ಪುತ್ತೂರು: ಕೆಎಸ್‌ಆರ್‌ಟಿಸಿ ಮಜ್ದೂರು ಸಂಘ ಪುತ್ತೂರು ವಿಭಾಗದ ವತಿಯಿಂದ ಪುತ್ತೂರಿನ ಸೈನಿಕ ಸಭಾಂಗಣದಲ್ಲಿ ಬಿಎಂಎಸ್‌ನ 70ನೇ ವರ್ಷದ ಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಹಿರಿಯರು ಕಟ್ಟಿದ ಈ ಸಂಘಟನೆಯ ಧ್ಯೇಯ ಉದ್ಧೇಶಗಳನ್ನು ಅರಿತುಕೊಂಡು ಇನ್ನಷ್ಟು ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಬಿಎಂಎಸ್ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಅನಿಲ್ ಕುಮಾರ್ ಯು. ಮಾತನಾಡಿ ನಮ್ಮ ಸಂಘವನ್ನು ಕಾರ್ಮಿಕ ಬಂಧುಗಳ ಒಳಿತಿಗಾಗಿ ನಮ್ಮ ಹಿರಿಯರು ಪ್ರಾರಂಭ ಮಾಡಿದ್ದಾರೆ. ಶ್ರಮವೇ ಆರಾಧನೆ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡು ಸಂಘ ಕಾರ್ಯ ನಿರ್ವಹಿಸುತ್ತಾ ಬಂದಿದ್ದು 70 ವರ್ಷಕ್ಕೆ ಬಂದು ನಿಂತಿದೆ. ನಮ್ಮ ಸಂಘ ಜಗತ್ತಿನ ಕಾರ್ಮಿಕ ಸಂಘಟನೆಗಳಲ್ಲಿ ಮೊದಲ ಸ್ಥಾನದಲ್ಲಿ ಇದೆ. ದೇಶದಲ್ಲಿರುವ ಎಲ್ಲಾ ಕಾರ್ಮಿಕ ವಲಯಗಳಲ್ಲೂ ನಮ್ಮ ಸಂಘಟನೆ ಮುಂಚೂಣಿಯಲ್ಲಿದೆ. ಕಾರ್ಮಿಕರಿಂದ, ಕಾರ್ಮಿಕರಿಗೋಸ್ಕರ, ಕಾರ್ಮಿಕರಿಗಾಗಿ, ರಾಜಕೀಯ ರಹಿತವಾಗಿ ಇರುವ ದೇಶದ ಏಕೈಕ ಸಂಘ ಎಂದರೆ ಅದು ನಮ್ಮ ಸಂಘ ಎಂದರು. ರಾಷ್ಟ್ರೀಯ ಚಿಂತನೆಯ ಅಡಿಯಲ್ಲಿ ಕಾರ್ಮಿಕ ಬಂಧುಗಳನ್ನು ಒಟ್ಟಿಗೆ ಸೇರಿಸಿ ಅವರ ಸುಖ ದುಃಖಗಳಲ್ಲಿ ಭಾಗಿಯಾಗಿ ಅವರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಂತು ನ್ಯಾಯವನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಕಳೆದ 69 ವರ್ಷಗಳಿಂದ ನಮ್ಮ ಸಂಘ ಮಾಡುತ್ತಿದೆ ಎಂದು ಅನಿಲ್ ಕುಮಾರ್ ಹೇಳಿದರು.ವಿಶ್ವಹಿಂದೂ ಪರಿಷದ್ ಮುಖಂಡ ಮುರಳಿಕೃಷ್ಣ ಹಂಸತಡ್ಕರವರು ಕಾರ್ಮಿಕ ಬಂಧುಗಳ ಜೊತೆ ನಮ್ಮ ಸಂಘಟನೆ ಸದಾ ಇರುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಮಾಜ್ದೂರು ಸಂಘದ ಅಧ್ಯಕ್ಷರಾದ ವಕೀಲ ಶ್ರೀಗಿರೀಶ್ ಮಳಿ, ಕಾರ್ಯದರ್ಶಿ ರಾಮಕೃಷ್ಣ ಭಟ್, ಬಿಎಂಎಸ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್‌ನಾಥ್ ಬೆಳ್ತಂಗಡಿ ಮತ್ತು ಪುತ್ತೂರು ರಿಕ್ಷಾ ಯೂನಿಯನ್ ಅಧ್ಯಕ್ಷ ರಾಜೇಶ್ ಮರೀಲ್ ಉಪಸ್ಥಿತರಿದ್ದರು. ಸಂಘದ ಹಿರಿಯ ಮುಖಂಡ ವೆಂಕಟ್ರಮಣ ಭಟ್ ಸ್ವಾಗತಿಸಿ, ಹಿರಿಯರಾದ ಬಾಲಕೃಷ್ಣ ಡಿ ಪ್ರಸ್ತಾವನೆಗೈದರು. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಮಹಾಬಲ ವಂದಿಸಿದರು.