ಪರಿಶೀಲಿಸಿ ಕ್ರಮ-ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭರವಸೆ
ಬೆಂಗಳೂರು: ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಅಽವೇಶನದಲ್ಲಿ ಸದಸ್ಯ ಮಂಜುನಾಥ ಭಂಡಾರಿ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.ಈ ಮೂಲಕ ಶಾಸಕ ಅಶೋಕ್ ಕುಮಾರ್ ರೈಯವರ ಪ್ರಯತ್ನಕ್ಕೆ ಬಲ ದೊರೆತಂತಾಗಿದೆ.
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು,ಹೊಸ ವೈದ್ಯಕೀಯ ಕಾಲೇಜುಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇವೆಯೇ? ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? ಇದ್ದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಎಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು, ರಾಜ್ಯದಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ,ಕೋಲಾರ, ಬಾಗಲಕೋಟೆ,ವಿಜಯಪುರ,ರಾಮನಗರ,ತುಮಕೂರು, ಬೆಂಗಳೂರು ಗ್ರಾಮಾಂತರ, ವಿಜಯನಗರದಲ್ಲಿ ಇಲ್ಲ. ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬುದು ಸರ್ಕಾರದ ನೀತಿಯಾಗಿದೆ.ರಾಜ್ಯ ಸರ್ಕಾರದಿಂದ ಇದಕ್ಕಾಗಿ 610 ಕೋಟಿ ರೂ.ಅನಾವರ್ತಕ ವೆಚ್ಚ ಹಾಗೂ ವಾರ್ಷಿಕ ೬೦ ಕೋಟಿ ರೂ.ಆವರ್ತಕ ವೆಚ್ಚದ ಅವಶ್ಯಕತೆ ಇದೆ.ಅದರಂತೆ ಅನುದಾನದ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಚಿಂತನೆ ಇದ್ದು ಕೆಲವೆಡೆ ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲೂ ವೈದ್ಯಕೀಯ ಕಾಲೇಜು ನಿರ್ಮಿಸಲು ಉದ್ದೇಶಿಸಲಾಗಿದೆ.ಐಡೆಕ್ಸ್ ಕೂಡ ತನ್ನ ವರದಿಯಲ್ಲಿ ಇದನ್ನು ಹೇಳಿತ್ತು.ಈ ಸಂಬಂಧ ಸಭೆಯನ್ನೂ ನಡೆಸಲಾಯಿತು.ಆದರೆ ಪಿಪಿಪಿ ಅಡಿ ನಿರ್ಮಿಸಲು ನಮಗೆ ನೀಡಿರುವ ಪ್ರಸ್ತಾವನೆ ಅಷ್ಟೊಂದು ಸಮರ್ಪಕ ಅನಿಸಲಿಲ್ಲವಾದ್ದರಿಂದ ಈ ನಿಟ್ಟಿನಲ್ಲಿ ಮತ್ತಷ್ಟು ಪರಿಶೀಲನೆ ನಡೆಸಿ, ಮತ್ತೊಂದು ಆಯಾಮದಿಂದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.ಈ ವೇಳೆ ಮಾತನಾಡಿದ ಮಂಜುನಾಥ ಭಂಡಾರಿಯವರು, ದಕ್ಷಿಣ ಕನ್ನಡದ ಪುತ್ತೂರು ಮತ್ತು ಉಡುಪಿಯಲ್ಲಿ ಕುಂದಾಪುರ ಅಥವಾ ಬೈಂದೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉತ್ತರಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರೂ, ಮೆಡಿಕಲ್ ಕಾಲೇಜು ಆರಂಭದ ಪೂರ್ವ ಸಿದ್ದತೆಯಾಗಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.
ಬಡಾವಣೆ ಅನುಮೋದನೆ ಅಧಿಕಾರ ಗ್ರಾಪಂ.ಗಳಿಗೇ ವಾಪಸ್ ನೀಡಿ
ಇತ್ತೀಚಿಗೆ ಸರಕಾರ ನೀಡಿರುವ ಆದೇಶದಂತೆ, ಗ್ರಾಮ ಪಂಚಾಯತ್‌ಗಳು ಬಡಾವಣೆಗೆ ಅನುಮೋದನೆ ನೀಡುವ ಅಧಿಕಾರವನ್ನು ಹಿಂಪಡೆಯಲಾಗಿದೆ.ದ.ಕ.ಜಿಲ್ಲೆಯಲ್ಲಿ ಈ ಸ್ವತ್ತು ನಮೂನೆ 9/11 ಪಡೆಯುವಲ್ಲಿ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ.ಜನಸಾಮಾನ್ಯರು ಈ ಸ್ವತ್ತು ನಮೂನೆ 9/11 ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ನಿಟ್ಟಿನಲ್ಲಿ ಈ ಹಿಂದೆ ಇದ್ದಂತೆ, ಬಡಾವಣೆ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತ್‌ಗಳಿಗೇ ವಾಪಸ್ ನೀಡಬೇಕು.ಈ ಸಮಸ್ಯೆ ಬಗೆಹರಿಸಲು ಗ್ರಾಮೀಣಾಭಿವೃದ್ಧಿ, ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖಾ ಸಚಿವರ ಸಭೆಯನ್ನು ಕೂಡಲೇ ಆಯೋಜಿಸಬೇಕು ಎಂದು ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸರಕಾರವನ್ನು ಆಗ್ರಹಿಸಿದ್ದಾರೆ.ಪರಿಷತ್ ಕಲಾಪದಲ್ಲಿ ಶೂನ್ಯವೇಳೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು.
ಶಾಸಕ ರೈ ಪ್ರಯತ್ನಕ್ಕೆ ಬಲ
ಪುತ್ತೂರಿಗೆ ಮೆಡಿಕಲ್ ಕಾಲೇಜು ತರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಈಗಾಗಲೇ ಪ್ರಯತ್ನ ನಡೆಸುತ್ತಿದ್ದು ಇದೀಗ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರೂ ಈ ಕುರಿತು ಸರಕಾರದ ಗಮನ ಸೆಳೆಯುವುದರೊಂದಿಗೆ ಅಶೋಕ್ ಕುಮಾರ್ ರೈಯವರ ಹೋರಾಟಕ್ಕೆ ಬಲ ದೊರೆತಂತಾಗಿದೆ.ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಕುರಿತು ಚುನಾವಣಾ ಪೂರ್ವದಲ್ಲಿಯೇ ಅಶೋಕ್ ಕುಮಾರ್ ರೈಯವರು ಹೇಳಿಕೊಂಡಿದ್ದರು.ಶಾಸಕರಾಗಿ ಚುನಾಯಿತರಾದ ಬಳಿಕ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಬಂಧಿಸಿದ ಸಚಿವರು,ಅಧಿಕಾರಿಗಳ ಮೇಲೆ ನಿರಂತರ ಒತ್ತಡ ತರುತ್ತಿದ್ದಾರೆ.ವಿಧಾನಸಭಾ ಅಧಿವೇಶನದಲ್ಲಿಯೂ ವಿಷಯ ಪ್ರಸ್ತಾಪಿಸಿದ್ದಾರೆ.ಕಳೆದ ಬಜೆಟ್‌ನಲ್ಲಿಯೇ, ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದರಾದರೂ ಅದು ಕೈಗೂಡಲಿಲ್ಲ.ಈ ಬಾರಿಯ ಬಜೆಟ್‌ನಲ್ಲಿ ಇದು ಘೋಷಣೆಯಾಗಲೇಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಶೋಕ್ ಕುಮಾರ್ ರೈಯವರು ಒತ್ತಡ ಹಾಕುತ್ತಿದ್ದಾರೆ ಮತ್ತು ಸಿಎಂ ಅವರನ್ನು ಭೇಟಿಯಾದ ಸಂದರ್ಭದಲ್ಲೆಲ್ಲ ಮೆಡಿಕಲ್ ಕಾಲೇಜು ವಿಚಾರ ಪ್ರಸ್ತಾಪಿಸುತ್ತಲೇ ಇದ್ದಾರೆ.ಅಶೋಕ್ ಕುಮಾರ್ ರೈಯವರ ಪ್ರಯತ್ನಕ್ಕೆ ಇದೀಗ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರೂ ಕೈಜೋಡಿಸಿದ್ದಾರೆ.