ಪುತ್ತೂರು: ಕುಳ ತರವಾಡು ಗದ್ದೆಯಲ್ಲಿ ಪ್ರಿಯದರ್ಶಿನಿ ವಿದ್ಯಾರ್ಥಿಗಳಿಂದ ‘ಬೆನ್ನಿ ಬೇಸಾಯ – ಕುಳತ್ತ ಕುರಲ್’ ಕಾರ್ಯಕ್ರಮ ನಡೆಯಿತು.ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮಕ್ಕಳು ಶಿಕ್ಷಕರು ಪೋಷಕರು ಸೇರಿದಂತೆ ಆಷಾಢದ ಮೊದಲ ಮಳೆಯಲ್ಲಿ ಗದ್ದೆಗೆ ಇಳಿದು ಹಳ್ಳಿಗಾಡಿನ ಸೊಬಗನ್ನು ಸವಿದರು.
ಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಪತಿ ಕಡಂಬಳಿತ್ತಾಯ ಹಾಗೂ ಯಕ್ಷಗಾನ ಹಾಸ್ಯ ಕಲಾವಿದ ಚನಿಯಪ್ಪ ನಾಯ್ಕ ,ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸತೀಶ ರೈ ಕಟ್ಟಾವು, ಕುಳ ತರವಾಡು ಮನೆಯ ಮುಖ್ಯಸ್ಥ ದಾಮೋದರ ಮಣಿಯಾಣಿ ಸೇರಿದಂತೆ ಅತಿಥಿಗಳು ಸಾಂಪ್ರದಾಯಿಕವಾಗಿ ಕಳಸೆಯಲ್ಲಿ ಹಿಂಗಾರ ಅರಳಿಸುವುದರೊಂದಿಗೆ ‘ಬೆನ್ನಿ ಬೇಸಾಯ, ಕುಳತ್ತ- ಕುರಲ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಾಂಪ್ರದಾಯಿಕವಾಗಿ ಹಿರಿಯರು ಗದ್ದೆಗೆ ಕ್ಷೀರ ಸಮರ್ಪಿಸಿದರು.
ಪ್ರಾಚೀನ ವಸ್ತುಪ್ರದರ್ಶನ
ಬಹಳ ಪುರಾತನ ವಸ್ತುಗಳಾದ ಔಷಧಿ ಸಂಗ್ರಹಿಸುತ್ತಿದ್ದ ಕಾಡುಕೋಣದ ಕೊಂಬು, ಮರದ ಪಾದುಕೆ, ನಂದಾದೀಪ ,ವಿಭೂತಿ ಶೇಖರಣೆಯ ಮರದ ಪಾತ್ರೆ, ಭೂತಕ್ಕೆ ಕ್ಷೀರ ಅರ್ಪಿಸುವ ಕಂಚಿನ ಪಾತ್ರೆಗಳು, ರೊಟ್ಟಿ ಮಾಡುತ್ತಿದ್ದ ಮರದ ಪಾತ್ರೆ, ನೊಗ- ನೇಗಿಲು, ಕಳಸೆ, ಸೇರು ಬಳ್ಳ, ಚಾಟಿ, ಕೋವಿ, ಹುಲ್ಲಿನ ಚಾಪೆ ಇವೆ ಮುಂತಾದ ಪ್ರಾಚ್ಯ ವಸ್ತುಗಳು ಮಕ್ಕಳನ್ನು ಗಮನ ಸೆಳೆಯಿತು.
ದಾಮೋದರ ಮಣಿಯಾಣಿ ರೇಷ್ಮಾ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಗೂಟ ಸುತ್ತು, ಹಾಳೆಯಲ್ಲಿ ಎಳೆಯುವುದು, ಹಗ್ಗ ಜಗ್ಗಾ,ಟ ರಿಲೇ ಹಾಗೂ ಓಟದ ಸ್ಪರ್ಧೆ, ಕೆಸರೆರೆಚಾಟ ಓಟ, ಆಟ, ನಾಟ್ಯಗಳ ಸ್ಪರ್ಧೆ ನಡೆಸಲಾಯಿತು. ವಿದ್ಯಾರ್ಥಿನಿ ರಿಧಿ ಸುಶ್ರಾವ್ಯವಾಗಿ ಸಂಧಿ ಪಾಡ್ದನ ಹಾಡಿದಳು.