ಉಪ್ಪಿನಂಗಡಿ: ಅವಘಡಗಳ ಮಾಹಿತಿ ದೊರೆತಾಗ ಆಪತ್ಭಾಂಧವರಂತೆ ನೆರವಿಗೆ ಬರುವ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡವು ನೆರೆ ಭೀತಿಯ ಸಂದರ್ಭದಲ್ಲಿ ಉಪ್ಪಿನಂಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದು, ನೆರೆ ಬಂದ ಜು.30ರ ರಾತ್ರಿ ಹಲವರ ಸ್ಥಳಾಂತರ ಮಾಡಿದೆ.
ಎಸ್ಕೆಎಸ್ಸೆಸ್ಸೆಫ್ ವಿಖಾಯ ಉಪ್ಪಿನಂಗಡಿ ವಲಯದಲ್ಲಿ ಸುಮಾರು 200ರಷ್ಟು ಕಾರ್ಯಕರ್ತರಿದ್ದು, ಸುಮಾರು 100ರಷ್ಟು ಕಾರ್ಯಕರ್ತರು ನೆರೆಯ ಸಂದರ್ಭ ಉಪ್ಪಿನಂಗಡಿಯ ಸುತ್ತಮುತ್ತ ಜನರ ನೆರವಿಗೆ ಧಾವಿಸಿದ್ದಾರೆ. ಹಳೆಗೇಟು ಪರಿಸರದಲ್ಲಿ ಮಧ್ಯಾಹ್ನ ಮನೆಗಳು ಜಲಾವೃತಗೊಂಡಾಗ ಈ ತಂಡದ ಸದಸ್ಯರು ಮನೆಯ ಸಾಮಾನು- ಸರಂಜಾಮುಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲು ನೆರವಾಗಿದ್ದಾರೆ. ಮನೆಗಳು ಜಲಾವೃತಗೊಂಡರೂ ಕೆಲ ಮನೆಯ ಸದಸ್ಯರು ಸುರಕ್ಷಿತ ಜಾಗಕ್ಕೆ ತೆರಳದೇ ಮನೆಯಲ್ಲೇ ಇದ್ದು, ರಾತ್ರಿ ಏಳರ ಸುಮಾರಿಗೆ ನೆರೆ ನೀರು ಜಾಸ್ತಿಯಾಗತೊಡಗಿದಾಗ ಮಠ, ಹಳೆಗೇಟುವಿಗೆ ತೆರಳಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡವು ದೋಣಿಯ ಮೂಲಕ ತೆರಳಿ ಅಲ್ಲಿದ್ದ ಸುಮಾರು 25 ಮಂದಿಯನ್ನು ಅವರ ಮನೆಯಿಂದ ಕರೆ ತಂದಿತ್ತು. ಅಲ್ಲದೇ, ಕೂಟೇಲುವಿನ ರಾಯಲ್ ಕಾಂಪ್ಲೆಕ್ಸ್ ಬಳಿಯ ಅಂಗಡಿಗಳಲ್ಲಿನ ಸಾಮಾನು- ಸರಂಜಾಮುಗಳನ್ನು ಸುರಕ್ಷಿತ ಜಾಗದಲ್ಲಿ ಇಡಲು ನೆರವಾಯಿತು. ಈ ತಂಡದಲ್ಲಿ ಒಂದು ಫೈಬರ್ ದೋಣಿ, ಜಾಕೆಟ್, ಟ್ಯೂಬ್, ಹಗ್ಗ, ರೋಪ್, ಮರ ಕಟ್ಟಿಂಗ್ ಮೆಷಿನ್ ಇದ್ದು, 10 ಜನ ನುರಿತ ಈಜುಗಾರರಿದ್ದಾರೆ. ಈ ತಂಡದ ಕಾರ್ಯವು ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿದೆ.

ಎಲ್ಲೆಡೆಯಲ್ಲಿ ನಮ್ಮ ತಂಡವಿದ್ದು, ಇದರ ಕಾರ್ಯಕರ್ತರು ಅಪಘಾತ, ಟ್ರಾಫಿಕ್ ಜಾಮ್, ಸ್ವಚ್ಛತಾ ಕಾರ್ಯ, ಪ್ರಾಕೃತಿಕ ವಿಕೋಪಗಳಾದಾಗ, ನೀರಿಗೆ ಬಿದ್ದಾಗ ರಕ್ಷಣೆಗೆ ಧಾವಿಸುತ್ತಾರೆ. ನಮ್ಮಲ್ಲಿ ನುರಿತ ಈಜುಗಾರರು, ದೋಣಿ ಸಹಿತ ಸಂಪೂರ್ಣ ವ್ಯವಸ್ಥೆಗಳಿವೆ. ಏನಾದರೂ ಅನಾಹುತಗಳಾದಲ್ಲಿ ಜನರು (ಇಸ್ಮಾಯೀಲ್ ತಂಙಳ್- 9591594401, ಫಯಾಜ್ ಯು.ಟಿ.- 9448461244) ಈ ನಂಬರ್ಗಳನ್ನು ಸಂಪರ್ಕಿಸಬಹುದು.
-ಇಸ್ಮಾಯೀಲ್ ತಂಙಳ್
ಕಾರ್ಯಾಧ್ಯಕ್ಷರು
ಎಸ್ಕೆಎಸ್ಸೆಸ್ಸೆಫ್ ವಿಖಾಯ ರಾಜ್ಯ ಘಟಕ