ಪುತ್ತೂರು: ದಕ್ಷಿಣ ಕನ್ನಡದ ರೈಲು ಪ್ರಯಾಣಿಕರ ಪರವಾಗಿ ಮತ್ತು ಸಾಮಾನ್ಯ ನಾಗರಿಕರ ಪರವಾಗಿ ಸಂಸದರು ಕೋರಿದ ಮನವಿ ಮೇರೆಗೆ, ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ಶ್ರೀ ವಿ. ಸೋಮಣ್ಣ ಅವರು ಜು.17ರಂದು ಮಂಗಳೂರಿಗೆ ಆಗಮಿಸಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ.
ಜು.17ರಂದು ಬೆಳಿಗ್ಗೆ 09.00 ರಿಂದ 09.45 ರ ವರೆಗೆ ಮಂಗಳೂರು ಸೆಂಟ್ರಲ್ ರೇಲ್ವೆ ನಿಲ್ದಾಣದ ವೀಕ್ಷಣೆ, 10.00 ರಿಂದ 10.45 ರ ವರೆಗೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ವೀಕ್ಷಣೆ ಹಾಗೂ 11.00 ರಿಂದ ಮಧ್ಯಾಹ್ನ 2.00 ರ ವರೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳೂರು ವ್ಯಾಪ್ತಿಯ ರೇಲ್ವೆ ವಿವಿಧ ಬೇಡಿಕೆಗಳು, ಸಮಸ್ಯೆಗಳು ಹಾಗೂ ಅಭಿವೃದ್ಧಿಯ ವಿಚಾರಗಳ ಕುರಿತು ಸಭೆ ನಡೆಸಲಿದ್ದಾರೆ. ವಿಶೇಷವಾಗಿ ಕೊಂಕಣ ಭಾಗದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಕೊಂಕಣ ರೈಲ್ವೆ ಮತ್ತು ಭಾರತೀಯ ರೈಲ್ವೆಯ ವಿಲೀನ, ಈ ವಿಲೀನದಿಂದ ರೈಲ್ವೆ ಮೂಲಸೌಕರ್ಯಗಳ ಸುಧಾರಣೆ ಮತ್ತು ಪ್ರಯಾಣಿಕರ ಅನುಕೂಲ ಸುಗಮವಾಗಲಿದೆ.
ಕೊಂಕಣ ರೈಲ್ವೇ ಮತ್ತು ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ಬೇಡಿಕೆಯ ಕುರಿತು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ರೈಲು ಯಾತ್ರಿಕರ ಸಮಸ್ಯೆಗಳ ಕುರಿತಾಗಿ ಚರ್ಚಿಸಲು ಮಂಗಳೂರಿನಲ್ಲಿಯೇ ಸಭೆ ಏರ್ಪಡಿಸುವಂತೆ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಅವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಜು.10ರಂದು ಪತ್ರ ಬರೆದಿದ್ದರು. ಕೊಂಕಣ ರೈಲು ಮಂಡಳಿಯನ್ನು ಭಾರತೀಯ ರೈಲ್ವೇ ಜೊತೆಗೆ ಸೇರ್ಪಡೆ ಮಾಡುವುದು ಮುಖ್ಯ ಬೇಡಿಕೆ. ಕೊಂಕಣ ರೈಲ್ವೇ ನಿಗಮ ಲಿಮಿಟೆಡ್ ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಎದುರಿಸುತ್ತಿರುವ ಹಣಕಾಸು ಅಡಚಣೆಗಳನ್ನು ನಿವಾರಿಸಲು ವಿಲೀನ ಅವಶ್ಯವಾಗಿದೆ. ಮುಂಬೈ- ಮಂಗಳೂರು ಮಧ್ಯೆ 741 ಕಿಮೀ ಉದ್ದದ ಕೊಂಕಣ ರೈಲ್ವೇ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿದ್ದು, ಭಾರತೀಯ ರೈಲ್ವೇ ವಿಭಾಗದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ. ಇನ್ನಿತರ ರೈಲು ಸಂಪರ್ಕದ ಅಭಿವೃದ್ಧಿಗೂ ಬೇರೆ ವಲಯಗಳನ್ನು ಅವಲಂಬಿಸುವ ಸ್ಥಿತಿಯಿದೆ. ಹೀಗಾಗಿ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜೊತೆಗೆ ವಿಲೀನಗೊಳಿಸಿದರೆ, ಕರಾವಳಿಯ ರೈಲ್ವೇ ವಲಯ ಅಭಿವೃದ್ಧಿ ಸಾಧ್ಯವಾಗಲಿದೆ.
ಇದಲ್ಲದೆ, ಮಂಗಳೂರು- ಬೆಂಗಳೂರು ರೈಲ್ವೇ ಮಾರ್ಗದ ಅಭಿವೃದ್ಧಿ ದೃಷ್ಟಿಯಿಂದ ಶಿರಾಡಿ ಘಾಟ್ ಭಾಗದ ಕಾರ್ಯಯೋಜನೆ ಬಗ್ಗೆ ಅಧ್ಯಯನ ಅಗತ್ಯವಿದೆ. ಶಿರಾಡಿ ಘಾಟ್ ನಲ್ಲಿ ಸದ್ಯ ಒಂದೇ ರೈಲು ಮಾರ್ಗವಿದ್ದು, ಸುಬ್ರಹ್ಮಣ್ಯ- ಸಕಲೇಶಪುರ ನಡುವೆ ಪ್ರತ್ಯೇಕ ರೈಲು ಹಳಿ ನಿರ್ಮಾಣಗೊಂಡರೆ ಪ್ರಯಾಣ ಮತ್ತು ಸರಕು ಸಾಗಣೆ ಸುಗಮವಾಗುತ್ತದೆ. ಇದರಿಂದ ಸಂಚಾರಕ್ಕೆ ಇರುವ ಪ್ರಮುಖ ಅಡಚಣೆ ನೀಗಿದಂತಾಗುತ್ತದೆ. ಮಂಗಳೂರು ಬಂದರು, ಏರ್ ಪೋರ್ಟ್, ರೈಲ್ವೇ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆ ಇರುವ ನಗರವಾಗಿದ್ದು, ಕರಾವಳಿ ಅಭಿವೃದ್ಧಿ ದೃಷ್ಟಿಯಿಂದ ರಾಜಧಾನಿ ಬೆಂಗಳೂರಿಗೆ ಅತಿ ವೇಗದಲ್ಲಿ ತಲುಪಲು ರೈಲು ವ್ಯವಸ್ಥೆಯಾಗಬೇಕಿದೆ. ಇದಕ್ಕಾಗಿ ಮಂಗಳೂರು – ಬೆಂಗಳೂರು ರೈಲ್ವೇ ಹಾದಿಯನ್ನು ಅಭಿವೃದ್ಧಿ ಮಾಡಲೇಬೇಕಿದೆ ಎಂದು ಸಂಸದ ಬ್ರಿಜೇಶ್ ಚೌಟ ಅವರು ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.
ಉಳಿದಂತೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ರೈಲ್ವೇ ಕಾಮಗಾರಿಗಳ ಪರಿಶೀಲನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಯ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ರೈಲ್ವೇ ಸಚಿವರಾಗಿ ತಾವು ಮಂಗಳೂರಿನಲ್ಲೇ ಸಭೆ ನಡೆಸಿದರೆ, ಅದರಲ್ಲಿ ದಕ್ಷಿಣ, ನೈರುತ್ಯ ಕೊಂಕಣ ರೈಲ್ವೇ ವಿಭಾಗದ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪಿಡಬ್ಲ್ಯುಡಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸುವ ಅವಕಾಶ ಸಿಗುತ್ತದೆ. ಎಲ್ಲ ಇಲಾಖೆಗಳನ್ನು ಒಟ್ಟು ಸೇರಿಸಿ ಮಂಗಳೂರಿನಲ್ಲಿ ಸಭೆಯನ್ನು ಮಾಡಲು ಉದ್ದೇಶಿಸಿದ್ದು ಈ ಸಭೆಯಲ್ಲಿ ಸಚಿವರಾಗಿ ತಾವು ಪಾಲ್ಗೊಳ್ಳಬೇಕೆಂದು ಪತ್ರ ಬರೆದು ಸಂಸದರು ಕೇಳಿಕೊಂಡಿದ್ದರು. ಅದರಂತೆ ಸಚಿವ ವಿ.ಸೋಮಣ್ಣ ಅವರು ಜು.17ರಂದು ಕೊಂಕಣ ರೈಲ್ವೇ ಮತ್ತು ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ಬೇಡಿಕೆಯ ಕುರಿತಾಗಿ ಸಭೆ ನಡೆಸಲಿದ್ದಾರೆ.