ಒಡ್ಯ ಶಾಲೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರಕ್ಕೆ ‘ಚಾಲನೆ’

0

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್ ಶಿಬಿರವು ದಾರಿದೀಪ: ಡಾ. ದೀಪಕ್ ರೈ

ಪುತ್ತೂರು: ವಿದ್ಯಾರ್ಥಿ ಜೀವನ ಅಮೂಲ್ಯವಾದುದಾಗಿದ್ದು, ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಇಂದಿನ ಯುವಜನತೆ ಮುಂದಾಗಬೇಕಿದೆ. ಅದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದೆ ಎಂದು ಪುತ್ತೂರು ತಾಲೂಕು ಅರೋಗ್ಯಧಿಕಾರಿ ಡಾ. ದೀಪಕ್ ರೈ ಹೇಳಿದರು.

ಅವರು ಒಡ್ಯದ ಸ. ಉ. ಹಿ. ಪ್ರಾಥಮಿಕ ಶಾಲೆಯಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ-2023-24ನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಹಬಾಳ್ವೆ ಮತ್ತು ಶ್ರಮದಾನದಂತಹ ಮಹತ್ವದ ಚಿಂತನೆಗಳನ್ನು ಬೆಳೆಸುವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವ ಜೊತೆಗೆ ಸಭಾಕಂಪನವನ್ನು ಹೋಗಲಾಡಿಸುವ, ಹಲವಾರು ಪ್ರತಿಭೆಗಳನ್ನು ಅನಾವರಣಗೊಳಿಸುವ ಒಂದು ಅದ್ಬುತ ವೇದಿಕೆಯಾಗಿದೆ ಎಂದರು. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ. ಎಂ. ಮಾತನಾಡಿ, ಶಿಬಿರದ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಭಾರತದ ಸಮಗ್ರ ಅಂಶಗಳನ್ನು ಸೂಕ್ಷ್ಮವಾಗಿ ಅರಿತು ಮುನ್ನಡೆಯುವುದು ತುರ್ತು ಅಗತ್ಯವಾಗಿದೆ. ಅದರಲ್ಲಿಯೂ ಕಾನೂನು ವಿದ್ಯಾರ್ಥಿಗಳಿಗೆ ಸಮಾಜದ ಆಗುಹೋಗುಗಳ ಪರಿಚಯ ಹಾಗೂ ಅದನ್ನು ನಿಭಾಯಿಸುವ ಚಾಕಚಾಕ್ಯತೆಯನ್ನು ಇಂತಹ ಏಳು ದಿನಗಳ ಶಿಬಿರದಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಪಾಣಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಮೈಮನುತ್ತುಲ್ ಮೆಹೆರಾ, ಒಡ್ಯದ ಸ. ಉ. ಹಿ. ಪ್ರಾಥಮಿಕ ಶಾಲೆಯ ಮಾಜಿ ಎಸ್.ಡಿ. ಎಂ. ಸಿ. ಅಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ., ಒಡ್ಯದ ಸ. ಉ. ಹಿ. ಪ್ರಾಥಮಿಕ ಶಾಲೆಯ ಶಿಕ್ಷಕಿ ಸ್ವರ್ಣಲತಾ ಮಾತನಾಡಿ ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಒಡ್ಯದ ಸ. ಉ. ಹಿ. ಪ್ರಾಥಮಿಕ ಶಾಲೆಯ ಎಸ್.ಡಿ. ಎಂ. ಸಿ. ಅಧ್ಯಕ್ಷರಾದ ಪ್ರೇಮ ಪಡ್ಯಂಬೆಟ್ಟು, ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀರಕ್ಷಾ, ಎನ್. ಎಸ್. ಎಸ್. ಘಟಕದ ವಿದ್ಯಾರ್ಥಿ ನಾಯಕಿಯರಾದ ಅಕ್ಷತಾ ಮತ್ತು ವರ್ಷಾ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಊರಿನ ಗಣ್ಯರು, ಒಡ್ಯ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಎನ್. ಎಸ್. ಎಸ್. ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಸ್ವಯಂಸೇವಕರನ್ನು ನಾಲ್ಕು ತಂಡಗಳಾನ್ನಾಗಿ ವಿಭಾಗಿಸಿ, ಏಳು ದಿನಗಳ ಕಾಲ ನಡೆಯಲಿರುವ ಶಿಬಿರದ ನಿಯಮಗಳನ್ನು ತಿಳಿಸಿ ಸ್ವಯಂಸೇವಕರ ಕರ್ತವ್ಯಗಳನ್ನು ವಿವರಿಸಲಾಯಿತು.

LEAVE A REPLY

Please enter your comment!
Please enter your name here