ಆಗಸ್ಟ್ ತಿಂಗಳಲ್ಲಿ ಪುತ್ತೂರಿಗೆ 30 ಕೆಎಸ್‌ಆರ್‌ಟಿಸಿ ಬಸ್-ಶಾಸಕ ಅಶೋಕ್ ರೈ ಮನವಿಗೆ ಸಾರಿಗೆ ಸಚಿವರ ಸ್ಪಂದನೆ

0

ಪುತ್ತೂರು: ಆಗಸ್ಟ್ ತಿಂಗಳಲ್ಲಿ ಪುತ್ತೂರಿಗೆ ಹೆಚ್ಚುವರಿಯಾಗಿ 30 ಬಸ್‌ಗಳನ್ನು ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕೊರತೆ ಇದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಬಸ್ ಇಲ್ಲದೆ ತೊಂದರೆಗೊಳಗಾಗಿದ್ದಾರೆ. ಸುಮಾರು 10 ಬಸ್ಸುಗಳು ಸ್ಕ್ರ್ಯಾಪ್ ಸೇರಿದ್ದರಿಂದ ಪುತ್ತೂರು ಡಿಪೋದಲ್ಲಿ ಬಸ್ಸಿನ ಕೊರತೆ ಹೆಚ್ಚಾಗುವಂತೆ ಮಾಡಿದೆ. ಬಸ್ಸುಗಳ ಕೊರತೆಯಿಂದಾಗಿ ಕೆಲವೊಂದು ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ಕಡಿಮೆ ಮಾಡಲಾಗಿದೆ ಇದು ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ತೊಂದರೆಯುಂಟು ಮಾಡಿದೆ. ಪುತ್ತೂರಿಗೆ ಬೇಡಿಕೆ ಇರುವಷ್ಟು ಬಸ್‌ಗಳನ್ನು ಅಗತ್ಯವಾಗಿ ನೀಡುವಂತೆ ಶಾಸಕರು ಸಚಿವರಿಗೆ ಮನವಿ ಮಾಡಿದ್ದಾರೆ.


ಬೆಂಗಳೂರಿನ ಸಚಿವರ ಕಚೇರಿಗೆ ಭೇಟಿ ನೀಡಿ ಪುತ್ತೂರು ಕೆಎಸ್‌ಆರ್‌ಟಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಬಸ್ಸುಗಳಿದ್ದರೂ ಕೆಲವೊಮ್ಮೆ ಚಾಲಕ ಮತ್ತು ನಿರ್ವಾಹಕರ ಕೊರತೆ ಇರುತ್ತದೆ. ಚಾಲಕರಾಗಿ ಪುತ್ತೂರು ಭಾಗದವರನ್ನೇ ನೇಮಿಸಿಕೊಳ್ಳುವಂತೆ ಮತ್ತು ತನ್ನ ಟ್ರಸ್ಟ್ ಮೂಲಕ ಈಗಾಗಲೇ ಸುಮಾರು 75 ಮಂದಿ ಚಾಲಕರು ಗುತ್ತಿಗೆ ಆಧಾರದಲ್ಲಿ ನೇಮಕವೂ ಆಗಿರುತ್ತಾರೆ. ಪುತ್ತೂರು ಭಾಗದಲ್ಲಿ ಹೊಸ ಬಸ್ ಗೆ ಪುತ್ತೂರಿನವರನ್ನೇ ಚಾಲಕರನ್ನಾಗಿ ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

30 ಬಸ್ ನೀಡುತ್ತೇವೆ: ಸಚಿವ ರಾಮಲಿಂಗಾರೆಡ್ಡಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಶಾಸಕ ಅಶೋಕ್ ರೈಯವರು ಬಸ್ ಕೊರತೆಯ ಬಗ್ಗೆ ವಿವರಿಸಿದ್ದು ಮುಂದಿನ ಆಗಸ್ಟ್ ತಿಂಗಳಲ್ಲಿ 20 ಹೊಸ ಬಸ್‌ಗಳು ಹಾಗೂ 10 ಡಬಲ್ ಡೋರ್ ಬಸ್ಸುಗಳನ್ನು ನೀಡುವುದಾಗಿ ತಿಳಿಸಿದರು. ಚಾಲಕ ಮತ್ತು ನಿರ್ವಾಹಕರನ್ನು ತಮ್ಮ ಕ್ಷೇತ್ರದ ಚಾಲಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದು ಈ ಬಗ್ಗೆಯೂ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here