4 ವರ್ಷಗಳಿಂದ ಜಿಲ್ಲೆಗೆ ಒಂದೇ ಒಂದು ಮನೆ ಮಂಜೂರಾಗಿಲ್ಲ-ಜಿಲ್ಲಾ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ-ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವರ ಸೂಚನೆ

0

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಸತಿ ಯೋಜನೆಗಳು ಮಂಜೂರಾಗಿವೆ.ಆದರೆ ವಿವಿಧ ಯೋಜನೆಗಳಡಿ 2021-22ರಿಂದ ವಸತಿಗಾಗಿ ದ.ಕ.ಜಿಲ್ಲೆಯಿಂದ ಬೇಡಿಕೆಗಳೇ ಸಲ್ಲಿಕೆಯಾಗಿಲ್ಲ ಎಂಬ ವಿಚಾರ ದ.ಕ.ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಗಿ ತೀವ್ರ ಚರ್ಚೆಗೆ ಕಾರಣವಾಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಜು.5ರಂದು ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ವಿವಿಧ ವಸತಿ ಯೋಜನೆಗಳ ಪ್ರಗತಿಯ ಪಾಲನಾ ವರದಿಯ ಸಂದರ್ಭ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಈ ಬಗ್ಗೆ ಗಮನ ಸೆಳೆದರು.


ಬೆಂಗಳೂರಿನಲ್ಲಿ ಇತ್ತೀಚೆಗೆ ವಸತಿ ಸಚಿವರ ಜತೆ ಸಭೆ ನಡೆಸಿದ ವೇಳೆ 2021ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಮನೆಗಳಿಗಾಗಿ ಜಿಲ್ಲೆಯಿಂದ ಬೇಡಿಕೆ ಸಲ್ಲಿಕೆಯಾಗದಿರುವ ಬಗ್ಗೆ ಗಮನಕ್ಕೆ ಬಂದಿದೆ.ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ವಸತಿ ಯೋಜನೆಗಳಡಿ ಮನೆಗಳು ಮಂಜೂರಾಗಿದ್ದರೂ ದ.ಕ. ಜಿಲ್ಲೆಯ ವಸತಿ ಹಾಗೂ ನಿವೇಶನ ರಹಿತರು ಈ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಶೋಕ್ ಕುಮಾರ್ ರೈ ಆಕ್ಷೇಪಿಸಿದರು.


ಈ ವೇಳೆ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಮಾತನಾಡಿ, 2018ರಲ್ಲಿ ಮಾಡಿದ ಸರ್ವೆ ಪ್ರಕಾರ ಜಿಲ್ಲೆಯಲ್ಲಿ ಆ ಕಾಲದಲ್ಲೇ 49715 ಮನೆಗಳಿಗೆ ಬೇಡಿಕೆ ಸಲ್ಲಿಕೆಯಾಗಿತ್ತು ಎಂದರು.ತಾಂತ್ರಿಕ ಕಾರಣದಿಂದ ಕೆಲವೊಂದು ಸಮಸ್ಯೆಯಾಗಿತ್ತು ಎಂದು ಯೋಜನಾ ನಿರ್ದೇಶಕರು ಮಾಹಿತಿ ನೀಡಿದಾಗ, ಇದು ಗಂಭೀರ ವಿಚಾರವಾಗಿದ್ದು ಸರಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಒತ್ತಾಯಿಸಿದರು.


ನಾಲ್ಕು ವರ್ಷಗಳಿಂದ ಒಂದೇ ಒಂದು ಮನೆ ಮಂಜೂರಾಗಿಲ್ಲ ಎಂದಾದರೆ, ಸರಕಾರಿ ಜಾಗ ಇದ್ದರೂ ಮನೆ ಕೊಡಲು ಸಾಧ್ಯವಾಗಿಲ್ಲ ಎಂದಾದರೆ ಅದಕ್ಕೆ ಕಾರಣಕರ್ತರಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.ಬಡವರಿಗೆ ಮನೆ ಮಂಜೂರು ಮಾಡುವಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.


ಇನ್ನೂ ಪೂರ್ಣವಾಗದ ಮನೆಗಳು:
ಜಿಲ್ಲೆಯಲ್ಲಿ ಪ್ರಸ್ತುತ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳು 2010ರಿಂದ 2020ರವರೆಗೆ ಮಂಜೂರಾಗಿರುವಂಥದ್ದು.ಈ ಹತ್ತು ವರ್ಷಗಳಲ್ಲಿ ಒಟ್ಟು 64,123 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 48,252 ಮನೆಗಳು ಪೂರ್ಣಗೊಂಡಿವೆ.4,898 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, 1,111 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಆರಂಭವೇ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.ಎಲ್ಲ ಮನೆಗಳನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಲು ಸಚಿವರು ಸೂಚಿಸಿದರು.


ಟಿಸಿ ಸಮಸ್ಯೆ ಬಗ್ಗೆ ದೂರು ನೀಡಿದ್ದರೂ ನಿರ್ಲಕ್ಷ್ಯದಿಂದ ಅವಘಡ:
ಜಿಲ್ಲೆಯಲ್ಲಿ ವಿದ್ಯುತ್ ಆಘಾತದಿಂದ ಮೂರು ಮಂದಿ ಸಾವನ್ನಪ್ಪಿರುವ ಪ್ರಕರಣಗಳ ಕುರಿತು ಚರ್ಚೆಯ ವೇಳೆ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟರವರು ಶಿಬಾಜೆಯಲ್ಲಿ ಯುವತಿ ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದರು.ಅಲ್ಲಿ ಟ್ರಾನ್ಸ್ ಫಾರ್ಮರ್ ಸಮಸ್ಯೆ ಬಗ್ಗೆ ಮೂರು ಬಾರಿ ಸ್ಥಳೀಯರು ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದ ಕಾರಣವೇ ಈ ದುರಂತವಾಗಿದ್ದು ಈ ಬಗ್ಗೆ ತನಿಖೆ ಆಗಬೇಕು ಎಂದು ಕ್ಯಾ|ಚೌಟ ಆಗ್ರಹಿಸಿದರು.ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ವಿದ್ಯುತ್ ಅಪಘಾತದಿಂದ ಅಮಾಯಕರ ಸಾವು ನೋವಿನ ಸಂಗತಿ.ಇದರ ಹೊಣೆಗಾರಿಕೆ ಮೆಸ್ಕಾಂನದ್ದು ಆಗಿದೆ.ಶಿಬಾಜೆ ಪ್ರಕರಣದಲ್ಲಿ ತನಿಖೆ ನಡೆಸಿ 10 ದಿನಗಳಲ್ಲಿ ವರದಿ ನೀಡಬೇಕು.ಮೆಸ್ಕಾಂ ವತಿಯಿಂದ ನಿರ್ಲಕ್ಷ್ಯ ಆಗಿದ್ದಲ್ಲಿ ಶಿಸ್ತು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.


ಪೃಕೃತಿ ವಿಕೋಪದಿಂದ ಪೂರ್ತಿ ಮನೆ ಬಿದ್ದರೆ ರೂ.5 ಲಕ್ಷ ಪರಿಹಾರ ಕೊಡಿ:
ಗಾಳಿ,ಮಳೆಗೆ ಧರೆ ಕುಸಿತ ಸೇರಿದಂತೆ ಪೃಕೃತಿ ವಿಕೋಪದಿಂದ ವಾಸದ ಮನೆ ಪೂರ್ತಿ ಧ್ವಂಸವಾದರೆ ಅಂಥವರಿಗೆ ಸರಕಾರದಿಂದ ಕನಿಷ್ಡ 5 ಲಕ್ಷ ರೂ.ಪರಿಹಾರವಾದರೂ ಕೊಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದರು.ಸದ್ಯ ಸರಕಾರ ಮನೆಪೂರ್ತಿ ಧ್ವಂಸವಾದರೆ 1.25 ಲಕ್ಷ ರೂ.ಪರಿಹಾರ ಕೊಡುತ್ತಿದೆ.ಈ ಹಣದಿಂದ ಮನೆ ಕಟ್ಟಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ ಶಾಸಕ ರೈ, ಸರಕಾರದ ಹಣ ಬರುವುದು ಹಂತ ಹಂತವಾಗಿ, ಮನೆ ಯೋಜನೆ ಪೂರ್ತಿಯಾಗುವಾಗ ವರ್ಷ ಕಳೆಯುತ್ತದೆ ಅಷ್ಟು ಸಮಯ ಮನೆ ಕಳೆದುಕೊಂಡವರು ಏನು ಮಾಡುವುದು?ಎಂದರಲ್ಲದೆ, ಅವರಿಗೆ ಒಂದು ಚಿಕ್ಕ ಮನೆಯ ನಿರ್ಮಾಣಕ್ಕೆ ಸರಕಾರ 5 ಲಕ್ಷ ರೂ.ಕೊಡುವಂತಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮನೆಗಳು ಧರೆ ಕುಸಿದು ಧ್ವಂಸವಾಗಿದೆ,ಕೆಲವೊಂದು ಕಡೆ ಭಾಗಶ: ಹಾನಿಯಾಗಿದೆ.ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಧರೆ ಕುಸಿತ ಹೆಚ್ಚಾಗಿರುತ್ತದೆ.ಸರಕಾರ ವಿಶೇಷ ಗಮನಹರಿಸಿ ದ.ಕ.ಜಿಲ್ಲೆಗೆ ವಿಶೇಷ ಮಾನ್ಯತೆಯನ್ನು ನೀಡಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಶಾಸಕರು ಮನವಿ ಮಾಡಿದರು.ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಸಚಿವರು ಹೇಳಿದರು.


ರಸ್ತೆ ಬದಿಯ ಮಾವು,ಹಲಸು ಇನ್ನಿತರ ಹಣ್ಣುಗಳ ಏಲಂ ರದ್ದು:
ರಸ್ತೆ ಬದಿಗಳಲ್ಲಿರುವ ಮಾವು, ಹಲಸು ಹಾಗೂ ಇನ್ನಿತರ ಹಣ್ಣಿನ ಮರಗಳ ಕಾಯಿಗಳನ್ನು ಏಲಂ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ರದ್ದು ಮಾಡಿದ್ದು ಮುಂದೆ ಸಾರ್ವಜನಿಕ ಸ್ಥಳದಲ್ಲಿರುವ ಮರಗಳ ಹಣ್ಣನ್ನು ಏಲಂ ಮಾಡುವಂತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ರಸ್ತೆ ಬದಿಯಲ್ಲಿರುವ ಹಣ್ಣಿನ ಮರಗಳ ಹಣ್ಣುಗಳನ್ನು ಚಿಲ್ಲರೆ ಹಣಕ್ಕಾಗಿ ಏಲಂ ಕರೆಯಲಾಗುತ್ತದೆ.ಏಲಂ ಪಡೆದವರು ಹಣ್ಣು ಕೊಯ್ಯುವ ಸಂದರ್ಭ ಮರಕ್ಕೂ ಹಾನಿ ಮಾಡುತ್ತಾರೆ.ಈ ಹಣ್ಣನ್ನು ಹಾಗೇ ಉಳಿಸಿಕೊಂಡಲ್ಲಿ ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೂ ತಿನ್ನಬಹುದು.ಯಾವುದೇ ಕಾರಣಕ್ಕೂ ಏಲಂ ಮಾಡದಂತೆ ವ್ಯವಸ್ಥೆ ಆಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದರು.ಇದಕ್ಕೆ ಉತ್ತರ ನೀಡಿದ ಸಚಿವರು ಜಿಲ್ಲೆಯಲ್ಲಿ ಇನ್ನು ಮುಂದೆ ಎಲ್ಲಿಯೂ ರಸ್ತೆ ಬದಿಯಲ್ಲಿರುವ ಹಣ್ಣಿನ ಮರಗಳ ಹಣ್ಣನ್ನು ಏಲಂ ನಡೆಸಬಾರದು.ಈ ಬಗ್ಗೆ ಸ್ಥಳೀಯ ಸಂಸ್ಥೆಗೆ ಆದೇಶ ಹೊರಡಿಸಿ ಎಂದು ಜಿಲ್ಲಾಽಕಾರಿಗೆ ಸಚಿವರು ಸೂಚನೆ ನೀಡಿದರು.


ಅಡಿಕೆ ಹಳದಿ, ಕೊಳೆ ರೋಗ ಶಾಶ್ವತ ಪರಿಹಾರ ಅಗತ್ಯ:
ಸುಳ್ಯ ಹಾಗೂ ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಡಿಕೆಗೆ ಹಳದಿ ಹಾಗೂ ಕೊಳೆ ರೋಗ ಬಂದಿದೆ.ಯಾವುದೇ ಔಷಧಿ ಸಿಂಪಡಣೆ ಮಾಡಿದರೂ ರೋಗ ಕಡಿಮೆಯಾಗಿಲ್ಲ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಎರಡು ತಾಲೂಕಿನ ಕೃಷಿಕರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಶಾಸಕರು ಸಚಿವರ ಗಮನ ಸೆಳೆದರು.ಕೊಳೆರೋಗ ಅಥವಾ ಹಳದಿ ರೋಗ ಬಂದರೆ ಕೃಷಿಕರಿಗೆ ಪರಿಹಾರ ಕೊಟ್ಟರೆ ಸಾಲದು, ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ.ಸಾವಿರಾರು ಕೃಷಿಕರು ಅಡಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ.ಬೆಳೆ ವಿಮೆಯಲ್ಲಿ ಪರಿಹಾರ ಸರಕಾರ ಕೊಟ್ಡರೆ ಏನೂ ಸಾಲದು.ಜೀವನವೇ ಅಡಿಕೆ ಆಗಿರುವಾಗ ಪರಿಹಾರ ಎಷ್ಟು ಕೊಡಬೇಕಿದೆ? ವಿಜ್ಞಾನಿಗಳನ್ನು ಕರೆಸಿ ಈ ಬಗ್ಗೆ ಸಂಶೋಧನೆ ನಡೆಸಿ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕು.ಈ ಬಗ್ಗೆ ನಾನು ಸಿಪಿಸಿಆರ್‌ಐ ವಿಜ್ಞಾನಿಗಳ ಜೊತೆ ಮಾತನಾಡಿದ್ದೇನೆ, ಸರಕಾರ ಇದಕ್ಕೆ ವಿಶೇಷ ಅನುದಾನವನ್ನು ಮೀಸಲಿಡುವ ಮೂಲಕ ಅಡಿಕೆ ಕೊಳೆರೋಗ ಮತ್ತು ಹಳದಿ ರೋಗದ ಬಗ್ಗೆ ಸಂಶೋಧನೆ ಮಾಡಿ ಕೃಷಿಕರಿಗೆ ಬದುಕು ನೀಡಬೇಕಿದೆ.ಈಗಾಗಲೇ ಸುಳ್ಯ ತಾಲೂಕಿನ ಆರ್ಧ ಭಾಗ ಹಾಗೂ ಪುತ್ತೂರು ತಾಲೂಕಿನ ಒಂದೆರಡು ಗ್ರಾಮದಲ್ಲಿ ರೋಗ ಕಾಣಿಸಿಕೊಂಡಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದಾಗ, ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.


ಪ್ಲಾಟಿಂಗ್‌ಗೆ ಸಮಯ ನಿಗದಿ ಮಾಡಿ ಬಡವರನ್ನು ಕಚೇರಿಗೆ ಅಲೆದಾಡಿಸಬೇಡಿ:
ಪ್ಲಾಟಿಂಗ್‌ಗೆ ಅರ್ಜಿ ಹಾಕಿ ನಾಲ್ಕರಿಂದ ಐದು ವರ್ಷಗಳಿಂದ ಜನ ಕಾಯುತ್ತಿದ್ದಾರೆ, ಪ್ರತೀ ದಿನ ತಾಲೂಕು ಕಚೇರಿ ಅಲೆದಾಡುತ್ತಿದ್ದಾರೆ, ಪ್ಲಾಟಿಂಗ್‌ಗೆ ಸರಕಾರ ತಕ್ಷಣ ಸಮಯ ನಿಗಽಮಾಡಬೇಕು.ಸರ್ವೆಯರ್‌ಗಳ ಕೊರತೆಯಿದೆ ಎಂದು ಇಲಾಖೆ ಸಬೂಬು ಹೇಳುತ್ತಿದೆ.ಪರವಾನಿಗೆ ಹೊಂದಿರುವ ಖಾಸಗಿ ಸರ್ವೆಯರ್‌ಗಳಿಗೆ ಸರ್ವೆ ಮಾಡಿಸಲು ಸರಕಾರ ಅನುಮತಿ ನೀಡಬೇಕು. ತಾಲೂಕಲ್ಲಿ ಒಬ್ಬರೇ ಸರ್ವೆಯರ್ ಕೆಲಸ ಮಾಡಿದರೆ ಅರ್ಜಿ ವಿಲೇವಾರಿ ಮಾಡಲು ತುಂಬಾ ತಡವಾಗಬಹುದು.ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ಲಾಟಿಂಗ್ ಸಮಸ್ಯೆಯನ್ನು ಬಗೆಹರಿಸಬೇಕು.ಅರ್ಜಿ ಹಾಕಿದ ಬಳಿಕ ಗರಿಷ್ಠ ಮೂರು ತಿಂಗಳಲ್ಲಿ ಪ್ಲಾಟಿಂಗ್ ಪೂರ್ಣವಾಗುವಂತೆ ವ್ಯವಸ್ಥೆಯಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.ಅಶೋಕ್ ರೈ ಹೇಳಿದ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ.ಪ್ಲಾಟಿಂಗ್ ಸಮಸ್ಯೆ ಇತ್ಯರ್ಥವಾಗುವಲ್ಲಿ ಖಾಸಗಿ ಸರ್ವೆಯರ್‌ಗಳ ಬಳಕೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹರಿಸವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದರು.


ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ದ.ಕ.ಜಿಲ್ಲಾಽಕಾರಿ ಮುಲ್ಲೈ ಮುಗಿಲನ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್,ಜಿಲ್ಲಾ ಪೊಲೀಸ್ ಅಧಿಕ್ಷಕ ಯತೀಶ್ ಎನ್.,ಅಪರ ಜಿಲ್ಲಾಽಕಾರಿ ಡಾ.ಸಂತೋಷ್ ಕುಮಾರ್,ಮೆಸ್ಕಾಂ ಎಂ.ಡಿ.ಪದ್ಮಾವತಿ ವೇದಿಕೆಯಲ್ಲಿದ್ದರು. ನಾಮ ನಿರ್ದೇಶಿತ ಸದಸ್ಯರಾದ ರಾಜಶೇಖರ್ ಜೈನ್,ಸಂತೋಷ್ ಕುಮಾರ್,ಹಮೀದ್ ಕಿನ್ಯ, ಸುಜಯಕೃಷ್ಣ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಶೋಕ್ ರೈಯವರೇ ನೀವು ಗಿಡ ನೆಟ್ಟಿದ್ದು ಭಾರೀ ಸುದ್ದಿಯಾಗಿದೆ
ಅಶೋಕ್ ರೈಗಳೇ ನೀವು ರಸ್ತೆ ಬದಿಯಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರಪ್ರೇಮ ಮೆರೆದಿದ್ದೀರಿ.ಇದು ಭಾರೀ ಸುದ್ದಿಯಾಗಿದೆ,ವೈರಲ್ ಆಗಿದೆ.ಸರಕಾರದ ಗಮನಕ್ಕೂ ಬಂದಿದೆ.ಈ ಥರ ಎಲ್ಲಾ ಶಾಸಕರು ಮುತುವರ್ಜಿ ವಹಿಸಿದರೆ ಒಂದಷ್ಡು ಗಿಡಗಳು ಬೆಳೆಯ ಬಹುದು.ಅಶೋಕ್ ರೈಗಳೇ ಒಳ್ಳೆಯ ಕೆಲಸ ಮಾಡುತ್ತೀರಿ.ಎಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here