ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಕ್ಕೆ ರೂ.1.50 ಕೋಟಿ ಲಾಭ- ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಣೆ ಮಾಡಿದ ಅಧ್ಯಕ್ಷ ಚಿದಾನಂದ ಬೈಲಾಡಿ

0

542 ಕೋಟಿಗೂ ಮಿಕ್ಕಿ ವ್ಯವಹಾರ, ರೂ. 1,50,23,901 ಲಾಭ 10 ಶಾಖೆಗಳನ್ನು ಮಾಡುವ ಗುರಿ ಯಶಸ್ವಿ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ವರದಿ ಸಾಲಿನಲ್ಲಿ ರೂ. 1,50,23,901 ಲಾಭ ಗಳಿಸಿದ್ದು, 22 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಂಘ ಉತ್ತಮ ವ್ಯವಹಾರ ನಡೆಸಿದ್ದು 10 ಶಾಖೆಯ ಗುರಿಯನ್ನು ಯಶಸ್ವಿಗೊಳಿಸಿದೆ.

ಪುತ್ತೂರು ಎಪಿಎಂಸಿ ರಸ್ತೆ ಮಣಾಯಿ ಅರ್ಚ್‌ನಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿರುವ, ಶ್ರೀ ಮಹಾಲಿಂಗೇಶ್ವರ ದೇವಳದ ಕಟ್ಟಡದ ಶಾಖೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಕಾಣಿಯೂರು, ಬೆಳ್ಳಾರೆ, ವಿಟ್ಲ ಶಾಖೆಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಂಘದ ಮಹಾಸಭೆಯು ಆ.4ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ರೂ. 542 ಕೋಟಿ ದಾಖಲೆ ವ್ಯವಹಾರ ಮಾಡಿ ಲಾಭಾಂಶದಲ್ಲಿ 1,50,23,901 ಗುರಿ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸಂಘದ ಲಾಭಾಂಶವನ್ನು ಇಲಾಖ ನಿಯಮದಂತೆ ಹಂಚಿದ ಬಳಿಕ ಈ ಭಾರಿ ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡುವುದಾಗಿ ಸಂಘದ ಅವರು ಘೋಷಣೆ ಮಾಡಿದರು. ಈ ಭಾರಿ ಒಟ್ಟು ಡೆಪೊಸಿಟ್ 103 ಕೋಟಿ ಆಗಿದೆ. 99.5 ಕೋಟಿ ಸಾಲ ವಿತರಣೆ ಮಾಡಿದೆ. ಅದರಲ್ಲಿ ಶೇ.99.12 ಸಾಲ‌ ವಸೂಲಾತಿ ಮಾಡಿದೆ. ಕೇಂದ್ರ ಕಚೇರಿ ಸಹಿತ ಶಾಖೆಗಳು, ವಾಹನ ಸೇರಿ ರೂ.2,24,94,560 ಮೌಲ್ಯದ ಆಸ್ತಿಯನ್ನು ಸಂಘ ಹೊಂದಿದೆ. ಮುಂದಿನ ವರ್ಷ ರೂ.1.60 ಕೋಟಿ ಲಾಭದ ನಿರೀಕ್ಷೆ ಇದೆ ಎಂದರು.

5 ವರ್ಷದಲ್ಲಿ ನಿರಂತರ 5 ಶಾಖೆ :
ಸಂಘ ಆರಂಭದ ಬಳಿಕ ಒಂದೊಂದೆ ಶಾಖೆ ಆರಂಭಿಸಿದರು. 7 ವರ್ಷ ಯಾವ ಶಾಖೆ ಮಾಡಲು ಆಗಿಲ್ಲ. ಬಳಿಕ 2020ರಿಂದ ಪ್ರತಿ ವರ್ಷ ಒಂದೊಂದು ಶಾಖೆ ಆರಂಭಿಸಿದ್ದೇವೆ. ಬಂಟ್ವಾಳ, ಬೆಳ್ಳಾರೆಗೂ‌ ಹೋಗಿ ಸಪಲವಾಗಿದ್ದೇವೆ. ಇತ್ತೀಚೆಗೆ 5 ವರ್ಷಗಳಿಂದ ನಿರಂತರ 5 ಶಾಖೆ ಮಾಡಿದ್ದೇವೆ. ಆಡಳಿತ ಮಂಡಳಿ ಸಭೆ, 108 ಸಲಹಾ ಸಮಿತಿ‌ ಸಭೆ, ಶಾಖಾ ಮ್ಯಾನೇಜರ್ ಗಳ ಸಭೆ ಮಾಡುವ ಜೊತೆಗೆ ಸಿಬ್ಬಂದಿಗಳ ಸಹಕಾರದಿಂದ ಸಂಸ್ಥೆ ಬೆಳವಣಿಗೆಯಾಗಿದೆ ಎಂದ ಅವರು ಈಗಾಗಲೇ ಕೇಂದ್ರ‌ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ನೀಡಿದ ಸವಾಲನ್ನು ಸ್ವೀಕರಿಸಿ ರೂ.103 ಕೋಟಿ ಡೆಪೋಸಿಟ್ ಮತ್ತು ರೂ.500 ಕೋಟಿ ವ್ಯವಹಾರ ಮಾಡಿ ಚಿನ್ನದ ನಾಣ್ಯದ ಗೆಲುವನ್ನು ಸಾಧಿಸಿದ್ದೇವೆ. ಇದೀಗ ಹಿರಿಯ ನಿರ್ದೇಶಕ ಮೋಹನ್ ಗೌಡ ಇಡ್ಯಡ್ಕ ಅವರ ಸವಾಲನ್ನು ಕೂಡಾ ಸ್ವೀಕರಿಸಿ 25ನೇ ವರ್ಷಕ್ಕೆ 1 ಸಾವಿರ ಕೋಟಿ ವ್ಯವಹಾರ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

10 ಶಾಖೆಗಳು ಕೂಡಾ ಸ್ವಂತ ಕಟ್ಟಡದಲ್ಲಿ ವ್ಯವಹರಿಸುವಂತಾಗಲಿ:
ಮಾತೃ ಸಂಘದ ಅಧ್ಯಕ್ಷ ರವಿ‌ಮುಂಗ್ಲಿಮನೆ ಅವರು ಮಾತನಾಡಿ 1908ರಲ್ಲೇ ಅವಿಭಜಿತ ಜಿಲ್ಲೆಯಲ್ಲಿ ಸಂಘ ಸ್ಥಾಪನೆಯಾಗಿತ್ತು. ಮುಂದೆ ಬೆಳೆಯುತ್ತಾ ದಕ್ಷಿಣ ಕನ್ನಡ ವಿದ್ಯಾವರ್ಧಕ ಆಯಿತು. ಪುತ್ತೂರಿನಲ್ಲಿ ಗೌಡ ಬೋರ್ಡಿಂಗ್ ಈಗಿನ ಮಹಾಲಿಂಗೇಶ್ವರ ಐಟಿಐ ಆಗಿದೆ. ಈ ಎಲ್ಲಾ ಬೆಳವಣಿಗೆಯನ್ನು ಹಿರಿಯರು ಬ್ರಿಟೀಷರ ಕಾಲದಲ್ಲೇ ಮಾಡಿದ್ದರು. 2002ರಲ್ಲಿ ಸಹಕಾರಿ ಸಂಘ ಸ್ಥಾಪನೆ ಮಾಡಲಾಯಿತು. ಇವತ್ತು ಸಂಘ ರೂ. 1.50 ಕೋಟಿ ಲಾಭ ಗಳಿಸಿರಿವುದು ನಮಗೆ ಹೆಮ್ಮೆಯ ವಿಚಾರ. ಮುಂದೆ ನಮ್ಮ 10 ಶಾಖೆಗಳೂ ಸ್ವಂತಕಟ್ಟಡದಲ್ಲಿ ವ್ಯವಹರಿಸುವಂತಾಗಲಿ ಎಂದರು.

ಸಂಘ 25 ವರ್ಷವಾದಾಗ ರೂ.1 ಸಾವಿರ ಕೋಟಿ ವ್ಯವಹಾರಿಸಬೇಕು:
ಸಂಘದ ಹಿರಿಯ ನಿರ್ದೇಶಕ ಮೋಹನ್ ಗೌಡ ಇಡ್ಯಡ್ಕ ಅವರು ಮಾತನಾಡಿ ಅನೇಕ ಸಲ ಹಿಂದೆ ತಿರುಗಿ ನೋಡಿದಾಗ ನಾವು ಎಷ್ಟು ಮುಂದುವರಿದಿದ್ದೇವೆ ಎಂದು ನೋಡಬೇಕು. ಯಾಕೆಂದರೆ ಸಂಘ ಸ್ಥಾಪನೆ ಮಾಡುವಾಗ ಇದು ಆಗ್ಲಿಕ್ಕೆ ಉಂಟ ಅಂತ ಕೇಳಿದ್ದುಂಟು. ಆದರೆ ನಾವು ಕಿವಿಕೊಡದೆ ಸಂಘವನ್ನು ಮುನ್ನಡೆಸಿದ್ದರಿಂದ ಇವತ್ತು ಉತ್ತಮವಾಗಿ ಮೂಡಿ ಬಂದಿದೆ.
ನಾವು ಪ್ರಾರಂಭದಿಂದ ಇಲ್ಲಿನ ತನಕ ಸಂಘದಿಂದ ಒಂದು ರೂಪಾಯಿ ಪಡೆದವರಲ್ಲ. ನಮ್ಮೊಂದಿಗೆ ಅನೇಕ ಹಿರಿಯರು‌ ಕೂಡಾ ಕೆಲಸ ಮಾಡಿದ್ದಾರೆ. ಇವತ್ತು ಹೊಸಬರಿಗೆ ಬೆಂಬಲ ಕೊಡಬೇಕು, ಪ್ರೋತ್ಸಾಹ ಮಾಡಬೇಕು. ಅದೇ ರೀತಿ ಸಂಘ ಮುಂದೆ 25 ವರ್ಷ ಆಗುವಾಗ ರೂ.1 ಸಾವಿರ ಕೋಟಿ ವ್ಯವಹಾರ ಮಾಡುವ ಉದ್ದೇಶ ಇರಬೇಕು. ಡೆಪೊಸಿಟ್ ಕೂಡಾ ರೂ.250 ಕೋಟಿ ಎರಬೇಕು ಎಂದು ಸಲಹೆ ನೀಡಿದರು.

ಲೆಕ್ಕಪರಿಶೋಧನೆಯಲ್ಲಿ ಸತತ ಎ ತರಗತಿ:
ಕಳೆದ ೯ ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಸತತ ‘ಎ’ ತರಗತಿ ಶ್ರೇಣಿಯನ್ನು ಪಡೆಯುತ್ತಾ ಬಂದಿದೆ. ಪ್ರಸ್ತುತ ಸುಮಾರು 6,938 ಸದಸ್ಯರನ್ನು ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ರೂ. 4.61 ಕೋಟಿ ಪಾಲು ಬಂಡವಾಳ ಹೊಂದಿದೆ. ಒಟ್ಟು ಲಾಭಾಂಶವನ್ನು ನಿಧಿಗಳಿಗೆ ವಿಂಗಡಿಸಲಾಗುವುದು. ಸಲಹಾ ಸಮಿತಿಯವರ ಸಲಹೆ ಹಾಗೂ ಸೂಚನೆಗಳೊಂದಿಗೆ ಆಡಳಿತ ಮಂಡಳಿಯ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಅವಿರತ ಶ್ರಮದಿಂದ, ಸಂಘವು ಉತ್ತಮ ಲಾಭಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಚಿದಾನಂದ ಬೈಲಾಡಿ ತಿಳಿಸಿದರು.

ಸನ್ಮಾನ:
ಒಕ್ಕಲಿಗ ಪತ್ತಿನ ಸಹಕಾರ ಸಂಘ ಆರಂಭದ ಕಾಲದಲ್ಲಿದ್ದು ಲ್ಯಾಂಪ್ಸ್ ಸೊಸೈಟಿಯಲ್ಲಿ ಇದೀಗ ನಿವೃತ್ತಿಗೊಂಡ ಗಣಪಣ್ಣ ಗೌಡ ಮತ್ತು ನೆಲ್ಯಾಡಿ ಸಲಹಾ ಸಮಿತಿ ಹಿರಿಯರಾದ ನೋಣಯ್ಯ ಗೌಡ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯರಾದ ಕುಂಬ್ರ ಶಾಖೆಗೆ ಸಂಬಂಧಿಸಿದ ಬಾಲಪ್ಪ ಗೌಡ ಅವರನ್ನು ಗುರುತಿಸಲಾಯಿತು. ಇದೇ ಸಂದರ್ಭ ಶಾಖೆಗಳ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರನ್ನು ಗುರುತಿಸಲಾಯಿತು.

ಶಾಖೆಗಳ ಸಾಧನೆಗೆ ಪ್ರಮಾಣ ಪತ್ರ:
ಸಂಘದ 10 ಶಾಖೆಗಳ ಸೇವೆಯನ್ನು ಗುರುತಿಸಿ ಗೌರವಿಸಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. 2023-24ನೇ ಸಾಲಿನಲ್ಲಿ ಸತತ ಮೂರನೆ ಬಾರಿ ಅತ್ಯುತ್ತಮ ನಿರ್ವಹಣೆ ಶಾಖೆಯಾಗಿ ಕಡಬ ಶಾಖೆ, ಈ ವರ್ಷದ ಉತ್ತಮ ವ್ಯವಹಾರ ಮಾಡಿದ ಶಾಖೆಯಾಗಿ ಪುತ್ತೂರು ಎಪಿಎಂಸಿ ಶಾಖೆ, ವ್ಯವಹಾರ ಮತ್ತು ವಸೂಲಾತಿಯಲ್ಲಿ ದ್ವಿತೀಯ ಸ್ಥಾನ ಪಡೆದ ಉಪ್ಪಿನಂಗಡಿ ಶಾಖೆ, ಲಾಭಾಂಶದಲ್ಲಿ ದ್ವಿತೀಯ ಸಾಧನೆ ಮಾಡಿದ ನೆಲ್ಯಾಡಿ ಶಾಖೆ, ಕೊಟ್ಟ ಗುರಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಸ್ ಎಮ್ ಟಿ ಶಾಖೆ, ಗುರಿಯಲ್ಲಿ ಉತ್ತಮ ಸಾಧನೆ ಮಾಡಿದ ಕಾಣಿಯೂರು ಶಾಖೆ, ಸತತ ನಾಲ್ಕು ಬಾರಿ‌ ಶೇ.ನೂರು ವಸೂಲಾತಿ ಮಾಡಿದ ಆಲಂಕಾರು ಶಾಖೆ ತೃಪ್ತಿಕರ ಸಾಧನೆ ಮಾಡಿದ ಕುಂಬ್ರ ಶಾಖೆ, ಅಲ್ಪ ಅವಧಿಯಲ್ಲಿ ಉತ್ತಮ‌ ಸಾಧನೆ ಮಾಡಿದ ಬೆಳ್ಳಾರೆ ಶಾಖೆ, ಈಗಾಗಲೇ ಆರಂಭಗೊಂಡ ವಿಟ್ಲ ಶಾಖೆಯ ಕಾರ್ಯಗಳನ್ನು‌ ಗುರುತಿಸಿ ಶಾಖೆಗಳ ಸಲಹಾ ಸಮಿತಿ ಅಧ್ಯಕ್ಷರು, ಶಾಖಾ ವ್ಯವಸ್ಥಾಪಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಹಾಯಧನ ನೆರವು:
ಸಂಘಕ್ಕೆ ಬಂದ ಮನವಿ ಮೇರೆಗೆ ಸಾರ್ವಜನಿಕ‌ ಸವಕಳಿ ನಿಧಿಯ ಮೂಲಕ ಮಡ್ಯಂಗಳದ ಗಿರಿಜ, ಹಳೆನೇರೆಂಕಿಯ ಸುಂದರ ಗೌಡ ಸಹಾಯಧನ‌ ನೆರವು ನಿಡಲಾಯಿತು.
ಎಪಿಎಂಸಿ ಶಾಖಾ ಮ್ಯಾನೇಜರ್ ತೇಜಸ್ವಿನಿ ಮಹಾಸಭೆಯ ತಿಳುವಳಿಕೆ ಪತ್ರ ವಾಚಿಸಿದರು. ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ವಿನೋದ್ ರಾಜ್ ಅವರು 2022-23ನೇ ಸಾಲಿನ ಮಹಾಸಭೆಯ ನಡಾವಳಿಯನ್ನು ವಾಚಿಸಿದರು. ಉಪ್ಪಿನಂಗಡಿ ಶಾಖೆಯ ವ್ಯವಸ್ಥಾಪಕಿ ರೇವತಿ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಚೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಲೆಕ್ಕಪತ್ರ ಮಂಡಿಸಿದರು. ವಿಟ್ಲ ಶಾಖೆಯ ಶಾಖಾಪ್ರಬಂಧಕ ದಿನೇಶ್ ಪಿ ಲೆಕ್ಕಪರಿಶೋಧನಾ ವರದಿ ಮಂಜೂರಾತಿ ಮತ್ತು ನ್ಯೂನ್ಯತೆಗಳ ಸಮಜಾಯಿಸಿಕೆಯನ್ನು ವಾಚಿಸಿದರು. ಕುಂಬ್ರ ಶಾಖೆಯ ಶಾಖಾಪ್ರಬಂದಕ ಹರೀಶ್ ಅವರು ಅಂದಾಜು ಬಜೆಟ್‌ಗಿಂತಲೂ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರಾತಿ ಪತ್ರ ವಾಚಿಸಿದರು. ಕಡಬ ಶಾಖೆಯ ವ್ಯವಸ್ಥಾಪಕ ಶಿವಪ್ರಸಾದ್ ಅಂದಾಜು ಬಜೆಟ್ ವಾಚಿಸಿದರು. ಸಭೆಯಲ್ಲಿ ಸಂಘದ ಮಾಜಿ ನಿರ್ದೇಶಕರನ್ನು ಮತ್ತು ಮಾರ್ಗದರ್ಶಕರನ್ನು ಗೌರವಿಸಲಾಯಿತು.

ನಿಶ್ಚಿತ ರೇವತಿ, ಅಶ್ವಿತ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ ಗೌಡ ಸ್ವಾಗತಿಸಿ, ನಿರ್ದೇಶಕ ರಾಮಕೃಷ್ಣ ಗೌಡ ಕರ್ಮಲ ವಂದಿಸಿದರು. ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕೆ., ಸತೀಶ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೋಕೇಶ್ ಸಿ.ಎಚ್, ಸುಪ್ರಿತಾ, ತೇಜಸ್ವಿನಿ ಶೇಖರ ಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಆಂತರಿಕ ಲೆಕ್ಕಪರಿಶೋಧಕ ಧರ್ಮರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಅವರು ಸಂಘ ಸಾಧನೆಗಾಗಿ ಎಸ್ ಸಿ ಡಿಸಿಸಿ ಬ್ಯಾಂಕ್ ನಿಂದ ಚಿನ್ನದ ಪದಕ ಪಡೆಯುವ ಸಂದರ್ಭ ಸಂಘದ ಅಧ್ಯಕ್ಷರಿಗೆ ಶುಭಹಾರೈಸಿದರು. ಇತರ ಸದಸ್ಯರು ಸಂಘದ ಎಲ್ಲಾ ವರದಿಗಳಿಗೆ ಅನುಮೋದನೆ ನೀಡಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಸ್ಪಂದನಾ ಸೊಸೈಟಿ ಅಧ್ಯಕ್ಷ ಎಸ್.ಆರ್ ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ, ಉಪಾಧ್ಯಕ್ಷ ಚೇತನ್ ಅನೆಗುಂಡಿ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here