ಕೌಡಿಚ್ಚಾರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಶೇಖಮಲೆ ಮಸೀದಿಯ ಬಳಿ ಬೃಹತ್ ಗಾತ್ರದ ಮರವೊಂದು ಅಪಾಯಕಾರಿಯಾಗಿದ್ದು ಇದನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಹೆದ್ದಾರಿ ಬದಿಯೇ ಇರುವ ಈ ಮರದ ಸಮೀಪದಲ್ಲೇ ನಾಲ್ಕೈದು ಮನೆ, ಮದರಸವೂ ಇದೆ. ಮರದ ಪಕ್ಕದಲ್ಲೇ ವಿದ್ಯುತ್ ತಂತಿಯೂ ಹಾದು ಹೋಗಿವೆ. ವಾಹನ, ಜನರ ಓಡಾಟವೂ ಇದ್ದು ಗಾಳಿ ಮಳೆಗೆ ಮರ ಬಿದ್ದಲ್ಲಿ ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಗಮನಹರಿಸಿ ತಕ್ಷಣವೇ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.