ಉಪ್ಪಿನಂಗಡಿ: 2012 ನೇ ಇಸವಿಯಲ್ಲಿ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಆಭರಣವನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಒಳಗಾಗದೆ ತಲೆ ಮರೆಯಿಸಿಕೊಂಡಿದ್ದ ಮಹಮ್ಮದ್ ಶಾಫಿ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುರತ್ಕಲ್ ಬೊಕ್ಕಬೆಟ್ಟು ಗ್ರಾಮದ ಕೃಷ್ಣಾಪುರ 8 ನೇ ಬ್ಲಾಕ್ ನಿವಾಸಿಯಾಗಿರುವ ಆರೋಪಿ ಮಹಮ್ಮದ್ ಶಾಫಿ 12 ವರ್ಷಗಳ ಹಿಂದೆ ಗೋಳಿತೊಟ್ಟು ಎಂಬಲ್ಲಿ ಬೈಕಿನಲ್ಲಿ ಬಂದು ಪಾದಾಚಾರಿ ಮಹಿಳೆಯ ಚಿನ್ನಾಭರಣವನ್ನು ಎಳೆದೊಯ್ದಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಬಂಧನಕ್ಕೊಳಗಾಗಿದ್ದ ಈತ ಬಳಿಕ ನ್ಯಾಯಾಲಯದಲ್ಲಿನ ವಿಚಾರಣೆಗೆ ಹಾಜರಾಗದೆ ತಲೆ ಮರೆಯಿಸಿಕೊಂಡಿದ್ದ. ಈತನ ಬಗ್ಗೆ ಶೋಧ ಕಾರ್ಯಾಚರಣೆ ನಡೆಸಿದ್ದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕರುಗಳಾದ ಅವಿನಾಶ್ ಹೆಚ್ ಗೌಡ, ರುಕ್ಮ ನಾಯ್ಕ ರವರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳಾದ ಹಿತೋಷ್ ಕುಮಾರ್, ಗಿರೀಶ್ ವಿ. ಅವರನ್ನೊಳಗೊಂಡ ತಂಡ ಆರೋಪಿಯ ಜಾಡು ಹಿಡಿದು ಉಡುಪಿ ಜಿಲ್ಲೆಯ ಅಂಪಾರ್ ಎಂಬಲ್ಲಿ ಗುರುವಾರದಂದು ಪತ್ತೆ ಹಚ್ಚಿ ಬಂಧಿಸಿರುತ್ತಾರೆ.
ಬಂಧಿತ ಆರೋಪಿಯು ಬೆಳ್ತಂಗಡಿ, ಬಂಟ್ವಾಳ, ವಿಟ್ಲ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ ಅಪರಾಧ ಕೃತ್ಯಗಳಲ್ಲಿಯೂ ತಲೆ ಮರೆಯಿಸಿಕೊಂಡಿದ್ದ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.