ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ- ಪರಿಶೀಲನೆ

0

ಅನಾಹುತ ನಡೆದ ತಕ್ಷಣ ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಬೇಕು; ಶಾಸಕರ ಸೂಚನೆ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪೃಕೃತಿ ವಿಕೋಪದಿಂದ ಯಾವುದೇ ಅನಾಹುತ ನಡೆದರೂ ಅದು ಸಣ್ಣದಾಗಿರಲಿ, ದೊಡ್ಡದಾಗಿರಲಿ ಅಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಅದಿಕಾರಿಗಳು ತಕ್ಷಣ ವರದಿ ಸಲ್ಲಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈಯವರು ಸೂಚನೆಯನ್ನು ನೀಡಿದ್ದಾರೆ.ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ನಗರಸಭಾ ಅಧಿಕಾರಿಗಳು , ಹಾಗೂ ಗ್ರಾಮಾಂತಗರ ಭಾಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಈ ವರದಿಯನ್ನು ಸಲ್ಲಿಸಬೇಕು ಯಾವುದೇ ನೆಪ ಹೇಳಿ ಜಾರಿಕೊಳ್ಳುವಂತಿಲ್ಲ ಎಂದು ಶಾಸಕರು ಖಡಕ್ ಸೂಚನೆಯನ್ನು ನೀಡಿದ್ದಾರೆ.


ಭಾನುವಾರದಂದು ಶಾಸಕರು ಆರ್ಯಾಪು ಗ್ರಾಮದ ಕಲ್ಕಟ್ಟ ಎಂಬಲ್ಲಿ ಸಾರ್ವಜನಿಕ ರಸ್ತೆ ಕುಸಿತಕ್ಕೊಳಗಾದ ಪ್ರದೇಶಕ್ಕೆ ಭೇಟಿ ನೀಡಿದರು. ರಸ್ತೆ ಕುಸಿತದಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಸೇತುವೆಗೆ ತಡೆಗೋಡೆ ನಿರ್ಮಾಣವಾಗುವ ತನಕ ಪಕ್ಕದ ಜಾಗದ ಮಾಲಿಕರಲ್ಲಿ ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಶಾಸಕರು ಮನವಿ ಮಾಡಿದ್ದು ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ.


ಬೆಟ್ಟಂಪಾಡಿ ಗ್ರಾಮದ ಕೀಲಂಪಾಡಿಯಲ್ಲಿ ರಸ್ತೆ ಬದಿಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದು ಬಿದ್ದಿದ್ದು ಅಲ್ಲಿಗೆ ತೆರಳಿದ ಶಾಸಕರು ಸ್ಥಳ ವೀಕ್ಷಣೆ ಮಾಡಿದರು. ಇಲ್ಲಿ ತಡೆ ಗೋಡೆ ನಿರ್ಮಾಣಕ್ಕೆ ಸಮಯವಕಾಶ ಬೇಕಾಗಿದ್ದು ಅಲ್ಲಿಯ ತನಕ ರಸ್ತೆಯ ಪಕ್ಕದ ಧರೆಯನ್ನು ತೆಗೆದು ಅಗಲೀಕರಣ ಮಾಡಿ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡುವಂತೆ ಇಲಾಖೆಗೆ ಸೂಚನೆಯನ್ನು ನೀಡಿದರು.

ಕಂಬಳಬೆಟ್ಟಿನಲ್ಲಿ ಮನೆ ಸಂಪೂರ್ಣ ಕುಸಿತ,ಗ್ರಾಮ ಆಡಳಿತಾಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಶಾಸಕರು
ಕಂಬಳಬೆಟ್ಟು ಸಾಂತಿನಗರ ಎಂಬಲ್ಲಿ ನಿಯಾಝ್ ಎಂಬವರ ಮನೆ ಮಳೆಗೆ ಕುಸಿತವಾಗಿದೆ. ಮಣ್ಣಿನ ಇಟ್ಟಿಗೆಯಿಂದ ನಿರ್ಮಾಣ ಮಾಡಲಾದ ಈ ಮನೆಯ ಒಂದು ಭಾಗ ಜರಿದು ಬಿದ್ದಿದ್ದು ಇಡೀ ಮನೆಗೆ ಹಾನಿಯಾಗಿದೆ. ಮನೆಯಲ್ಲಿದ್ದವರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಭೇಟಿ ನೀಡಿಲ್ಲ ಎಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರು ಗ್ರಾಮ ಆಡಳಿತಾಧಿಕಾರಿಗೆ ಕರೆ ಮಾಡಿ ತರಾಟೆಗೆ ಎತ್ತಿಕೊಂಡು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಶಾಸಕರು ಸೂಚನೆಯನ್ನು ನೀಡಿದರು.

ಕುಡಿಯುವ ನೀರಿನ ಟ್ಯಾಂಕ್ ಅಪಾಯದಲ್ಲಿ
ಕೇಪು ಗ್ರಾಮದ ಕುದ್ದುಪದವು ಸಮೀಪದ ಮರಕ್ಕಿಣಿ ಎಂಬಲ್ಲಿ ಗುಡ್ಡ ಕುಸಿದು ಗುಡ್ಡದ ಮೇಲೆ ಇರುವ ಸುಮಾರು 50 ಸಾವಿರ ಲೀಟರ್ ನ ಕುಡಿಯುವ ನೀರಿನ ಟ್ಯಾಂಕ್ ಕುಸಿಯುವ ಭೀತಿಯಲ್ಲಿದೆ. ಟ್ಯಾಂಕ್ ಕುಸಿದಲ್ಲಿ ಪಕ್ಕದಲ್ಲಿರುವ ನಾಲ್ಕು ಮನೆಗಳಿಗೆ ಅಪಾಯದ ಭೀತಿ ಎದುರಾಗಿದೆ.ಟ್ಯಾಂಕ್‌ನಲ್ಲಿ ನೀರು ಖಾಲಿ ಮಾಡುವಂತೆ ಮತ್ತು ನೀರು ತುಂಬಿಸದಂತೆ ಸೂಚನೆಯನ್ನು ನೀಡಿದ್ದಾರೆ.

ಪುಣಚದಲ್ಲಿ ಗುಡ್ಡ ಕುಸಿತ, ಮನೆ ಅಪಾಯದಲ್ಲಿ
ಪುಣಚ ಗ್ರಾಮದ ಬಾಳೆಕುಮೇರಿಯಲ್ಲಿ ತೀರ್ಥಾನಂದ ಪುಣಚ ಎಂಬವರ ಮನೆಯ ಮುಂಭಾಗದಲ್ಲಿ ಭಾರೀ ಗುಡ್ಡ ಕುಸಿತವಾಗಿದ್ದು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮನೆ ಮಾಲಿಕರ ಜೊತೆ ಮಾತುಕತೆ ನಡೆಸಿ ಈ ಮನೆ ಅತ್ಯಂತ ಅಪಾಯದಲ್ಲಿದ್ದು ಮನೆಯಲ್ಲಿ ಸದ್ಯಕ್ಕೆ ವಾಸ್ತವ್ಯ ಮಾಡದಂತೆ ಸೂಚಿಸಿದರು. ಕಳೆದ ಎರಡು ದಿನಗಳ ಹಿಂದೆ ಗುಡ್ಡ ಕುಸಿತವಾಗಿದೆ ಆ ಬಳಿಕ ವಾಸ್ತವ್ಯವನ್ನು ಬದಲಾಯಿಸಿದ್ದೇನೆ ಎಂದು ಶಾಸಕರಲ್ಲಿ ತಿಳಿಸಿದರು. ಬಳಿಕ ತಹಶಿಲ್ದಾರ್ ಜೊತೆ ಮಾತುಕತೆ ನಡೆಸಿದ ಶಾಸಕರು ತೀರ್ಥಾನಂದ ಪುಣಚ ಅವರು ವಾಸ ಮಾಡುತ್ತಿರುವ ಈಗಿನ ಮನೆ ಮತ್ತು ಜಾಗ ವಾಸ್ತವ್ಯಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಿದರು.


ಈ ಸಂಧರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ , ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ , ಪಕ್ಷದ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ಸಿರಾಜ್ ಮಣಿಲ, ಸೇರಿದಂತೆ ಹಲವು ಮಂದಿ ಮುಖಂಢರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here