ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಹಲಸಿನ ಹಬ್ಬ- 24ರಲ್ಲಿ ಆದರ್ಶ ದಂಪತಿ ಸ್ಪರ್ಧೆ ನಡೆಯಿತು.
ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅವರ ಸಾರಥ್ಯದಲ್ಲಿ ನಡೆದ ಸ್ಪರ್ಧೆಯನ್ನು ಉದ್ಯಮಿ ನಟೇಶ್ ಪೂಜಾರಿ ದಂಪತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ನಟೇಶ್ ಪೂಜಾರಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಉಪ್ಪಿನಂಗಡಿ ಜೇಸಿಐಯಿಂದ ಇಂತಹ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ರಂಗ ಕಲಾವಿದ ‘ರಂಗ್‌ದ ರಾಜೆ’ ಸುಂದರ ರೈ ಮಂದಾರ ಮಾತನಾಡಿ, ವೇದಿಕೆಯ ಸ್ಪರ್ಧೆಗೆ ಮಾತ್ರ ಆದರ್ಶ ದಂಪತಿಗಳಾಗಿರಬಾರದು. ಮನೆಯಲ್ಲಿಯೂ ಆದರ್ಶ ದಂಪತಿಗಳಾಗಬೇಕು. ದಂಪತಿಗಳೊಳಗೆ ಭಿನ್ನಾಭಿಪ್ರಾಯಗಳು ಬಂದರೆ ಅದನ್ನು ಸಮಾಜದ ಮುಂದೆ ತಾರದೇ ಅವರೊಳಗೆ ಪರಿಹರಿಸಿಕೊಂಡು ಉತ್ತಮ ಜೀವನ ನಡೆಸುವ ಮೂಲಕ ನಿಜಾ ಜೀವನದಲ್ಲೂ ಆದರ್ಶ ದಂಪತಿಗಳಾಗಿದ್ದುಕೊಂಡು ಎಲ್ಲರಿಗೂ ಮಾದರಿಯಾಗಬೇಕೆಂದರು.
ವೇದಿಕೆಯಲ್ಲಿ ಶ್ರೀಮತಿ ಪ್ರಮೀಳಾ ನಟೇಶ್ ಪೂಜಾರಿ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ, ಜೇಸಿಐ ಅಧ್ಯಕ್ಷೆ ಶ್ರೀಮತಿ ಲವೀನಾ ಪಿಂಟೋ, ಜೇಸಿಐ ಶೇಖರ ಗೌಂಡತ್ತಿಗೆ ಉಪಸ್ಥಿತರಿದ್ದರು.
ಆದರ್ಶ ದಂಪತಿ ಸ್ಪರ್ಧೆಯಲ್ಲಿ ಗುರುಕಿರಣ್ ಶೆಟ್ಟಿ ದಂಪತಿ ಪ್ರಥಮ, ಪ್ರದೀಪ್ ಬಾಕಿಲ ದಂಪತಿ ದ್ವಿತೀಯ ಹಾಗೂ ವಿನ್ಸೆಂಟ್ ಬ್ರಾಗ್ಸ್ ದಂಪತಿ ತೃತೀಯ ಸ್ಥಾನ ಪಡೆದರು. ಮೋಹನ್‌ಚಂದ್ರ ತೋಟದಮನೆ ಸ್ವಾಗತಿಸಿ, ವಂದಿಸಿದರು.
ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕೃಷಿ ಮಾಹಿತಿ:
ಹಲಸು ಹಬ್ಬದ ಎರಡನೇ ದಿನವಾದ ಜು.7ರಂದು ಬೆಳಗ್ಗೆ ನಡೆದ ಉಚಿತ ವೈದ್ಯಕೀಯ ಶಿಬಿರ, ಕೃಷಿ ಮಾಹಿತಿ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಇಟ್ಟಿಗುಂಡಿ ‘ನಮ್ಮ ಆಹಾರ ಬಳಕೆಯಲ್ಲಿ ಸಿರಿ ಧಾನ್ಯದ ಪಾತ್ರಗಳು’ ವಿಷಯದ ಕುರಿತಾಗಿ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ರರಂಜನ್ ಬೋಳಾರ್, ಉದ್ಯಮಿ ವಿದ್ಯಾದರ ಜೈನ್, ವಲಯ 15ರ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಭರತ್ ಶೆಟ್ಟಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪುಳಿತ್ತಡಿಯ ಶ್ರೀ ಮಯೂರ ಮಿತ್ರದ ಅಧ್ಯಕ್ಷ ಹರೀಶ್ ಕೊಡಂಗೆ ಉಪಸ್ಥಿತರಿದ್ದರು.
ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಧುಮೇಹ ರಕ್ತ ಪರೀಕ್ಷೆ, ಸಾಮಾನ್ಯ ವೈದ್ಯಕೀಯ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಕೀಲು ಮತ್ತು ಗಂಟು ನೋವು ತಪಾಸಣೆ, ಮೂಲವ್ಯಾಧಿ ತಪಾಸಣೆ, ಸ್ತ್ರಿ ರೋಗ ಮತ್ತು ಪ್ರಸೂತಿ ತಪಾಸಣೆ, ಉಚಿತ ಔಷಧಿ ವಿತರಣೆ ನಡೆಯಿತು.