ಉಪ್ಪಿನಂಗಡಿ: ಹೊಂಡ-ಗುಂಡಿಗಳಿಂದ ಕೂಡಿ ಕೆಸರುಮಯವಾಗಿದ್ದ 34 ನೆಕ್ಕಿಲಾಡಿ ಗ್ರಾಮದ ದರ್ಬೆ ರಸ್ತೆಗೆ ಖಾಸಗಿ ವ್ಯಕ್ತಿಯೋರ್ವರು ಸಿಮೆಂಟ್ ಮಿಶ್ರಿತ ಜಲ್ಲಿ ಪುಡಿಯನ್ನು ಹಾಕಿ ಅಲ್ಲಿದ್ದ ಹೊಂಡ-ಗುಂಡಿಗಳನ್ನು ಮುಚ್ಚಿದ್ದಾರೆ.
ಮೈಂದನಡ್ಕದ ಸಮೀಪ ದರ್ಬೆ ರಸ್ತೆಯಲ್ಲಿ ಹೊಂಡ-ಗುಂಡಿಗಳು ಉಂಟಾಗಿತ್ತಲ್ಲದೆ, ರಸ್ತೆಯು ಕೆಸರುಮಯವಾಗಿತ್ತು. ಇದರಿಂದ ಇಲ್ಲಿ ಸಂಚರಿಸುವವರು ತೊಂದರೆ ಪಡಬೇಕಾದ ಸ್ಥಿತಿಯಿತ್ತು.
ವಾಹನ ಸವಾರರ ಸಂಕಷ್ಟ ಕಂಡ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಅವರು ರಸ್ತೆಗೆ ಸಿಮೆಂಟ್ ಮಿಶ್ರಿತ ಜಲ್ಲಿ ಪುಡಿಯನ್ನು ಹಾಕಿ ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚುವಂತೆ ಅಶ್ರಫ್ ಎಂಬವರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಅಶ್ರಫ್ ಅವರು ಸಿಮೆಂಟ್ ಮಿಶ್ರಿತ ಜಲ್ಲಿ ಪುಡಿಯನ್ನು ಹಾಕಿ ಅಲ್ಲಿದ್ದ ಹೊಂಡ-ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ಈ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈಯವರು 30 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಆದರೆ ಮಳೆಯ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗುವಂತಾಗಿದೆ.ಈ ಸಂದರ್ಭ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್, ಮತ್ತಿತರ ಸ್ಥಳೀಯರು ಉಪಸ್ಥಿತರಿದ್ದರು.