ಸುಬ್ರಹ್ಮಣ್ಯ: ಪ್ರಸಿದ್ಧ ನಾಗಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸತ್ತರೆ ಸಂಸ್ಕಾರಕ್ಕೆ ಮುಂದಾಗದ ದೇವಸ್ಥಾನದ ಅಧಿಕಾರಿಗಳ ವಿರುದ್ಧ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯ ರಾಜೇಶ್ ಎನ್.ಎಸ್. ಅವರ ನೇತೃತ್ವದಲ್ಲಿ ಭಕ್ತಾದಿಗಳು ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.
ಹಿಂದೂ ಸಂಪ್ರದಾಯ ಪ್ರಕಾರ ಸರ್ಪ ಸತ್ತು ಹೋದರೆ ಅದರ ಮೃತ ದೇಹವನ್ನು ಸುಟ್ಟು ಅದಕ್ಕೆ ಅಂತಿಮ ಸಂಸ್ಕಾರ ಹಾಗೂ ದೋಷ ಪರಿಹಾರ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ನಾಗಕ್ಷೇತ್ರವಾದ ಕಾರಣ, ಸರ್ಪ ಹತ್ಯಾ ದೋಷ ಪರಿಹಾರಕ್ಕೆ ಸಾವಿರಾರು ಭಕ್ತರು ಬಂದು ಇಲ್ಲಿ ಸರ್ಪ ಸಂಸ್ಕಾರ ಪೂಜೆಗಳನ್ನು ನೆರವೇರಿಸುತ್ತಾರೆ. ಆದರೆ ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ರಸ್ತೆಯಲ್ಲಿ ವಾಹನದಡಿಗೆ ಬಿದ್ದು ಸರ್ಪ ಒಂದು ಸತ್ತು ಹೋಗಿತ್ತು, ಇದನ್ನು ಗಮನಿಸಿದ ಸಾರ್ವಜನಿಕರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದರು, ಉಡಾಫೆ ಉತ್ತರಗಳನ್ನು ನೀಡಿ ನಮಗೆ ಭಟ್ರು ಸಿಗುತ್ತಿಲ್ಲ, ಆ ಸತ್ತು ಹೋದ ಸರ್ಪವನ್ನು ದಹನ ಮಾಡಲು ತಕ್ಷಣ ಆಗುವುದಿಲ್ಲ ಎಂದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಎದುರು ಪ್ರತಿಭಟನೆ:
ದೇವಸ್ಥಾನದ ಅಧಿಕಾರಿಗಳು ಸರ್ಪ ಸಂಸ್ಕಾರಕ್ಕೆ ಮುಂದಾಗದೇ ಉಡಾಫೆ ಮಾಡಿದಾಗ ದೇವಸ್ಥಾನದ ಆಡಳಿತ ಕಚೇರಿ ಮುಂದೆ ಸತ್ತ ಸರ್ಪದ ದೇಹವನ್ನು ಇಟ್ಟು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಎನ್ ಎಸ್ ಅವರು, ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಪೂಜೆಗೆ ಟಿಕೇಟು ಭರ್ತಿಯಾಗಿದ್ದರೆ, 5,000, 10,000 ಕೊಟ್ಟರೆ ನಿಮಗೆ ಭಟ್ರು ಸಿಗುತ್ತದೆ. ಕುಕ್ಕೆಯಲ್ಲಿ ಸತ್ತು ಹೋದ ನಾಗದೇವರಿಗೆ ಸಂಸ್ಕಾರ ಮಾಡಲು ನಿಮಗೆ ಭಟ್ರು ಸಿಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರು ಎಸಿ ಉತ್ತಮ ಸ್ಪಂದನೆ:
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಎನ್ ಎಸ್ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಪುತ್ತೂರು ಉಪ ವಿಭಾಗಾಧಿಕಾರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಅಧಿಕಾರಿಯಾಗಿರುವ ಜುಬಿನ್ ಮೊಹಪಾತ್ರ ಅವರನ್ನು ಸಂಪರ್ಕ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಎಸಿ ಜುಬಿನ್ ಮೊಹಪಾತ್ರ ಅವರು ಕುಕ್ಕೆಯಲ್ಲಿ ಸತ್ತ ಸರ್ಪನಿಗೆ ಸಂಸ್ಕಾರ ಮಾಡಲು ವ್ಯವಸ್ಥೆಯನ್ನು ಮಾಡಿದ್ದಾರೆ.