಿದ್ದು, ಈ ಶಾಖೆಯು 315 ಕಿ.ಮೀ. ಎಚ್.ಟಿ. ಲೈನ್, 782 ಕಿ.ಮೀ. ಎಲ್.ಟಿ. ಲೈನ್ ಅನ್ನು ಹೊಂದಿದೆ. ಈ ಶಾಖೆಯಲ್ಲಿ ಒಟ್ಟು 29 ಹುದ್ದೆಗಳು ಮಂಜೂರಾತಿಯಿದ್ದು, ಅದರಲ್ಲಿ ಈಗ 19 ಹುದ್ದೆಗಳು ಮಾತ್ರ ಭರ್ತಿಯಿದ್ದು, ಉಳಿದ ಹುದ್ದೆಗಳು ಖಾಲಿಯಿವೆ. ಇಲ್ಲಿಗೆ ಸಹಾಯಕ ಎಂಜಿನಿಯರ್ ಹಾಗೂ ಮೇಲ್ವೀಚಾರಕ ತಲಾ ಒಂದೊಂದು ಹುದ್ದೆಗಳು ಮಂಜೂರಾತಿಯಾಗಿದ್ದು, ಆ ಹುದ್ದೆಗಳು ಭರ್ತಿ ಇವೆ. ಮೇಸ್ತ್ರಿ 1ನ ಒಂದು ಹುದ್ದೆಯಿದ್ದು, ಅದು ಭರ್ತಿಯಿದೆ. ಮೇಸ್ತ್ರಿ 2ನಲ್ಲಿ ಮೂರು ಹುದ್ದೆಯಿದ್ದು, ಅದು ಭರ್ತಿಯಿದೆ. ಜೂನಿಯರ್ ಪವರ್ ಮ್ಯಾನ್‌ನಲ್ಲಿ 10 ಹುದ್ದೆಗಳಿದ್ದು, ಅದರಲ್ಲಿ 2 ಹುದ್ದೆ ಖಾಲಿ ಇದೆ. ಸಹಾಯಕ ಪವರ್‌ಮ್ಯಾನ್‌ನಲ್ಲಿ 8 ಹುದ್ದೆಗಳಿದ್ದು, ಅದರಲ್ಲಿ 7 ಹುದ್ದೆಗಳು ಖಾಲಿಯಿವೆ. ಪವರ್ ಮ್ಯಾನ್ 5 ಹುದ್ದೆಗಳಿದ್ದು, ಅದರಲ್ಲಿ 1 ಹುದ್ದೆ ಖಾಲಿ ಇವೆ. 247 ಕರ್ತವ್ಯ ನಿರ್ವಹಣೆಗೆ ಇಲಾಖೆಯಿಂದ ವಾಹನ ನೀಡಲಾಗಿದ್ದರೂ, ಅದಕ್ಕೆ ಅಗತ್ಯವಿರುವ ಸಿಬ್ಬಂದಿ ನೀಡಿಲ್ಲ. ಹಾಗಾಗಿ ಇಲ್ಲಿನ ಸಿಬ್ಬಂದಿ ಕೊರತೆಯ ನಡುವೆಯೂ ಮುಖ್ಯವಾಗಿ ರಾತ್ರಿ ಪಾಳಿಗೆ ಇಲ್ಲಿರುವ ಸಿಬ್ಬಂದಿಯೋರ್ವರನ್ನೇ ಬಳಸುವ ಅನಿವಾರ್ಯತೆ ಎದುರಾಗಿದೆ. ರಾತ್ರಿ ಪಾಳಿಗೆ ಟೆಲಿಫೋನ್ ಅಪರೇಟರ್ ನೀಡಿಲ್ಲದಿರುವುದರಿಂದ ರಾತ್ರಿ ವಿದ್ಯುತ್ ಕಡಿತವುಂಟಾದಾಗ ಗ್ರಾಹಕರು ಮತ್ತು ಸಿಬ್ಬಂದಿಯ ನಡುವೆ ಸಂಪರ್ಕದ ಕೊಂಡಿಯಾಗಿ ಸಹಾಯಕ ಎಂಜಿನಿಯರ್ ಅವರೇ ನಿಂತು ಫೋನ್ ಕರೆಗಳನ್ನು ಸ್ವೀಕರಿಸಿ, ಸಮಸ್ಯೆ ಪರಿಹರಿಸಿಕೊಡಬೇಕಾದ ಅನಿವಾರ್ಯತೆ ಇಲ್ಲಿದೆ.


9 ಫೀಡರ್‌ಗಳು: ಪುತ್ತೂರು ಉಪ ಕೇಂದ್ರದ 5 ಫೀಡರ್‌ಗಳಿಂದ, ಕರಾಯ ಉಪಕೇಂದ್ರದಿಂದ 2 ಫೀಡರ್‌ಗಳಿಂದ, ನೆಲ್ಯಾಡಿ ಉಪಕೇಂದ್ರದಿಂದ 1 ಫೀಡರ್‌ನಿಂದ, ಸವಣೂರು ಉಪಕೇಂದ್ರದಿಂದ 1 ಫೀಡರ್‌ನಿಂದ ಸೇರಿದಂತೆ ಒಟ್ಟು 9 ಫೀಡರ್‌ಗಳಿಂದ ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ವ್ಯಾಪ್ತಿಗೆ ವಿದ್ಯುತ್ ಬರುತ್ತದೆ. ಪುತ್ತೂರಿನಿಂದ ಬರುವ ಒಂದು ಫೀಡರ್ ಪುತ್ತೂರಿಗೆ ಕುಡಿಯುವ ನೀರು ಪೂರೈಸುವ 34 ನೆಕ್ಕಿಲಾಡಿಯಲ್ಲಿರುವ ನೀರು ಸರಬರಾಜು ಘಟಕಕ್ಕೆ ಮಾತ್ರ ಮೀಸಲಾಗಿದ್ದು, ಇದಕ್ಕೆ 24*7 ವಿದ್ಯುತ್ ನೀಡಲೇ ಬೇಕು. ಏನಾದರೂ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಯಾದರೆ ಮೊದಲ ಆದ್ಯತೆಯೊಂದಿಗೆ ತುರ್ತಾಗಿ ಈ ಫೀಡರ್‌ನ ಸಂಪರ್ಕವನ್ನು ಸರಿಪಡಿಸಬೇಕಿದೆ.

ಅತೀ ಹೆಚ್ಚು ಟಿಸಿ: ಉಪ್ಪಿನಂಗಡಿ ಮೆಸ್ಕಾಂ ವ್ಯಾಪ್ತಿಯಲ್ಲಿ 732 ವಿದ್ಯುತ್ ಪರಿವರ್ತಕ (ಟಿ.ಸಿ.)ಗಳಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯುತ್ ಪರಿವರ್ತಕಗಳನ್ನು ಹೊಂದಿರುವ ಶಾಖೆ ಇದಾಗಿದೆ.

ಟ್ರೀ ಕಟ್ಟಿಂಗ್‌ಗೆ ಐವರು: ಮಳೆಗಾಲ ಸಮಯವಾದ ಮೇ ಯಿಂದ ಆಗಸ್ಟ್‌ವರೆಗೆ ಟ್ರೀ ಕಟ್ಟಿಂಗ್‌ಗೆಂದು ಐದು ಜನರನ್ನು ಈ ಬಾರಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಗೆ ನೀಡಲಾಗಿದೆ. ಅದರಲ್ಲಿ ಮೂವರು ಉಪ್ಪಿನಂಗಡ ಶಾಖಾ ಕಚೇರಿಯಲ್ಲಿದ್ದರೆ, ಒಬ್ಬರು ಆತೂರು, ಇನ್ನೊಬ್ಬರು ಗೋಳಿತ್ತೊಟ್ಟುವಿನಲ್ಲಿದ್ದಾರೆ. ಇವರನ್ನು ನಾಲ್ಕು ತಿಂಗಳಿಗೆ ಸೀಮಿತಗೊಳಿಸದೇ ಮಾರ್ಚ್‌ನಲ್ಲೇ ನೀಡಿದರೆ ಮಳೆಗಾಲ ಪೂರ್ವದಲ್ಲಿ ಸಾಕಷ್ಟು ಟ್ರೀ ಕಟ್ಟಿಂಗ್ ನಡೆಯುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆಯಾಗುವುದು ತಪ್ಪಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಿಬ್ಬಂದಿ ಕೊರತೆ, ಹಲವು ಒತ್ತಡ, ಸಮಸ್ಯೆಗಳ ನಡುವೆಯೂ ಉಪ್ಪಿನಂಗಡಿ ಮೆಸ್ಕಾಂ ಶಾಖೆಯು ಗ್ರಾಹಕ ಸ್ನೇಹಿಯಾಗಿದ್ದು, ಜನರಿಗಾಗುವ ವಿದ್ಯುತ್ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಿದೆ. ವಿದ್ಯುತ್ ಕೈಕೊಟ್ಟಾಗ ಮೆಸ್ಕಾಂಗೆ ಹಿಡಿಶಾಪ ಹಾಕುವವರು ಮೆಸ್ಕಾಂ ಸಿಬ್ಬಂದಿಯ ಕಾರ್ಯದೊತ್ತಡ, ಅಲ್ಲಿನ ಸಮಸ್ಯೆಗಳ ಬಗ್ಗೆಯೂ ಅರಿತುಕೊಳ್ಳಬೇಕಿದೆ.

ಕೊಯಿಲ 33 ಕೆ.ವಿ. ವಿದ್ಯುತ್ ಉಪಕೇಂದ್ರ ಟೆಂಡರ್ ಹಂತದಲ್ಲಿದ್ದು, ಈ ತಿಂಗಳಾಂತ್ಯಕ್ಕೆ ಅಂತಿಮಗೊಳ್ಳಬಹುದು. ಕರ್ವೇಲು 110 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ ಜಾಗ ಮಂಜೂರಾಗಿದ್ದು, ಡಿ.ಪಿ.ಆರ್. ಅನುಮೋದನೆಗೆ ಬಾಕಿ ಇದೆ. ಇದು ಆದ ಬಳಿಕ ಈ ಭಾಗದ ವೋಲ್ಟೇಜ್ ಸಮಸ್ಯೆ ಪರಿಹಾರವಾಗಲಿದೆ ಹಾಗೂ ವಿದ್ಯುತ್ ಅಡಚಣೆಗಳು ಕಡಿಮೆಯಾಗಲಿವೆ.

  • ರಾಮಚಂದ್ರ ಎ.
    ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
    ಮೆಸ್ಕಾಂ ಪುತ್ತೂರು ಉಪವಿಭಾಗ
  • ವಿಶಾಲವಾದ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ಎಚ್.ಟಿ. ಲೈನ್‌ಗಳು ನೆರೆ ಪೀಡಿತ ಪ್ರದೇಶದಲ್ಲೂ ಹಾದು ಹೋಗಿವೆ. ಇದರ ಕಾರ್ಯವ್ಯಾಪ್ತಿಯು ಹೆಚ್ಚಿನ ಗ್ರಾಮಾಂತರ ಪ್ರದೇಶವನ್ನು ಹೊಂದಿರುವುದರಿಂದ ವಿದ್ಯುತ್ ಸಂಪರ್ಕ ತಂತಿಗಳು ಗುಡ್ಡ ಪ್ರದೇಶ, ತೋಟಗಳ ನಡುವೆ ಹಾದು ಹೋಗಿವೆ. ಇದರಿಂದ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ. ಮೊದಲಾಗಿ ಇದರ ವಿಶಾಲ ಕಾರ್ಯವ್ಯಾಪ್ತಿಯನ್ನು ತಗ್ಗಿಸಬೇಕು. ಅದಕ್ಕೆ ಉಪ್ಪಿನಂಗಡಿ ಮೆಸ್ಕಾಂ ಶಾಖೆಯನ್ನು ಉಪವಿಭಾಗ ಮಾಡಿ ಅದರಡಿ ಆತೂರು ಮತ್ತು ಗೋಳಿತ್ತೊಟ್ಟಿನಲ್ಲಿ ಮೆಸ್ಕಾಂ ಶಾಖೆಗಳನ್ನು ತೆರೆಯಬೇಕು. ಆಗ ವಿದ್ಯುತ್ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿದೆ. ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ಕಾರ್ಯದೊತ್ತಡವೂ ಕಡಿಮೆಯಾಗಲಿದೆ. ಇದರೊಂದಿಗೆ ವಿದ್ಯುತ್ ಗುತ್ತಿಗೆದಾರರಿಗೂ ಅನಕೂಲವಾಗಲಿದೆ. ಅಲ್ಲದೇ, ವಿದ್ಯುತ್ ಮೀಟರ್ ಸಮಸ್ಯೆ ಉಂಟಾದಾಗ ಸೇರಿದಂತೆ ವಿದ್ಯುತ್‌ಗೆ ಸಂಬಂಧಿಸಿ ಇನ್ನಿತರ ಸಮಸ್ಯೆಗಳು ಎದುರಾದಾಗ ಮೆಸ್ಕಾಂ ಪುತ್ತೂರು ಉಪವಿಭಾಗ ಕಚೇರಿಗೆ ಹೋಗುವ ಬದಲು ಉಪ್ಪಿನಂಗಡಿ ಮೆಸ್ಕಾಂ ಶಾಖೆಯು ಉಪವಿಭಾಗವಾಗಿ ಪರಿವರ್ತನೆಗೊಂಡಲ್ಲಿ ಇಲ್ಲಿಯೇ ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುವುದರಿಂದ ಗ್ರಾಹಕರಿಗೂ ಅನುಕೂಲವಾಗಲಿದೆ. ಉಪ್ಪಿನಂಗಡಿಯ ಮೆಸ್ಕಾಂ ಶಾಖೆಯನ್ನು ಉಪವಿಭಾಗವನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆನ್ನುವುದು ಈ ಭಾಗವ ವಿದ್ಯುತ್ ಗ್ರಾಹಕರ, ಗುತ್ತಿಗೆದಾರರ ಹಲವು ವರ್ಷಗಳ ಬೇಡಿಕೆ ಕೂಡಾ ಆಗಿದೆ.
  • ರೂಪೇಶ್ ರೈ ಅಲಿಮಾರ್
    ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)

ಸಿಬ್ಬಂದಿ ಕೊರತೆಗೆ ಕಾರಣ:
ಪವರ್ ಮ್ಯಾನ್ ಹುದ್ದೆಗಳಿಗೆ ದ.ಕ. ಜಿಲ್ಲೆಯ ಯುವಕರು ಅರ್ಜಿ ಸಲ್ಲಿಸೋದು ಕಡಿಮೆ. ಈ ಹುದ್ದೆಗಳಿಗೆ ಉತ್ತರ ಕರ್ನಾಟಕ ಸೇರಿದಂತೆ ಇತರ ಹೊರ ಜಿಲ್ಲೆಯವರೇ ನೇಮಕಾತಿ ಪಡೆದು ಇಲ್ಲಿಗೆ ಆಗಮಿಸುವುದೇ ಹೆಚ್ಚು. ಎರಡ್ಮೂರು ವರ್ಷ ಅವರು ಇಲ್ಲಿ ಕೆಲಸ ಮಾಡಿದ ಬಳಿಕ ಹೇಗಾದರೂ ಪ್ರಯತ್ನಿಸಿ ಅವರು ಇಲ್ಲಿಂದ ಅವರ ಸ್ವಂತ ಊರಿಗೆ ವರ್ಗಾವಣೆ ಪಡೆದು ಹೋಗುತ್ತಾರೆ. ಆದ್ದರಿಂದ ದ.ಕ. ಜಿಲ್ಲೆಯಲ್ಲಿ ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಗೆ ಒಂದು ಕಾರಣವಾದರೆ, ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಸ್ಥಳೀಯವಾಗಿ ಮೆಸ್ಕಾಂನಲ್ಲಿ ದುಡಿಯುತ್ತಿದ್ದ ಗ್ಯಾಂಗ್‌ಮೆನ್‌ಗಳು ಈ ಹಿಂದೆ ಮೆಸ್ಕಾಂನ ಪವರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ, ಆ ಸಂದರ್ಭ ಎಸೆಸ್ಸೆಲ್ಸಿ ಅಂಕದ ಆಧಾರದಲ್ಲಿ ನೇರ ನೇಮಕಾತಿ ನಡೆದಿದ್ದರಿಂದ ಹಲವರಿಗೆ ಈ ಹುದ್ದೆ ಸಿಗದಿರುವುದು ಇನ್ನೊಂದು ಕಾರಣ. ಆದ್ದರಿಂದ ವಿದ್ಯುತ್ ಕಾಮಗಾರಿಯ ಬಗ್ಗೆ ಅರಿವಿರುವ ಹಾಗೂ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದರನ್ನು ಸ್ಥಳೀಯವಾಗಿ ಮೆಸ್ಕಾಂಗೆ ನೇಮಕಾತಿ ಮಾಡಿಕೊಳ್ಳವುದು ಸಿಬ್ಬಂದಿ ಕೊರತೆಗಿರುವ ಉತ್ತಮ ಪರಿಹಾರವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here