ಎಸ್‌ಎಂಎ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಬೃಹತ್ ಮೊಹಲ್ಲಾ ಪ್ರತಿನಿಧಿ ಸಮಾವೇಶ-ಸಾವಿರಾರು ಮಂದಿ ಭಾಗಿ

0

ಪುತ್ತೂರು: ಕೆಲವೇ ವರ್ಷಗಳಲ್ಲಿ ಬಹಳಷ್ಟು ಜವಾಬ್ದಾರಿಯುವ ಕಾರ್ಯಗಳನ್ನು ನಿಭಾಯಿಸುವ ಮೂಲಕ ಎಸ್‌ಎಂಎ ಅದ್ಭುತ ಸೃಷ್ಟಿಸಿದೆ, ಉಲಮಾ ಮತ್ತು ಉಮರಾಗಳು ಒಗ್ಗಟ್ಟಿನಿಂದ ಕಾರ್ಯಚಟುವಟಿಕೆಗಳನ್ನು ಮಾಡಿದಾಗ ಅಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಸುನ್ನೀ ಜಂತಿಯ್ಯತುಲ್ ಉಲಮಾ ರಾಜ್ಯ ಪ್ರ.ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ ರೋಡ್ ಹೇಳಿದರು.
ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಎಸ್‌ಎಂಎ ನಡೆ ಮೊಹಲ್ಲಾ ಕಡೆ ಸಮಾರೋಪ ಸಮಾರಂಭದ ಪ್ರಯುಕ್ತ ಜು.೩ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆದ ಮೊಹಲ್ಲಾ ಪ್ರತಿನಿಧಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.


ಎಸ್‌ಎಂಎ ಸಂಘಟನೆಯು ಒಂದು ಪ್ರಬುದ್ಧ ಸಂಘಟನೆಯಾಗಿದ್ದು ಎಲ್ಲಿ ಮಾತನಾಡಬೇಕು, ಎಲ್ಲಿ ಮೌನ ವಹಿಸಬೇಕು, ಎಲ್ಲಿ ಪ್ರತಿಕ್ರಿಯಿಸಬೇಕು ಎಂಬುವುದನ್ನು ಚೆನ್ನಾಗಿ ತಿಳಿದ ಸಂಘಟನೆಯಾಗಿದೆ ಎಂದು ಅವರು ಹೇಳಿದರು.

ಮಸೀದಿ ಕಮಿಟಿಯಲ್ಲಿ ಅಧಿಕಾರ ಚಲಾಯಿಸಬೇಡಿ:
ಮಸೀದಿ ಕಮಿಟಿ ಎಂದರೆ ಅಧಿಕಾರ ಚಲಾಯಿಸಲು ಇರುವ ಹುದ್ದೆ ಅಲ್ಲ, ಬದಲಾಗಿ ಮಸೀದಿಯ ಸೇವೆ ಮಾಡಲು ಇರುವ ಹುದ್ದೆಯಾಗಿದೆ ಇದನ್ನು ಪ್ರತೀ ಮಸೀದಿಯ ಆಡಳಿತ ಕಮಿಟಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಹುಸೈನ್ ಸಅದಿ ಕೆಸಿ ರೋಡ್ ಹೇಳಿದರು.

ಸಾದಾತ್ ತಂಙಳ್ ಅನುಸ್ಮರಣೆ:
ಮರ್‌ಹೂಂ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ಅವರ ಅನುಸ್ಮರಣೆ ಭಾಷಣ ಮಾಡಿದ ಹುಸೈನ್ ಸಅದಿ ಕೆಸಿ ರೋಡ್ ಅವರು ಅವರು ಸಾದಾತ್ ತಂಙಳ್ ಅವರು ಸರಳ ಸಜ್ಜನಿಕೆಯ ಪಂಡಿತರಾಗಿದ್ದು ಅವರು ತಂಙಳ್ ಆದರೂ ಕೂಡಾ ಸಾಮಾನ್ಯ ವ್ಯಕ್ತಿಯಂತೆ ಜನರೆಡೆಯಲ್ಲಿ ಬೆರೆಯುತ್ತಿದ್ದರು, ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಕೊನೆಯಲ್ಲಿ ಮರ್‌ಹೂಂ ಸಾದಾತ್ ತಂಙಳ್ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ನಡೆಯಿತು

ಜಮಾಅತ್ ಕಮಿಟಿಗಳು ಅರ್ಹರಿಗೆ ಆದ್ಯತೆ ಕೊಡಬೇಕು:
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರ.ಕಾರ್ಯದರ್ಶಿ ಅಬೂ ಸುಫಿಯಾನ್ ಇಬ್ರಾಹಿಂ ಮದನಿ ಮಾತನಾಡಿ ಮೊಹಲ್ಲಾಗಳಲ್ಲಿ ಪರಿವರ್ತನೆ ತರುವಲ್ಲಿ ಎಸ್‌ಎಂಎ ಯಶಸ್ವಿಯಾಗಿದ್ದು ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು. ಜಮಾಅತ್ ಕಮಿಟಿಗಳಲ್ಲಿ ಅರ್ಹರಿಗೆ ಆದ್ಯತೆ ನೀಡುವ ಮೂಲಕ ಸೂಕ್ಷ್ಮತೆ ಪಾಲಿಸಬೇಕು, ಮಸೀದಿ ಕಮಿಟಿಗಳಲ್ಲಿ ಆಲಿಂಗಳನ್ನು, ಪಂಡಿತರನ್ನು ಕೂಡಾ ಸೇರಿಸಿಕೊಳ್ಳಬೇಕು. ಪ್ರಭಾವಿಗಳನ್ನು, ಅನರ್ಹರನ್ನು ಮಾತ್ರ ಸೇರಿಸಿ ಕಮಿಟಿ ರೂಪಿಸಬಾರದು ಎಂದು ಹೇಳಿದರು.

ಎಸ್‌ಎಂಎ ಸಂಘಟನೆಯಲ್ಲ, ಅದೊಂದು ಶಕ್ತಿ:
ಪ್ರಸ್ತಾವನೆಗೈದ ಎಸ್‌ಎಂಎ ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಮಾತನಾಡಿ ಎಸ್‌ಎಂಎ ರೂಪುಗೊಂಡ ಬಳಿಕ ರಾಜ್ಯಾದ್ಯಂತ ಮೊಹಲ್ಲಾಗಳನ್ನು ಸಂಘಟಿಸುವ ಕೆಲಸ ಮಾಡುವ ಮೂಲಕ ಉಲಮಾಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು. ಎಸ್‌ಎಂಎ ಒಂದು ಸಂಘಟನೆಯಲ್ಲ, ಒಂದು ಶಕ್ತಿಯಾಗಿದ್ದು ಮಾದಕ ವ್ಯಸನದ ವಿರುದ್ಧ ಎಸ್‌ಎಂಎ ಧ್ವನಿ ಎತ್ತುತ್ತಾ ಬಂದಿದೆ. ಮದ್ರಸ ಇಲ್ಲದ ಕೆಲವೆಡೆ ಮದ್ರಸ ನಿರ್ಮಾಣ ಮಾಡಲಾಗಿದೆ ಎಂದ ಅವರು ಮೊಹಲ್ಲಾಗಳ ಸಬಲೀಕರಣಕ್ಕೆ ಎಸ್‌ಎಂಎ ಶಕ್ತಿ ಮೀರಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ವಿರುದ್ಧ ಅಸಮಾಧಾನ:
ಮುಸಲ್ಮಾನರ ಮತ ಪಡೆದು ಅಧಿಕಾರಕ್ಕೆ ಬಂದ ಜಾತ್ಯಾತೀತ ಸರಕಾರ, ಮುಸ್ಲಿಮರ ವಿರುದ್ಧ ನಿರಂತರ ಟೀಕೆ, ಆರೋಪ, ದೌರ್ಜನ್ಯ, ಬಂಧನ ನಡೆದಾಗ ಮೌನಕ್ಕೆ ಶರಣಾಗಿರುವುದು ಶೋಚನೀಯ. ಸರಕಾರದ ಇಂತಹ ನಿಲುವು ಖಂಡನೀಯ ಎಂದು ಎಸ್‌ಎಂಎ ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಹೇಳಿದರು. ಮಸೀದಿಗಳಲ್ಲಿ ಶಸ್ತಾಸ್ತ್ರ ಇದೆ ಎಂದು ಬೆಳ್ತಂಗಡಿ ಶಾಸಕ ಬಹಿರಂಗ ಹೇಳಿಕೆ ನೀಡಿದಾಗ ಅದರ ವಿರುದ್ಧ ಒಬ್ಬನೇ ಒಬ್ಬ ಸರಕಾರದ ಜನಪ್ರತಿನಿಧಿಯಾಗಲೀ, ರಾಜಕಾರಣಿಯಾಗಲೀ ಮಾತನಾಡದೇ ಇರುವುದು ನಮಗೆ ಬೇಸರ ತಂದಿದೆ. ಅಂತಹ ಕೊಟ್ಟ ಶಾಸಕನ ವಿರುದ್ಧ ಸರಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು. ನಾವು ಅನುದಾನ ಕೇಳುವುದಿಲ್ಲ, ಬೇರೆ ಬೇಡಿಕೆಯೂ ಇಡುವುದಿಲ್ಲ, ನಮ್ಮ ಮದರಸ, ಮಸೀದಿಗಳಿಗೆ ರಕ್ಷಣೆ ಕೊಡುವ ಜವಾಬ್ದಾರಿ ಈ ಸರಕಾರಕ್ಕಿದೆ, ಅದನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ. ಇಲ್ಲಿ ನ್ಯಾಯಯುತವಾಗಿ ಬದುಕಲು ಬಿಡಿ ಎಂದು ಕೇಳುತ್ತಿದ್ದೇವೆ, ಕೆಲವು ಘಟನೆ ನಡೆದಾಗ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುವುದು, ಜೈಲಿಗಟ್ಟುವುದು ನಡೆಯುತ್ತಿದೆ, ಇಂತಹ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ, ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಅವರು ಹೇಳಿದರು. ಇದೇ ರೀತಿಯ ತಾರತಮ್ಯ ನೀತಿ ಮತ್ತು ಅನ್ಯಾಯ ಮುಂದುವರಿದರೆ ಅದರ ವಿರುದ್ಧ ಸೆಟೆದು ನಿಲ್ಲಲೂ ನಮಗೆ ಗೊತ್ತಿದೆ ಎಂದು ಅವರು ಹೇಳಿದರು. ಕಳೆದ ಸರಕಾರ ರದ್ದುಪಡಿಸಿದ್ದ ಮುಸ್ಲಿಂ ಮೀಸಲಾತಿ ಮತ್ತು ವಿವಿಧ ಯೋಜನೆಯನ್ನು ಸರಕಾರ ಕೂಡಲೇ ಪ್ರಾರಂಭಿಸಬೇಕೆಂದು ಅವರು ಮನವಿ ಮಾಡಿದರು.

ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ-ಯೂಸುಫ್ ಗೌಸಿಯಾ
ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ನಡೆದ ಮೊಹಲ್ಲಾ ಪ್ರತಿನಿಧಿ ಸಮಾವೇಶದಲ್ಲಿ ವಿವಿಧ ಮೊಹಲ್ಲಾಗಳಿಂದ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಉಲಮಾ-ಉಮರಾ ಒಗ್ಗೂಡಿಕೊಂಡು ಮುನ್ನಡೆಯುತ್ತಿರುವ ಎಸ್‌ಎಂಎ ರಾಜ್ಯಕ್ಕೆ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೀಜನಲ್, ಝೋನಲ್, ಜಿಲ್ಲಾ ನಾಯಕರಿಗೆ, ಹಾಗೂ ಎಲ್ಲಾ ಮೊಹಲ್ಲಾ ಪ್ರತಿನಿಧಿಗಳಿಗೆ ಮತ್ತು ಎಸ್‌ಎಂಎ ಸದಸ್ಯರಿಗೆ ಕೃತಜ್ಞತೆಗಳು ಎಂದು ಎಸ್‌ಎಂಎ ದಕ ಈಸ್ಟ್ ಜಿಲ್ಲೆ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ತಿಳಿಸಿದರು.

ಖಂಡನಾ ನಿರ್ಣಯ:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಇತ್ತೀಚೆಗೆ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇದೆ ಎನ್ನುವ ಹೇಳಿಕೆ ನೀಡಿರುವುದನ್ನು ಖಂಡಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಅಬ್ಬಾಸ್ ಬಟ್ಲಡ್ಕ ಖಂಡನಾ ನಿರ್ಣಯ ಮಂಡಿಸಿದರು.

ವೇದಿಕೆಯಲ್ಲಿ ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಎಸ್‌ಎಂಎ ರಾಜ್ಯ ಉಪಾಧ್ಯಕ್ಷ ಖಾದರ್ ಹಾಜಿ, ಜಿಲ್ಲೆ ಹಾಗೂ ಝೋನಲ್ ನಾಯಕರಾದ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಇಬ್ರಾಹಿಂ ಬೀಡು ಬೆಳ್ಳಾರೆ, ಹಮೀದ್ ಮುಂಡಾಜೆ, ಇಸ್ಮಾಯಿಲ್ ಹಾಜಿ ಬನ್ನೂರು, ಇಸ್ಮಾಯಿಲ್ ಉಳ್ತೂರು, ಇಬ್ರಾಹಿಂ ಸಹದಿ ನೆಕ್ಕಿಲಾಡಿ, ಅಬ್ಬಾಸ್ ಬಟ್ಲಡ್ಕ, ಅಬ್ದುಲ್ ಲತೀಫ್ ಹರ್ಲಡ್ಕ, ಅಬ್ದುಲ್ಲ ಅಹ್ಸನಿ ಮಾಡನ್ನೂರು, ಅಶ್ರಫ್ ಹಿಮಮಿ, ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ಉಪಸ್ಥಿತರಿದ್ದರು.
ಎಸ್‌ಎಂಎ ರಾಜ್ಯಾಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುವಾ ನೆರವೇರಿಸಿದರು. ಎಸ್‌ಎಂಎ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಯೂಸುಫ್ ಗೌಸಿಯಾ ಸಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಸ್ವಾಗತಿಸಿದರು.

ಸ್ವಾಗತ ಸಮಿತಿ ಕನ್ವೀನರ್ ಖಾಸಿಂ ಸಖಾಫಿ ವಂದಿಸಿದರು. ಎಸ್‌ಎಂಎ ವಿಟ್ಲ ಝೋನ್ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಮೊಹಲ್ಲಾಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here