*ರಾಜ್ಯ ನಾಯಕರ ಸೂಚನೆಯಂತೆ ಸಭೆ ಕರೆದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
*ಮಂಡಲ ಬಿಜೆಪಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಭಾಗಿ
*ಅರುಣ್ ಕುಮಾರ್ ಪುತ್ತಿಲ,ಪರಿವಾರದ ಪ್ರಮುಖರಿಗೂ ಭಾಗವಹಿಸಲು ಕರೆ
*ಮಂಡಲ ಅಧ್ಯಕ್ಷರ ಆಯ್ಕೆ ಚೆಂಡು ಜಿಲ್ಲಾಧ್ಯಕ್ಷರ ಅಂಗಳದಲ್ಲಿ
ಪುತ್ತೂರು:ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಅಧಿಕಾರದ ಅವಧಿ ಈಗಾಗಲೇ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಚರ್ಚಿಸಿ ಸೂಕ್ತ ಅಭ್ಯರ್ಥಿಯ ಆಯ್ಕೆ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಜು.17ರಂದು ಮಂಗಳೂರುನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ.
ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಈ ಕುರಿತು ಸಮಾಲೋಚನೆಗಾಗಿ ಪಕ್ಷದ ಪ್ರಮುಖರ ಸಭೆ ಕರೆದಿದ್ದಾರೆ.ಮಂಗಳೂರುನಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್ ಮತ್ತು ಮಂಡಲದ ಪದಾಽಕಾರಿಗಳು,ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ,ಪಕ್ಷದ ವಿವಿಧ ಘಟಕಗಳ ಪ್ರಮುಖರ ಮಹತ್ವದ ಸಭೆ ನಡೆಯಲಿದ್ದು ನೂತನ ಅಧ್ಯಕ್ಷರ ಒಮ್ಮತದ ಆಯ್ಕೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ.ಲೋಕಸಭಾ ಚುನಾವಣೆ ಸಂದರ್ಭ ಬಿಜೆಪಿಗೆ ಸೇರಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿರುವ, ಪುತ್ತಿಲ ಪರಿವಾರದ ಪ್ರಮುಖರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಪುತ್ತೂರು ಮಂಡಲಕ್ಕೆ ಅಧ್ಯಕ್ಷರ ಆಯ್ಕೆ ಬಾಕಿಯಾಗಿತ್ತು:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪಽಸುವ ಇಚ್ಛೆ ಹೊಂದಿದ್ದು ಬಳಿಕ ಅವಕಾಶ ದೊರೆಯದೇ ಇದ್ದುದರಿಂದ ಕಾರ್ಯಕರ್ತರ ಅಪೇಕ್ಷೆಯಂತೆ ಹಿಂದುತ್ವದ ಸಿದ್ಧಾಂತದಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲು ಕಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತಿಲ ಪರಿವಾರದ ಪ್ರಮುಖರೊಂದಿಗೆ ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬಿಜೆಪಿಗೆ ವಾಪಸಾಗಿದ್ದರು.ವಿಧಾನಸಭೆ ಚುನಾವಣೆ ಬಳಿಕದ ಬೆಳವಣಿಗೆಗಳಿಂದ ಪುತ್ತಿಲ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಬಂಧ ದೂರವಾಗುತ್ತಲೇ ಹೋಗಿತ್ತು.ಲೋಕಸಭಾ ಚುನಾವಣೆ ಸಂದರ್ಭ ಪಕ್ಷದ ನಾಯಕರು ಮತ್ತು ಪುತ್ತಿಲ ಪರಿವಾರದ ಪ್ರಮುಖರ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿ ಕೊನೆಗೂ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ವಾಪಸಾಗಿದ್ದರು.
ಪಕ್ಷದಲ್ಲಿ ಸೂಕ್ತ ಸ್ಥಾನ-ಮಾನ ಪುತ್ತಿಲರಿಗೆ ಭರವಸೆ ನೀಡಲಾಗಿತ್ತು:
ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಹುದ್ದೆ ನೀಡುವುದಾದರೆ ಮಾತ್ರ ಅವರು ಬಿಜೆಪಿಗೆ ಮರಳಲಿದ್ದಾರೆ ಎಂದು ಪುತ್ತಿಲ ಪರಿವಾರದ ಪ್ರಮುಖರು ಷರತ್ತು ವಿಽಸಿದ್ದರು.ಮೊದಲು ಪಕ್ಷಕ್ಕೆ ಬರಲಿ,ಹುದ್ದೆ,ಸ್ಥಾನ-ಮಾನ ನೀಡುವುದೇನಿದ್ದರೂ ಆ ಬಳಿಕ ಸಂಬಂಧಿಸಿದವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಪ್ರಮುಖರು ಪುತ್ತಿಲ ಪರಿವಾರಕ್ಕೆ ಸ್ಪಷ್ಟಪಡಿಸಿದ್ದರು.ಬಳಿಕ ನಾಲ್ಕಾರು ಸುತ್ತು ಮಾತುಕತೆ ನಡೆದು, ಅರುಣ್ ಕುಮಾರ್ ಪುತ್ತಿಲ ಅವರು ಕೊನೆಗೂ ಬಿಜೆಪಿಗೆ ಮರಳಿದ್ದರು.ಲೋಕಸಭಾ ಚುನಾವಣೆ ಸಂದರ್ಭ ಪಕ್ಷ ಅವರಿಗೆ ಪ್ರಮುಖ ಜವಾಬ್ದಾರಿಯನ್ನೂ ನೀಡಿತ್ತು.ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಹುದ್ದೆ ನೀಡಲು ಪಕ್ಷದ ನಾಯಕರು ಮೌಖಿಕ ಒಪ್ಪಿಗೆ ಸೂಚಿಸಿದ ಬಳಿಕವೇ ಅವರು ಬಿಜೆಪಿಗೆ ಸೇರಿ ಲೋಕಸಭಾ ಚುನಾವಣೆ ಸಂದರ್ಭ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿರುವುದು.ಜಿಲ್ಲೆಯಲ್ಲಿ ಇತರೆಲ್ಲ ಮಂಡಲಗಳಿಗೆ ಅಧ್ಯಕ್ಷರ ಆಯ್ಕೆಯಾಗಿದ್ದರೂ ಪುತ್ತೂರು ಮಂಡಲಕ್ಕೆ ಇನ್ನೂ ಅಧ್ಯಕ್ಷರ ಆಯ್ಕೆ ಮಾಡದೇ ಖಾಲಿ ಬಿಟ್ಟಿರುವುದು ಮತ್ತು ಜಿಲ್ಲೆಯ ಉಪಾಧ್ಯಕ್ಷ ಸ್ಥಾನವೊಂದನ್ನೂ ಖಾಲಿ ಬಿಟ್ಟಿರುವುದು.ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಪುತ್ತಿಲ ಅವರಿಗೇ ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳುತ್ತಿವೆಯಾದರೂ ಜು.17ರ ಸಮಾಲೋಚನಾ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ.ಅರುಣ್ ಕುಮಾರ್ ಪುತ್ತಿಲ ಅವರಿಗೇ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ದೊರೆಯುವುದೇ ಅಥವಾ ಅಧ್ಯಕ್ಷರಾಗಿ ಬೇರೆ ಯಾರನ್ನಾದರೂ ಆಯ್ಕೆ ಮಾಡಿ ಪುತ್ತಿಲ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ಇಲ್ಲವೇ ಬೇರೆ ಯಾವುದಾದರೂ ಪ್ರಮುಖ ಹುದ್ದೆ ನೀಡಬಹುದೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.ಜು.17ರ ಸಮಾಲೋಚನಾ ಸಭೆಯಲ್ಲಿ ಇದು ಸ್ಪಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.