ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ, ಮುಂಡೂರು ಗ್ರಾ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ, ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಡೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ-15 ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ಜು.27ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು. ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಉದ್ಘಾಟಿಸಿದರು. ಮುಂಡೂರು ಶಾಲಾ ವಿದ್ಯಾರ್ಥಿನಿ ಸಮ್ನ ಸರ್ವಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಂಡೂರು ಗ್ರಾಮದ ವಿವಿಧ ಕ್ಷೇತ್ರದ ಸಾಧಕರಾದ ಮನೋರಮಾ ಹೆಜಮಾಡಿ(ಸಾಹಿತ್ಯ) ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ. ವೆಂಕಟ್ರಮಣ ಶಗ್ರಿತ್ತಾಯ(ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು) ಬಿ. ವಿ. ಸೂರ್ಯ ನಾರಾಯಣ ಎಲಿಯ(ಶಿಕ್ಷಣ ಮತ್ತು ಸಾಹಿತ್ಯ) ವಿನೋದ್ ರೈ ಸೊರಕೆ(ಯಕ್ಷಗಾನ) ಕೆ.ಎಂ ಹನೀಫ್ ರೆಂಜಲಾಡಿ(ಕ್ರೀಡಾ ಕ್ಷೇತ್ರ) ಧರ್ಣಪ್ಪ ಪೂಜಾರಿ(ನಾಟಿ ವೈದ್ಯರು) ಜಯರಾಜ್ ಸುವರ್ಣ ಸೊರಕೆ(ಕೃಷಿ ಮತ್ತು ಸಾಮಾಜಿಕ) ಯೂಸುಫ್ ರೆಂಜಲಾಡಿ(ಪತ್ರಿಕೋದ್ಯಮ) ಕು.ನವ್ಯ ರೆಂಜಲಾಡಿ(ಸಾಹಿತ್ಯ ಮತ್ತು ಕಲೆ) ಇವರನ್ನು ಮುಂಡೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ಸೊರಕೆ ಅಭಿನಂದಿಸಿ ಸನ್ಮಾನಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಂಡೂರು ಗ್ರಾ.ಪಂ ಪಿಡಿಓ ಅಜಿತ್ ಜಿ.ಕೆ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಮುಂಡೂರು ಗ್ರಾ.ಪಂ ಉಪಾಧ್ಯಕ್ಷೆ ಯಶೋಧಾ ಅಜಲಾಡಿ, ಸದಸ್ಯರಾದ ಕರುಣಾಕರ ಗೌಡ ಎಲಿಯ, ಉಮೇಶ್ ಅಂಬಟ, ಮುಂಡೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಂಡೂರು ಶಾಲಾ ಶಿಕ್ಷಕ ಅಬ್ದುಲ್ ಬಶೀರ್ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ರಶ್ಮಿತಾ ಸುರೇಶ್ ಜೋಗಿಬೆಟ್ಟು ಸ್ವಾಗತಿಸಿದರು. ನಿರ್ವಾಹಕಿ ಅಪೂರ್ವ ಕಾಮತ್ ವಂದಿಸಿದರು.