ಸುಳ್ಯಪದವು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಮತ್ತು ಪತ್ರಕರ್ತ ಮಾಧವ ನಾಯಕ್ ಸುಳ್ಯ ಪದವುರವರು ಉದ್ಘಾಟಿಸಿ ಆಟಿಡೊಂಜಿ ದಿನದ ಶುಭಾಶಯ ಹಾರೈಸಿದರು. ದೈವನರ್ತಕ ಹಾಗೂ ಉಪನ್ಯಾಸಕ ಡಾ. ರವೀಶ್ ಪಡುಮಲೆ ಮಾತನಾಡಿ ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಬಹಳಷ್ಟು ಕಷ್ಟದಿಂದ ಜೀವನ ನಡೆಸುತ್ತಿದ್ದರು, ನಾವಿಂದು ಆಟಿಡೊಂಜಿ ದಿನ, ಕೆಸರಡೊಂಜಿ ದಿನವನ್ನಾಗಿ ಆಚರಿಸುತ್ತಿದ್ದೇವೆ. ವರ್ತಮಾನ ಕಾಲದಲ್ಲಿರುವ ಜಾತೀಯತೆ, ಮೇಲ್ವರ್ಗ ಕೇಳವರ್ಗ ಅನ್ನುವ ಭೇದ ಭಾವಗಳನ್ನೆಲ್ಲ ಬಿಟ್ಟು ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಿ ಬಾಳಿ ಒಂದು ಸದೃಢ ಸಮಾಜವನ್ನು ಕಟ್ಟುವಲ್ಲಿ ಜೊತೆಯಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ರವೀಶ್ ಪಡುಮಲೆ ಇವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ಮಹದೇವ ಕೊಲ್ಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಶಿಕ್ಷಕರಕ್ಷಕ ಸಂಘದ ಪ್ರಕಾಶ್ ಮರದ ಮೂಲೆ, ಚನ್ನಪ್ಪ ನಾಯ್ಕ ಉಪಸ್ಥಿತರಿದ್ದರು.
ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಉಪಯೋಗಿಸುವ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕರೆಲ್ಲರೂ ಸಹ ಭೋಜನ ನಡೆಯಿತು. ಮುಖ್ಯೋಪಾಧ್ಯಯ ಸುಖೇಶ ಸ್ವಾಗತಿಸಿ, ಶಿಕ್ಷಕಿ ಪ್ರಶಾಂತಿ ನಿರೂಪಣೆ ಮಾಡಿದರು.