-ಆಟಿ ತಿಂಗಳ ಆಹಾರ ಪೋಷಣಾಯುಕ್ತ ಆಹಾರ-ಸಿಂದು ವಿ.ಜಿ
-ಕರ್ನಾಟಕದಲ್ಲಿ ವೈಟ್ಲಿಪ್ಟಿಂಗ್ ಆರಂಭವಾಗಿರುವುದೇ ಪುತ್ತೂರಿನಲ್ಲಿ-ಡಾ.ಎಲ್ಯಾಸ್ ಪಿಂಟೊ
ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ನಲ್ಲಿ ಜಿಮ್ದ ಕಲೊಟ್ಟು ಆಟಿದ ನೆನಪು ಎಂಬ ಹೆಸರಿನಲ್ಲಿ ‘ಆಟಿಡ್ ಒಂಜಿ ದಿನ ಹಾಗೂ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವು ಆ.4ರಂದು ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿತು.
ಆಟಿ ತಿಂಗಳ ಆಹಾರ ಪೋಷಣಾಯುಕ್ತ ಆಹಾರ-ಸಿಂದು ವಿ.ಜಿ:
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಸೆಂಟ್ರಲ್(ಸಿಬಿಎಸ್ಇ) ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಿಂಧು ವಿ.ಜಿರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳು ಎಂದರೆ ಕಷ್ಟದ ತಿಂಗಳು. ಹೊರಗಡೆ ಹೋಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಹಿಂದಿನ ಹಿರಿಯರು ಮನೆಯ ಪರಿಸರದಲ್ಲಿ ಸಿಗುವ ವಸ್ತುಗಳನ್ನು ಅಹಾರವನ್ನಾಗಿ ಸೇವಿಸುತ್ತಿದ್ದರು. ಯಾಕೆಂದರೆ ಅಂದು ಅವರು ಸೇವಿಸುತ್ತಿದ್ದ ಆಹಾರವು ದೇಹಕ್ಕೆ ಒಳ್ಳೆಯ ಪೋಷಣೆ ಕೊಡುವ ಆಹಾರವಾಗಿತ್ತು ಮಾತ್ರವಲ್ಲ ಹಿಂದಿನ ಹಿರಿಯರು ಸೇವಿಸುತ್ತಿದ್ದ ತಿಂಡಿ-ತಿನಸುಗಳು ಉತ್ತಮ ಪೋಷಣಾಯುಕ್ತ ಆಹಾರಗಳು ಎಂದು ವೈಜ್ಞಾನಿಕವಾಗಿ ದೃಢವಾಗಿದ್ದವು. ಇಂದು ನಾವು ಸೇವಿಸುವ ಝಂಕ್ ಫುಡ್ ನಮ್ಮ ಆರೋಗ್ಯವನ್ನು ಕೆಡುತ್ತದೆ ಮಾತ್ರವಲ್ಲ ಮಾನಸಿಕವಾಗಿ, ದೈಹಿಕವಾಗಿ ವಿನಾಶದತ್ತ ಕೊಂಡೊಯ್ಯುತ್ತದೆ ಎಂದರು.
ಕರ್ನಾಟಕದಲ್ಲಿ ವೈಟ್ಲಿಪ್ಟಿಂಗ್ ಆರಂಭವಾಗಿರುವುದೇ ಪುತ್ತೂರಿನಲ್ಲಿ-ಡಾ.ಎಲ್ಯಾಸ್ ಪಿಂಟೊ:
ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊರವರು ಮಾತನಾಡಿ, ತುಳುನಾಡಿನ ಆಟಿ ಸಂಸ್ಕೃತಿಗೂ ಜಿಮ್ಗೂ ಅವಿನಾಭಾವ ಸಂಬಂಧವಿದೆ. ಆಗಸ್ಟ್ ತಿಂಗಳಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಚಟುವಟಿಕೆಗಳು ನಡೆಸುವುದು ಅಸಾಧ್ಯವಾಗಿದ್ದರೂ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯ ಕಂಡುಕೊಳ್ಳಲು ಜಿಮ್ನ್ನು ಆಶ್ರಯಿಸಬೇಕಾಗುತ್ತದೆ. ವ್ಯಾಯಾಮದ ಕೇಂದ್ರವೆನಿಸಿದ ಜಿಮ್ ಸೆಂಟರ್ಗಳು ವ್ಯಕ್ತಿಯನ್ನು ಒಳ್ಳೆಯ ಕ್ರೀಡಾಪಟುವಾಗಲು ಕಾರಣವೆನಿಸುವುದು ಅದರಲ್ಲೂ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಒಂದು ಹೆಜ್ಜೆ ಮುಂದೆ ಹೋಗಿ ಸಾಧಕ ಕ್ರೀಡಾಪಟುಗಳನ್ನು ಗುರುತಿಸಿ ಸನ್ಮಾನಿಸಿ ಮುಂದೆ ಮತ್ತೂ ಉತ್ತಮ ಸಾಧಕರಾಗಬೇಕೆಂದು ಪ್ರೇರೇಪಿಸುತ್ತದೆ ಎಂದ ಅವರು ಕರ್ನಾಟಕದಲ್ಲಿ ವೈಟ್ಲಿಪ್ಟಿಂಗ್ ಆರಂಭವಾಗಿರುವುದೇ ಪುತ್ತೂರಿನಲ್ಲಿ ಮಾತ್ರವಲ್ಲ ಅನೇಕ ಪ್ರತಿಭಾವಂತರು ವೈಟ್ಲಿಪ್ಟಿಂಗ್ನಲ್ಲಿ ಮಿಂಚಿದ್ದಾರೆ ಎಂದರು.
ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ನ ಮಹಿಳಾ ತರಬೇತುದಾರೆ ಶರಣ್ಯ ಸ್ವಾಗತಿಸಿ, ಚಿತ್ರನಟ ಸಂದೀಪ್ ಪೂಜಾರಿ ವಂದಿಸಿದರು. ಸೆಂಟರ್ನ ನಿರ್ದೇಶಕರಾದ ಮನೋಜ್ ಡಾಯಸ್, ನಿಶಾ ಮಸ್ಕರೇನ್ಹಸ್, ಮುಖ್ಯ ತರಬೇತುದಾರ ನವನೀತ್ ಬಜಾಜ್, ತರಬೇತುದಾರೆ ಧನುಷ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜಿಮ್ ತರಬೇತುದಾರ ನವೀನ್ ಕುಲಾಲ್ ಪುತ್ತೂರುರವರು ಆಟಿ ತಿಂಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಶಾಫಿ ಪರ್ಪುಂಜ ಸನ್ಮಾನಿತರ ಪರಿಚಯ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಜಿಮ್ ಸದಸ್ಯರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮನೋರಂಜನಾ ಕಾರ್ಯಕ್ರಮದ ಬಳಿಕ ಜಿಮ್ ಸದಸ್ಯರಿಂದ ವಿವಿಧ ರೀತಿಯ ಖಾದ್ಯಗಳ ಭೋಜನ ನೆರವೇರಲ್ಪಟ್ಟಿತು.
ಸಾಧಕರಿಗೆ ಸನ್ಮಾನ..
ಜಿಮ್ ಸದಸ್ಯರಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ, ಸಿನಿಪ್ರಪಂಚದಲ್ಲಿ, ಅಗ್ನಿವೀರ್ನಲ್ಲಿ ಸಾಧನೆಗೈದ ಬ್ಯೂಲ ಪಿ.ಟಿ, ಸ್ಪಂದನಾ ಕೆ, ಅಭಿ ರಾಮಚಂದ್ರ, ಧ್ರುವ್ ಜಗದೀಶ್ ಭಂಡಾರಿ, ಶಬರೀಶ್ ರೈ, ಯತೀಶ್ ಕೆ, ಮೊಹಮದ್ ಮುನಾಫ್ ರೆಹಮಾನ್, ಭುವನ್ ರಾಮ್ ಜಗದೀಶ್ ಭಂಡಾರಿ(ವೈಟ್ಲಿಪ್ಟಿಂಗ್), ಸನ್ಮಿತ್, ಕಾರ್ತಿಕ್ ಆರ್(ಹರ್ಡಲ್ಸ್), ಸಮಂತ್(ಅಗ್ನಿವೀರ್), ಭವಿಷ್(ಅಗ್ನಿಪಥ್), ಸ್ವೀಕೃತ್ ಆನಂದ್(ಲೈಫ್ ಸೇವಿಂಗ್ ಈಜು), ಧವನ್(ಪವರ್ ಲಿಪ್ಟಿಂಗ್), ಸಂದೀಪ್ ಪೂಜಾರಿ(ಧರ್ಮದೈವ ಚಿತ್ರದ ನೆಗೆಟಿವ್ ರೋಲ್), ಧನುಷ(ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ), ತ್ರಿಶೂಲ್ ಗೌಡ(ಲೈಫ್ ಸೇವಿಂಗ್ ಈಜು), ಅಭೀಷ್(ತ್ರಿಪಲ್ ಜಂಪ್), ಗುರುಪ್ರಸಾದ್, ಪುನೀತ್(ಖೋಖೊ)ರವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಜಿಮ್ ಸಲಕರಣೆಗಳೂ ಪೂಜನೀಯ..
ಹಿಂದೂಗಳಿಗೆ ದೇವಸ್ಥಾನ, ಮುಸ್ಲಿಮರಿಗೆ ಮಸೀದಿ, ಕ್ರಿಶ್ಚಿಯನ್ನರಿಗೆ ಚರ್ಚ್ ಹೇಗೆ ಪವಿತ್ರ ಮಂದಿರವೋ ಫಿಟ್ನೆಸ್ ಪ್ರಿಯರಿಗೆ ಜಿಮ್ ಪವಿತ್ರ ಸ್ಥಳವಾಗಿದೆ. ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಹೇಗೆ ದೇವರುಗಳು ನೆಲೆಸಿದ್ದಾರೋ ಹಾಗೆಯೇ ಜಿಮ್ನಲ್ಲಿ ನಾವು ಬಳಸುವ ಸಲಕರಣೆಗಳು ಕೂಡ ದೇವತೆಗಳಿದ್ದಂತೆ. ದೇವರನ್ನು ಹೇಗೆ ಭಕ್ತಿಯಿಂದ ಪೂಜಿಸಲ್ಪಡುತ್ತದೆಯೋ ಹಾಗೆಯೇ ನಮ್ಮ ದೇಹವನ್ನು ಸುಸ್ಥಿತಿಗೆ ತರುವ ಜಿಮ್ ಸಲಕರಣೆಗಳನ್ನೂ ಕೂಡ ಭಕ್ತಿಯಿಂದ ಪೂಜಿಸಲ್ಪಡಬೇಕಾಗುತ್ತದೆ. ಎರಡು ವರ್ಷದ ಹಿಂದೆ ಆರಂಭಗೊಂಡ ಈ ಕ್ರಿಸ್ಟೋಫರ್ ಜಿಮ್ ಸೆಂಟರ್ ಶಿಸ್ತುಬದ್ಧ ಸದಸ್ಯರಿಂದ ಒಳ್ಳೆಯ ಹೆಸರು ಹೊಂದಿದೆ.
-ನವನೀತ್ ಬಜಾಜ್, ಮುಖ್ಯ ತರಬೇತುದಾರರು, ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್