ಪುತ್ತೂರು: ಕೌಡಿಚ್ಚಾರ್ ಸಿಆರ್‌ಸಿ ಕಾಲೋನಿಯಲ್ಲಿರುವ ರಬ್ಬರ್ ಕಾರ್ಮಿಕರಿಗೆ ಮತದಾನದ ಹಕ್ಕು ಇದ್ದರೂ ಸರಕಾರದ ಅನೇಕ ಸವಲತ್ತುಗಳಿಂದ ಅವರು ವಂಚಿತರಾಗುತ್ತಿದ್ದಾರೆ ಎನ್ನುವ ವಿಚಾರ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಸಿಆರ್‌ಸಿ ಕಾಲೋನಿಯ ಕಾರ್ಮಿಕರಿಗೆ ಕೆಲ ಸವಲತ್ತುಗಳನ್ನು ನೀಡಲು ತಾಂತ್ರಿಕ ಸಮಸ್ಯೆ ಇದೆ, ಕೆಎಫ್‌ಡಿಸಿ ಇಲಾಖೆಯಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದು ಕೆಲವರನ್ನು ಕೆಎಫ್‌ಡಿಸಿ ಕೆಲಸದಿಂದ ಡಿಸ್ಮಿಸ್ ಮಾಡಿದೆ ಎನ್ನುವ ಉತ್ತರ ನಮಗೆ ಲಭಿಸಿದೆ. ಇಂತಹ ಕೆಲವು ಸಮಸ್ಯೆಗಳು ಇರುವಾಗ ಅವರಿಗೆ ಮನೆ ನಿವೇಶನಕ್ಕೂ ಸಮಸ್ಯೆಯುಂಟಾಗಿದೆ. ಹಾಗಾಗಿ ಸದ್ಯಕ್ಕೆ ಅವರು ಇರುವ ಅಡಿಸ್ಥಳವನ್ನು ಅವರಿಗೇ ಬಿಟ್ಟುಕೊಡುವ ಬಗ್ಗೆ ಸಂಬಂಧಪಟ್ಟವರಿಗೆ ಬರೆದುಕೊಳ್ಳುವ ಎಂದು ಹೇಳಿದರು. ಇದಕ್ಕೆ ಸದಸ್ಯ ಹರೀಶ್ ರೈರೇಣುಕಾ ಜಾರತ್ತಾರು ಧ್ವನಿಗೂಡಿಸಿ ಸಿಆರ್‌ಸಿ ಕಾಲನಿ ನಿವಾಸಿಗಳ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಸಿಗುವಂತಾಗಬೇಕು ಎಂದು ಹೇಳಿದರು. ಸದಸ್ಯ ಮೋನಪ್ಪ ಪೂಜಾರಿ ಮಾತನಾಡಿ ಈ ವಿಚಾರದಲ್ಲಿ ರಾಜ್ಯ ಮಾತ್ರವಲ್ಲದೇ ಕೇಂದ್ರ ಸರಕಾರಕ್ಕೂ ಬರೆಯಬೇಕು ಎಂದು ಹೇಳಿದರು. ಬಳಿಕ ನಿರ್ಣಯ ತೆಗೆದುಕೊಳ್ಳಲಾಯಿತು.
ಮರ ತೆರವು ಮಾಡಿದ ಇಲಾಖೆಗೆ ಅಭಿನಂದನೆ:
ನಮ್ಮ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ತೆರವು ಮಾಡಿ ಸಹಕಾರ ನೀಡಿರುವ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಗೆ ಅಭಿನಂದನೆ ಸಲ್ಲಿಸುವುದಾಗಿ ಗ್ರಾ.ಪಂ ಸದಸ್ಯ ಹರೀಶ್ ರೈ ಜಾರತ್ತಾರು ಹೇಳಿದರು. ಅರಿಯಡ್ಕ 2ನೇ ವಾರ್ಡ್ ಸಿಆರ್‌ಸಿಯಲ್ಲಿ ಮರ ತೆರವು ಮಾಡಿದ್ದು ಅದಕ್ಕಾಗಿ ಅರಣ್ಯ ಮತ್ತು ಮೆಸ್ಕಾಂ ಇಲಾಖೆಗೆ ಭಾರತಿ ಅರಿಯಡ್ಕ ಅಭಿನಂದನೆ ಸಲ್ಲಿಸಿದರು.
ಒಂದು ತಿಂಗಳಿನಿಂದ ನೀರಿನ ಸಮಸ್ಯೆ:
ಸದಸ್ಯ ಮೋನಪ್ಪ ಪೂಜಾರಿ ಮಾತನಾಡಿ ಬಾಳೆಕೊಚ್ಚಿ ಹಾಗೂ ಕಾವು ಹಿದಾಯತ್ ನಗರದಲ್ಲಿ ಒಂದು ತಿಂಗಳಿನಿಂದ ನೀರಿಲ್ಲದೆ ಸಮಸ್ಯೆ ಉಂಟಾಗಿದ್ದು ವಾಟರ್‌ಮೆನ್ ಗೇಟ್‌ವಾಲ್‌ನ್ನು ಬಂದ್ ಮಾಡಿದ್ದಾರೆ. ಅಲ್ಲಿನ ಸಮಸ್ಯೆಗೆ ಕೂಡಲೇ ಪರಿಹಾರ ಆಗಬೇಕು ಎಂದು ಆಗ್ರಹಿಸಿದರು.
ಬೀದಿ ದೀಪ ಸಮಸ್ಯೆ ಚರ್ಚೆ:
ಕೌಡಿಚ್ಚಾರ್‌ನಲ್ಲಿ ಬೀದಿ ದೀಪ ಉರಿಯದೇ ಇರುವ ಬಗ್ಗೆ ವಿಚಾರ ಪ್ರಸ್ತಾಪಗೊಂಡಿತು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಮಳೆಗಾಲ ಆದ ಕಾರಣ ದುರಸ್ತಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಗ್ರಾ.ಪಂಗೆ ಹೆಚ್ಚು ಮನೆ ಮಂಜೂರಾತಿಗೆ ಆಗ್ರಹ:
ಅರಿಯಡ್ಕ ಗ್ರಾ.ಪಂಗೆ ಸರಕಾರದಿಂದ 8 ಮನೆ ಮಂಜೂರಾಗಿದೆ ಎನ್ನುವ ಮೌಖಿಕ ಮಾಹಿತಿ ಬಂದಿದೆ ಎಂದು ಪಿಡಿಓ ಸುನಿಲ್ ಎಚ್.ಟಿ ಹೇಳಿದರು. ಗ್ರಾ.ಪಂ ವ್ಯಾಪ್ತಿಗೆ ಬೆರಳೆಣಿಕೆಯ ಮನೆ ಮಂಜೂರಾಗುವ ಬದಲು ಹೆಚ್ಚು ಮನೆಗಳು ಮಂಜೂರು ಮಾಡುವಂತೆ ಸಂಬಂಧಪಟ್ಟವರಿಗೆ ಬರೆಯುವಂತೆ ಸದಸ್ಯರು ಆಗ್ರಹಿಸಿದರು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ 30ರಿಂದ 40 ಮನೆ ನಮ್ಮ ಗ್ರಾ.ಪಂಗೆ ಬೇಕೆಂದು ಬರೆದುಕೊಳ್ಳುವ ಎಂದು ಹೇಳಿದರು. ಸದಸ್ಯ ಮೋನಪ್ಪ ಪೂಜಾರಿ ಧ್ವನಿಗೂಡಿಸಿದರು.
ನೀರಿನ ವಿಚಾರದಲ್ಲಿ ಚರ್ಚೆ:
ಕುಡಿಯುವ ನೀರಿನ ವಿಚಾರದಲ್ಲಿ ಚರ್ಚೆ ನಡೆಯಿತು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ನೀರಿನ ಬಿಲ್ ಸರಿಯಾಗಿ ಕಲೆಕ್ಟ್ ಆಗುವುದಿಲ್ಲ, ಗ್ರಾ.ಪಂ.ಗೂ ಹೊರೆ ಆಗುತ್ತದೆ, ಆದರೂ ನೀರಿನ ವಿಚಾರದಲ್ಲಿ ಸದಸ್ಯರ ಮೇಲೆ ಹೆಚ್ಚಿನ ಆರೋಪ ಬರುತ್ತದೆ ಎಂದು ಹೇಳಿದರು. ಸದಸ್ಯ ಲೋಕೇಶ್ ಚಾಕೋಟೆ ನೀರಿನ ವಿಚಾರವಾಗಿ ಮಾತನಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಸಾವಿತ್ರಿ, ನಾರಾಯಣ ನಾಯ್ಕ ಚಾಕೋಟೆ, ಪುಷ್ಪಲತಾ, ರೇಣುಕಾ, ವಿನೀತಾ ಕೆ.ವಿ, ರಾಜೇಶ್ ಎಚ್, ಉಷಾರೇಖಾ ರೈ, ಹೇಮಾವತಿ ಚಾಕೋಟೆ, ಸೌಮ್ಯ ಬಾಲಸುಬ್ರಹ್ಮಣ್ಯ, ಅಬ್ದುಲ್ ರಹಿಮಾನ್, ಅನಿತಾ ಆಚಾರಿಮೂಲೆ, ಜಯಂತಿ ಪಿ, ಪ್ರವೀಣ ಉಪಸ್ಥಿತರಿದ್ದರು.ಗ್ರಾ.ಪಂ ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.