“ಸೋಲನ್ನು ಕೂಡಾ ಗೆಲುವಿನ ಮೆಟ್ಟಲಾಗಿಸಿ ಮುನ್ನಡೆಯುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು”- ವಸಂತಿ.ಕೆ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಜು.8ರಂದು ಗಣಪತಿಹೋಮ ಹಾಗೂ ಸರಸ್ವತಿ ಪೂಜಾ ಕಾರ‍್ಯಕ್ರಮದೊಂದಿಗೆ ಪ್ರಾರಂಭಗೊಂಡಿತು.
ಪೂಜಾ ಕಾರ‍್ಯಕ್ರಮದ ನಂತರ ನಡೆದ ಸಭಾ ಕಾರ‍್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಅಧ್ಯಕ್ಷೆ ವಸಂತಿ.ಕೆ. ರವರು ಮಾತನಾಡಿ “ವಿದ್ಯೆ ಎಂಬುದು ಬೇರೆ ಯಾರಿಗೂ ನಮ್ಮಿಂದ ಕಸಿದುಕೊಳ್ಳಲಾಗದಂತಹ ಅಮೂಲ್ಯ ಸಂಪತ್ತು.ಸೋಲನ್ನು ಕೂಡಾ ಗೆಲುವಿನ ಮೆಟ್ಟಲಾಗಿಸಿ ಮುನ್ನಡೆಯುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು, ಸಂಶೋಧನೆಗೆ ನಮ್ಮನ್ನು ನಾವು ಪ್ರೇರೆಪಿಸಿಕೊಳ್ಳಬೇಕು. ನಿಮ್ಮ ಮುಂದಿನ ಅಧ್ಯಯನ ಹೆಚ್ಚು ಪರಿಣಾಮಕಾರಿಯಾಗಿ ಉಜ್ವಲ ಭವಿಷ್ಯವನ್ನು ರೂಪಿಸುವಂತಾಗಲಿ” ಎಂದರು.
ಅಧ್ಯಕ್ಷತೆ ವಹಿಸಿದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ”ನಿಮ್ಮ ಭವಿಷ್ಯವನ್ನು ಯಶಸ್ವಿ ಮಾಡಬಲ್ಲ ಸಂಸ್ಥೆಯಿಂದ ಶಿಕ್ಷಣ ಪಡೆದು, ಶಿಕ್ಷಣದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವವರಾಗಿ, ಹೆತ್ತವರ ಬೆಂಬಲದಿಂದ ನಿಮ್ಮ ಭವಿಷ್ಯವನ್ನು ರೂಪಿಸಿಕೊಂಡು ಸಮಾಜಕ್ಕೆ ಹಾಗೂ ಕುಟುಂಬದ ಆಸ್ತಿಯಾಗಿ, ನಿಮ್ಮ ಭವಿಷ್ಯ ಉಜ್ವಲವಾಗಲಿ” ಎಂದರು.
ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ರಿ ಮಣಿಲ ಮಾತನಾಡಿ”ಸಂಸ್ಥೆಯಲ್ಲಿ ಸಂಶೋಧನಾತ್ಮಕ ವಿಚಾರಗಳಿಗೆ ಪೂರಕವಾದ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ. ಅದನ್ನು ಸದುಪಯೋಗಿಸಿಕೊಂಡು ಕಾರ‍್ಯರೂಪಕ್ಕೆ ಇಳಿಸಿಕೊಳ್ಳಿ” ಎಂದು ಹಾರೈಸಿದರು.
ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಜಯಂತಿ ನಾಯಕ್ ಮಾತನಾಡಿ “ನಾವೇನಾಗಬೇಕು ಎಂಬ ಧೃಢನಿಶ್ಚಯ ಮಾಡಿಕೊಂಡು ದೇಶಕ್ಕೆ ಸಂಸ್ಥೆಗೆ ನಿಷ್ಥೆಯಿಂದ ಇದ್ದು, ಮುಂದೆ ಗುರಿ ಹಿಂದೆ ಗುರುವನ್ನು ಇಟ್ಟುಕೊಂಡು ಸಾಧನೆಯನ್ನು ಮಾಡಿ ಜೀವನವನ್ನು ಸುಂದರವನ್ನಾಗಿ ಮಾಡಿಕೊಳ್ಳಿ” ಎಂದು ಹಿತನುಡಿದರು.
ಈ ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ ರವಿಮುಂಗ್ಲಿ ಮನೆ, ಸನತ್ ಕುಮಾರ್, ಹಾಗೂ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಕ್ಷೇಮಪಾಲನಾಧಿಕಾರಿ ರವಿರಾಮ ಎಸ್. ಹಾಗೂ ಸುಧಾಕುಮಾರಿ ಹಾಗೂ ನಿವೃತ್ತ ಹಿರಿಯ ಉಪನ್ಯಾಸಕರುಗಳಾದ ಹರೇಕೃಷ್ಣ ಬಿ., ಹರೀಶ ಭಟ್ ಹಾಗೂ ಸರವಣಮುತ್ತು ಮೊದಲಾದವರು ಉಪಸ್ಥಿತರಿದ್ದರು.
ಇಲೆಕ್ಟ್ರಾನಿಕ್ಸ್ &ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ಎಸ್. ಪ್ರಾರ್ಥಿಸಿದರು.ಕಾಲೇಜಿನ ಪ್ರಾಂಶುಪಾಲ ಮುರಳೀಧರ್ ಯಸ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಿವಿಲ್ ಇಂಗಿನಿಯರಿಂಗ್ ವಿಭಾಗ ಮುಖ್ಯಸ್ಥ ರವಿರಾಮ ಎಸ್ ವಂದಿಸಿದರು.ಇಲೆಕ್ಟ್ರಾನಿಕ್ಸ್ &ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಉಷಾಕಿರಣ್ ಹಾಗೂ ಆಟೋಮೊಬೈಲ್ ವಿಭಾಗದ ಉಪನ್ಯಾಸಕ ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.